ಕೊರೊನಾ ಹೆಚ್ಚಳ: ಮಾಸ್ಕ್ ಕಡ್ಡಾಯ-ನಿಯಮ ಉಲ್ಲಂಘಿಸಿದರೆ 500 ರೂ. ದಂಡ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ ಮತ್ತು ನಿಯಮ ಉಲ್ಲಂಘಿಸುವವರಿಗೆ 500 ರೂಪಾಯಿ ದಂಡ ವಿಧಿಸಲಿದೆ.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಶಾಲೆಗಳನ್ನು ಮುಚ್ಚದಿರಲು ನಿರ್ಧರಿಸಿದೆ. ಆದರೆ ತಜ್ಞರೊಂದಿಗೆ ಸಮಾಲೋಚಿಸಿ ಶಾಲೆಗಳಿಗೆ ಪ್ರತ್ಯೇಕ ಕೋವಿಡ್ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಏರಿಕೆಯಾಗುತ್ತಿರುವ ಕೋವಿಡ್‌ ಸೋಂಕು: ಮುಂಜಾಗ್ರತೆ ವಹಿಸಲು ಸಚಿವ ಡಾ.ಸುಧಾಕರ್ ಮನವಿ

ಮಾಸ್ಕ್‌ ಬಳಕೆ ಕಡ್ಡಾಯ ಕುರಿತು ದೆಹಲಿ ಸರ್ಕಾರ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವ ನಿರೀಕ್ಷೆಯಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಭೆ ಸಮಾರಂಭಗಳ ಮೇಲೆ ತೀವ್ರ ನಿಗಾ ವಹಿಸಲು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಪರೀಕ್ಷೆಗಳನ್ನು ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ನೆನ್ನೆ(ಏಪ್ರಿಲ್‌ 19) ದೆಹಲಿಯಲ್ಲಿ ಕೋವಿಡ್ ಪ್ರಕರಣಗಳಲ್ಲಿ ಸುಮಾರು ಶೇ. 26 ರಷ್ಟು ಹೆಚ್ಚಳವಾಗಿದ್ದು, ಬುಧವಾರ 632 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೆಹಲಿಯಲ್ಲಿ ಪಾಸಿಟಿವ್ ಪ್ರಮಾಣ ಶೇಕಡಾ 4.42ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *