ಸೀರೆ ಮರೆಯಲ್ಲಿ ಮಕ್ಕಳಿಗೆ ಶೌಚಾಲಯ! ಶೋಚನೀಯ ಸ್ಥಿತಿಯಲ್ಲಿದೆ ಸರಕಾರಿ ಶಾಲೆ!!

ಸಾಗರ :  ಇಡಿ ವಿಶ್ವ ಆಧುನಿಕತೆಯಲ್ಲಿ ನಾಗಾಲೋಟದಿಂದ ಸಾಗುತ್ತಿದೆ. ಶೌಚಾಲಯ ಸೇರಿದಂತೆ ಹಲವಾರು ಜೀವಂತ ಸಮಸ್ಯೆಗಳಿಗೆ ಇನ್ನು ಮುಕ್ತಿ ಸಿಕ್ಕಿಲ್ಲ ಎನ್ನುವುದಕ್ಕೆ ಶಿವಮೊಗ್ಗ ಜಿಲ್ಲೆಯ ಈ ಕುಗ್ರಾಮವೇ ಸಾಕ್ಷಿ.

ಸಾಗರದಿಂದ 60 ಕಿ.ಮೀ ದೂರದಲ್ಲಿರುವ ತುಮರಿ ಗ್ರಾಪಂ ವ್ಯಾಪ್ತಿಯ ಏಳಿಗೆ ಎಂಬ ಕುಗ್ರಾಮದಲ್ಲಿರುವ ಶಾಲಾ ಮಕ್ಕಳಿಗೆ ಸೀರೆ ಅಡ್ಡಲಾಗಿ ಕಟ್ಟಿರುವ ಪ್ರದೇಶವೇ ಶೌಚಾಲಯವಾಗಿ ಪರಿವರ್ತನೆಯಾಗಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಏಳು ವಿದ್ಯಾರ್ಥಿನಿಯರು ಹಾಗೂ ಆರು ವಿದ್ಯಾರ್ಥಿಗಳು ಬಹಿರ್ದೆಸೆಗೆ ಹೋಗಬೇಕಾದರೆ ಸೀರೆ ಅಡ್ಡ ಕಟ್ಟಲಾದ ಪ್ರದೇಶದಲ್ಲೆ ತಮ್ಮ ಬಾಧೆ ತೀರಿಸಿಕೊಳ್ಳುವಂತಹ ಸನ್ನಿವೇಶ ಎದುರಾಗಿದೆ.

ಅದರಲ್ಲೂ ವಿದ್ಯಾರ್ಥಿಗಳು ತೆರೆದ ತೊಟ್ಟಿಯಲ್ಲಿರುವ ನೀರನ್ನು ಮಗ್‍ನಲ್ಲಿ ತೆಗೆದುಕೊಂಡು ಬಹಿರ್ದೆಸೆಗೆ ಹೋಗುವಂತಹ ಪರಿಸ್ಥಿತಿ ಇದ್ದರೂ ಜನಪ್ರತಿನಿಧಿಗಳಾಗಳಿ, ಅಧಿಕಾರಿಗಳಾಗಲಿ ಸಮಸ್ಯೆ ಬಗೆಹರಿಸಲು ಮನಸ್ಸು ಮಾಡಿಲ್ಲ.  ಏಳಿಗೆ ಗ್ರಾಮದ ಸರಕಾರಿ ಶಾಲೆ ಏಳಿಗೆ ಕಂಡಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಹಲವು ವರ್ಷಗಳ ಹಿಂದೆ ಶಾಲಾ ಕಟ್ಟಡದಲ್ಲಿದ್ದ ಶೌಚಾಲಯ ಹಾಳಾಗಿದೆ. ಹಾಳಾಗಿರುವ ಶೌಚಲಯ ನಿರುಪಯುಕ್ತವಾಗಿದೆ. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳು ಸೀರೆ ಅಡ್ಡ ಕಟ್ಟಿದ ನಿರ್ಜನ ಪ್ರದೇಶದಲ್ಲಿ ಶೌಚಕ್ಕೆ ಹೋಗುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಸಧ್ಯ, ಈ ಎಲ್ಲೇಡೆ ವೈರಲ್ ಆಗುವ ಮೂಲಕ ಕರ್ನಾಟಕದ ಶಾಲೆಗಳ ಗೋಳನ್ನು ಬಿಚ್ಚಿಟ್ಟಿದೆ.

ಸೀರೆ ಅಡ್ಡಲಾಗಿ ಕಟ್ಟಿರುವ ಶೌಚಾಲಯದ ಚಿತ್ರ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಶಿವಮೊಗ್ಗದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ ಅವರು ಶಾಲೆಯ ದುಸ್ಥಿತಿ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

ಹಾಳಾಗಿ ಹೋಗಿರುವ ಕಟ್ಟಡವನ್ನು ದುರಸ್ತಿಪಡಿಸದೆ ವರ್ಷಗಳೇ ಕಳೆದಿರುವ ಹಿನ್ನೆಲೆಯಲ್ಲಿ ಬಯಲು ಶೌಚಾಲಯದಲೇ ಸೀರೆ ಮರೆಯಲ್ಲಿ ಬಹಿರ್ದೆಸೆಗೆ ಹೋಗುವಂತೆ ಶಾಲಾ ಅಧಿಕಾರಿಗಳಗೆ ಮಕ್ಕಳಿಗೆ ಸೂಚಿಸಿದ್ದಾರೆ. ಈ ಕುರಿತು ಹಲವು ಬಾರಿ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಗಮನಕ್ಕೆ ತಂದರೂ ಪರಿಸ್ಥಿತಿ ಬದಲಾಗಿಲ್ಲ. ಇನ್ನೂ ಶಾಸಕ ಹರತಾಳು ಹಾಲಪ್ಪ ಗಮನಕ್ಕೆ ತಂದರೂ ಅನುದಾನ ಇಲ್ಲಪ್ಪ ಎಂದು ನೆಪ ಹೇಳುತ್ತಿದ್ದಾರೆ, ಅಲ್ಲಿ ಓದ್ತಾ ಇರೋದು ಬಡವರ ಮಕ್ಕಳು ಅಲ್ವಾ, ಎನ್ನುವ ಅಸಡ್ಡೆ  ಶಾಸಕರಿಗೆ, ಅಧಿಕಾರಿಗಳಿಗೆ ಇದ್ದಂತೆ ಕಾಣಿಸುತ್ತದೆ ಎಂದು ಹೇಳುತ್ತಾರೆ ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರು.

ಇದನ್ನೂ ಓದಿಹಾಸ್ಟೇಲ್‌ ನರಕ : ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?!

ಈ ಶಾಲೆಗೆ ಬರುವುದು 13 ಜನ ಮಕ್ಕಳು. ಅದರಲ್ಲಿ 7 ಜನ ಹೆಣ್ಣು ಮಕ್ಕಳು‌. ಎಲ್ಲಾ ವಿದ್ಯಾರ್ಥಿಗಳು ಬಹುತೇಕ ಕೂಲಿ ಕಾರ್ಮಿಕ ಕುಟುಂಬದವರೇ ಆಗಿದ್ದಾರೆ. ವಿದ್ಯೆ ಕಲಿಬೇಕು ಎನ್ನುವ ಹಂಬಲದಿಂದ ಬರುವ ಮಕ್ಕಳಿಗೆ ಒಂದು ಶೌಚಾಲಯ ಒದಗಿಸಲು ಸಾಧ್ಯವಾಗದಂತಹ ಪರಿಸ್ಥಿತಿಗೆ ಸರ್ಕಾರ ತಲುಪಿರೋದು ನಮ್ಮ ದುರಂತ. ಶೌಚಾಲಯವೇನು ಇಲ್ಲ ಆದರೆ ಸೀರೆಗಳನ್ನು ಅಡ್ಡ ಕಟ್ಟಿ ಧರೆಯನ್ನು ಮರೆಮಾಚಿ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಳ್ಳುವುದು ಎನ್ನುವುದು ಶೌಚಾಲಯ ಮುಕ್ತ ಭಾರತದ ಕನಸಿಗೆ ಹಿಡಿದ ಕನ್ನಡಿಯಾಗಿದೆ.

ಈ ಶಾಲೆಗೆ ಕಳೆದ 10 ವರ್ಷಗಳಿಂದ ಖಾಯಂ ಶಿಕ್ಷಕರ ನಿಯೋಜನೆಯೇ ಅಗಿಲ್ವಂತೆ. ಅತಿಥಿ ಶಿಕ್ಷಕರೇ ಈ ಶಾಲೆಯಲ್ಲಿ ಪಾಠವನ್ನ ಮಾಡುತ್ತಿದ್ದಾರೆ. ಇದೇ ರೀತಿಯ ಶೋಚನೀಯ ಸ್ಥಿತಿ ಮುಂದುವರೆದರೆ ಈ ಶಾಲೆಯ ಬಾಗಿಲು ಮುಚ್ಚಿದರೂ ಆಶ್ಚರ್ಯ ಪಡುವಂತ ಸಂಗತಿಯೆನಲ್ಲ.  ಅಧಿಕಾರಿಗಳು ಹಾಗೂ ಶಾಸಕರು ಅನುದಾನ ಬರಬೇಕು, ವರದಿ ತರಿಸಿಕೊಳ್ತೀವಿ ಅಂತಾ ಸಬೂಬು ಹೇಳುವ ಬದಲು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *