ಕೋವಿಡ್ ಲಸಿಕೆ : ಡೋಸ್‌ಗಳ ನಡುವಿನ ಅಂತರಕ್ಕೆ ಭಾರತೀಯ ವಿಜ್ಞಾನಿಗಳ ಬೆಂಬಲ ಇರಲಿಲ್ಲವೆ?

ಲಸಿಕೆ ಡೋಸ್‌ಗಳ ಅಂತರ ಹೆಚ್ಚಿಸಿದಷ್ಟು  ಅಪಾಯವೂ ಹೆಚ್ಚು

 

ನವದೆಹಲಿ : ಕೊರೊನಾ ಲಸಿಕೆಯ ಡೋಸ್‌ಗಳ ನಡುವಿನ ಅಂತರ ಹೆಚ್ಚಳಕ್ಕೆ ವಿಜ್ಞಾನಿಗಳ ಒಪ್ಪಿಗೆ ಇರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ರಾಯ್ಟರ್ಸ್ ವರದಿ ನಿಜಾಂಶವನ್ನು ಬಹಿರಂಗಗೊಳಿಸಿದೆ.

ಲಸಿಕೆ ಡೋಸ್ ಗಳ ನಡುವಿನ ಅಂತರವನ್ನು 6-8 ವಾರಗಳಿಂದ 12-16 ವಾರಗಳಿಗೆ ಮೇ.13 ರಂದು ಏರಿಕೆ ಮಾಡಿರುವುದನ್ನು ಆರೋಗ್ಯ ಸಚಿವಾಲಯ ಘೋಷಿಸಿತ್ತು. ಆದರೆ ಈ ನಿರ್ಧಾರವನ್ನು ವೈಜ್ಞಾನಿಕ ಗುಂಪಿನ ಸಂಪೂರ್ಣ ಒಪ್ಪಿಗೇ ಇಲ್ಲದೇ ಕೈಗೊಳ್ಳಲಾಗಿರುವುದನ್ನು ಸಲಹಾ ಸಮಿತಿಯ ಮೂವರು ಸದಸ್ಯರು ಹೇಳಿರುವುದನ್ನು ರಾಯ್ಟರ್ಸ್ ಉಲ್ಲೇಖಿಸಿದೆ.

ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯ ಮಾಜಿ ನಿರ್ದೇಶಕ ಎಂಡಿ ಗುಪ್ತೆ ಮಾತನಾಡಿ, ” ಎನ್‌ಟಿಎಜಿಐ ಡೋಸ್‌ಗಳ ನಡುವಿನ ಅಂತರವನ್ನು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದ್ದ 8-12ಕ್ಕೆ ನಿಗದಿಪಡಿಸಲು ಒಪ್ಪಿಗೆ ನೀಡಿತ್ತು. ಆದರೆ ಈ ಗುಂಪಿಗೆ, 12 ವಾರಗಳ ಬಳಿಕವೂ ಎರಡನೇ ಡೋಸ್ ಲಸಿಕೆ ಅಂತರದ ಪರಿಣಾಮಗಳ ಬಗ್ಗೆ ಡಾಟಾ ಇರಲಿಲ್ಲ” ಎಂದು ಹೇಳಿದ್ದಾರೆ.

“ಎಂಟು ರಿಂದ 12 ವಾರಗಳಿಗೆ ನಾವೆಲ್ಲರೂ ಒಪ್ಪಿಕೊಂಡ ವಿಷಯ,  ಆದರೆ ಸರಕಾರ 12 ರಿಂದ 16 ವಾರಗಳು ಹೆಚ್ಚಿಸಿರುವುದು ಮತ್ತು ಇದರಿಂದಾಗುವ ಪರಿಣಾಮಗಳ ಬಗ್ಗೆ ನಮಗೆ ಯಾವುದೇ  ಮಾಹಿತಿ ಇಲ್ಲ ಎಂದು ಎನ್‌ಟಿಎಜಿಐ ಸಹೋದ್ಯೋಗಿ ಮ್ಯಾಥ್ಯೂ ವರ್ಗೀಸ್ ಅವರು ಪ್ರತಿಪಾದಿಸಿದ್ದಾರೆ.

ಲಸಿಕೆ ಹಾಕುವ ವಿಷಯದ ಬಗ್ಗೆ ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ಬ್ರಿಟನ್ ನ ರಿಯಲ್-ಲೈಫ್ ಎವಿಡೆನ್ಸ್ ಆಧಾರದಲ್ಲಿ ಲಸಿಕೆ ಡೋಸ್ ನಡುವಿನ ಅಂತರವನ್ನು ಹೆಚ್ಚಿಸುವುದಕ್ಕೆ ಶಿಫಾರಸ್ಸು ಮಾಡಿತ್ತು ಎಂದು ಆರೋಗ್ಯ ಸಚಿವಾಲಯ ಹೇಳಿತ್ತು.  ಲಸಿಕೆ ಕೊರತೆಯನ್ನು ಪರಿಹರಿಸಲು ಅಂತರವನ್ನು ಹೆಚ್ಚಿಸಲಾಗಿಲ್ಲ ಆದರೆ ಇದು “ವೈಜ್ಞಾನಿಕ ನಿರ್ಧಾರ” ಎಂದು ಸರ್ಕಾರಿ ಆರೋಗ್ಯ ಅಧಿಕಾರಿಗಳು ಮೇ 15 ರಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆದರೆ ಈಗ ಪ್ರಶ್ನೆ ಉದ್ಬವಿಸಿರುವುದು ಏನೆಂದರೆ ಲಸಿಕೆಯ ಅಂತರವನ್ನು ಪದೇ ಪದೆ ವಿಸ್ತರಿಸುವುದರಿಂದ ಸಾರ್ವಜನಿಕರ ಮೇಲೆ ಬೀರಬಹುದಾದ ಪರಿಣಾಮ ಏನಾಗಬಹುದು ಎಂದು ಜನರಲ್ಲಿ ಭಯ ಆವರಿಸಿದೆ.  ಈ ಮೊದಲು ಲಸಿಕೆಯ ಅಂತರವನ್ನು ನಾಲ್ಕು ವಾರಗಳಿಗೆ ನಿಗದಿ ಮಾಡಲಾಗಿತ್ತು. ನಂತರದಲ್ಲಿ  6 ರಿಂದ 8 ವಾರಗಳಿಗೆ ನಂತರದಲ್ಲಿ ವಿಜ್ಞಾನಿಗಳು 8 ರಿಂದ 12 ವಾರಗಳಿಗೆ ಒಪ್ಪಿಗೆ ಸೂಚಿಸಿದ್ದರು. ಆದರೆ ಕೇಂದ್ರ ಸರಕಾರ ವಿಜ್ಞಾನಿಗಳ ಸಲಹೆಯನ್ನು ನಿರ್ಲಕ್ಷಿಸಿ 12 ರಿಂದ 16 ವಾರಕ್ಕೆ ವಿಸ್ತರಿಸಿದೆ.

ಲಸಿಕೆ ಅಂತರ ಹೆಚ್ಚಳದಿಂದ ಅಪಾಯ ಜಾಸ್ತಿ : ಕೊರೊನಾ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರ ಹೆಚ್ಚಿಸಿದಷ್ಟು, ಕೊರೊನಾ ರೂಪಾಂತರ ಸೋಂಕಿಗೆ ಗುರಿಯಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಅಮೆರಿಕ ಅಧ್ಯಕ್ಷರ ವೈದ್ಯಕೀಯ ಸಲಹೆಗಾರ ಡಾ. ಆಂಥೊನಿ ಫೌಸಿ ಆತಂಕಕಾರಿ ವಿಚಾರವನ್ನು ಹೊರಹಾಕಿದ್ದಾರೆ.

ಲಸಿಕೆ ಡೋಸ್‌ಗಳ ಅಂತರವನ್ನು ಹೆಚ್ಚುಗೊಳಿಸಿದರೆ ಸೋಂಕಿಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಬ್ರಿಟನ್‌ನಲ್ಲಿ ಈ ಅಂತರ ವಿಸ್ತರಣೆ ಮಾಡಿದ ಕಾರಣಕ್ಕೆ ಸೋಂಕಿಗೆ ತುತ್ತಾಗಿರುವ ಪ್ರಕರಣಗಳು ಕಂಡುಬಂದಿವೆ” ಎಂದು ಹೇಳಿದ್ದಾರೆ. MRNA ಲಸಿಕೆಗಳ ಡೋಸ್‌ಗಳ ನಡುವೆ ಮೂರು ವಾರಗಳ ಅಂತರವಿರಬೇಕು. ಫೈಜರ್ ಅಥವಾ ಮಾಡೆರ್ನಾ ಲಸಿಕೆಗಳಿಗೆ ನಾಲ್ಕು ವಾರಗಳ ಅಂತರವಿರುವುದು ಸೂಕ್ತ ಎಂದು ತಿಳಿಸಿದ್ದಾರೆ.

ಕಳೆದ ತಿಂಗಳಷ್ಟೆ ಕೊರೊನಾ ಲಸಿಕೆ ಕುರಿತು ಭಾರತ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದು, ಲಸಿಕೆ ಡೋಸ್‌ಗಳ ನಡುವಿನ ಅಂತರ ಹೆಚ್ಚಿಸಿತ್ತು. ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು 12-16 ವಾರಗಳಿಗೆ ಏರಿಕೆ ಮಾಡಿತ್ತು. ಮೂರು ತಿಂಗಳಿನಲ್ಲಿ ಎರಡನೇ ಬಾರಿ ಲಸಿಕೆ ಡೋಸ್‌ಗಳ ಅಂತರ ಹೆಚ್ಚಿಸಿತ್ತು. ಸದ್ಯಕ್ಕೆ ಕೊರೊನಾ ಸೋಂಕಿನಿಂದ ದೂರವುಳಿಯಲು ಜನರಿಗೆ ಅತಿ ವೇಗವಾಗಿ ಲಸಿಕೆ ನೀಡಬೇಕಾಗಿದೆ. ಡೆಲ್ಟಾದಂಥ ಅಪಾಯಕಾರಿ ರೂಪಾಂತರದಿಂದ ತಪ್ಪಿಸಿಕೊಳ್ಳಳು ಇದು ಅತ್ಯವಶ್ಯಕವಾಗಿದೆ ಎಂದು ಫೌಸಿ ಹೇಳಿದ್ದಾರೆ.

ವಿಳಂಬದಿಂದ ತೊಂದರೆ ಇಲ್ಲ :  ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ವರದಿಗಳ ಆಧಾರದಲ್ಲಿ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ಕಡಿಮೆಗೊಳಿಸಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ. ಆದರೆ ಈ ವರದಿಯಿಂದ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಈ ನಿರ್ಧಾರಗಳನ್ನು ತಜ್ಞರ ಕೂಲಂಕಷ ಪರೀಕ್ಷೆಗಳ ನಂತರವೇ ತೆಗೆದುಕೊಳ್ಳಲಾಗಿದೆ ಎಂದು ನೀತಿ ಆಯೋಗದ ಸದಸ್ಯ ಡಾ ವಿಕೆ ಪೌಲ್ ತಿಳಿಸಿದ್ದಾರೆ.

ಭಾರತದಲ್ಲಿ ಕೋವಿಶೀಲ್ಡ್‌ನ ಎರಡು ಲಸಿಕೆಗಳ ನಡುವಿನ ಅಂತರವನ್ನು 12 ರಿಂದ 16 ವಾರಗಳಿಗೆ ವಿಸ್ತರಿಸಲಾಯಿತು. ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ನೀಡುವ ರಕ್ಷಣೆ ದೀರ್ಘಕಾಲ ಇರುತ್ತದೆ ಎಂಬ ಅಂತಾರಾಷ್ಟ್ರೀಯ ಅಧ್ಯಯನಗಳ ಆಧಾರದ ಮೇಲೆ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಆದ್ದರಿಂದ, ಎರಡನೇ ಡೋಸ್ ವಿಳಂಬಗೊಳಿಸಬಹುದು ಎಂದು ಡಾ. ಪೌಲ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *