ಶಾಲೆ ತುಂಬಾ ಮಕ್ಕಳು, ಆದರೆ ಶಿಕ್ಷಕರಿಲ್ಲ; ಸ್ಪೀಕರ್ ಯು.ಟಿ. ಖಾದರ್ ಊರಿನ ಸರ್ಕಾರಿ ಶಾಲೆಯ ಕತೆಯಿದು!

ಒಂದೆರೆಡು ವರ್ಷಗಳಲ್ಲಿ ಮುಚ್ಚುವ ಹಂತಕ್ಕೆ ತಲುಪಲಿದೆ 69 ವರ್ಷಗಳ ಇತಿಹಾಸವಿರುವ ಈ ಸರ್ಕಾರಿ ಶಾಲೆ

ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್‌ ಅವರ ಸ್ವಂತ ಊರಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ತೀವ್ರ ತೊಂದರೆಗೊಳಗಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಎರಡು ಪತ್ರಗಳನ್ನು ಶಿಕ್ಷಣಾಧಿಕಾರಿಗೆ ಬರೆದರೂ ಯಾವುದೆ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಸುಮಾರು 69 ವರ್ಷಗಳ ಇತಿಹಾಸ ಇರುವ ಈ ಸರ್ಕಾರಿ ಶಾಲೆಯ ಅವ್ಯವಸ್ಥೆಯಿಂದಾಗಿ ಒಂದೆರೆಡು ವರ್ಷಗಳಲ್ಲಿ ಮುಚ್ಚುವ ಹಂತಕ್ಕೆ ತಲುಪಲಿದೆ ಎಂಬ ಆತಂಕವನ್ನು ನಾಗರಿಕರು ವ್ಯಕ್ತಪಡಿಸಿದ್ದಾರೆ.

‘ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಳಿಯಾರ್’ 1954ರಲ್ಲಿ ಪ್ರಾರಂಭವಾಗಿದೆ. ಸತತ 5ನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸ್ಪೀಕರ್‌ ಯು.ಟಿ. ಖಾದರ್ ಅವರ ಖಾಯಂ ವಿಳಾಸ ಇರುವ, ಅವರು ಪ್ರತಿ ಬಾರಿ ಮತದಾನ ಮಾಡುವ ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಸರ್ಕಾರಿ ಶಾಲೆಯ ಅವ್ಯವಸ್ಥೆಯಿದು. ಶಾಲೆಯ ಈ ಪರಿಸ್ಥಿತಿಯಿಂದಾಗಿ ವರ್ಷದಿಂದ ವರ್ಷಕ್ಕೆ ದಾಖಲಾತಿಯು ಕಡಿಮೆಯಾಗುತ್ತಿದೆ ಎಂಬ ಆರೋಪ ಕೂಡಾ ಇವೆ.

ಇದನ್ನೂ ಓದಿ: ಟ್ರೋಲ್‌ಗಳಿಗೆ ಹೆದರಬೇಡಿ : ಚಿಕ್ಕಬಳ್ಳಾಪುರ ನೂತನ ಶಾಸಕರಿಗೆ ಸ್ಪೀಕರ್‌ ಖಾದರ್‌ ಸಲಹೆ

ಒಟ್ಟು 67 ವಿದ್ಯಾರ್ಥಿಗಳು ಕಲಿಯುತ್ತಿರುವ ಈ  ಶಾಲೆಯಲ್ಲಿ ಪ್ರಸ್ತುತ 1 ರಿಂದ 8ನೇ ವರೆಗೆ ತರಗತಿಗಳಿವೆ. ಅಷ್ಟೆ ಅಲ್ಲದೆ, 1ರಿಂದ 5ನೇ ವರೆಗೆ ಆಂಗ್ಲ ಮಾಧ್ಯಮ ತರಗತಿಗಳು ನಡೆಯುತ್ತಿವೆ. ತರಗತಿಗಳಿಗೆ ಅನುಗುಣವಾಗಿ ಶಾಲೆಯಲ್ಲಿ 5 ಶಿಕ್ಷಕರ ಅಗತ್ಯವಿದೆಯಾದರೂ, ಶಿಕ್ಷಕರಿರುವುದು ಕೇವಲ 3 ಮಾತ್ರ. ಅತಿಥಿ ಶಿಕ್ಷಕರನ್ನಾದರೂ ನೀಡಿ ಎಂದು ಶಾಲೆಯ ಮುಖ್ಯೋಪಾದ್ಯಾಯರು ನಾಲ್ಕು ತಿಂಗಳಲ್ಲಿ ಎರಡು ಪತ್ರಗಳನ್ನು ಮಂಗಳೂರು ದಕ್ಷಿಣ ವಲಯದ ಶಿಕ್ಷಣಾಧಿಕಾರಿಗೆ ಬರೆದಿದ್ದರೂ ಯಾವುದೆ ಕ್ರಮಕೈಗೊಂಡಿಲ್ಲ ಎಂದು ದೂರಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಳಿಯಾರ್

ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಶಾಲೆಯ ಮುಖ್ಯೋಪಾದ್ಯಾಯರಾದ ವೃಂದಾವತಿ ಎಂ. ಅವರು,”ಈ ಬಗ್ಗೆ ಕ್ಷೇತ್ರದ ಶಾಸಕರಿಗೆ ವಾರ್ಡ್‌ ಸದಸ್ಯರೊಬ್ಬರ ಮೂಲಕ ನಿನ್ನೆಯಷ್ಟೆ ನನ್ನ ಪರವಾಗಿ ಮತ್ತು ಶಾಲಾಭಿವೃದ್ಧಿ ಸಮಿತಿ ಪರವಾಗಿ ಪತ್ರ ಕಳುಹಿಸಿದ್ದೇವೆ. 1ರಿಂದ 8ರ ವರೆಗೆ ತರಗತಿಗಳಿವೆ, ಈ ಎಲ್ಲಾ ತರಗತಿಗಳಿಗೆ ಇರುವ ಮೂವರು ಶಿಕ್ಷಕರೆ ಪಾಠ ಮಾಡಬೇಕು. ಅಷ್ಟೆ ಅಲ್ಲದೆ, ಆಂಗ್ಲ ಮಾಧ್ಯಮ 1ರಿಂದ 5ನೇ ತರಗತಿ ವರೆಗೆ ಇದ್ದು ಅವರಿಗೆ ಕೂಡಾ ಇದೇ ಶಿಕ್ಷಕರು ಬೇರೆಯೆ ಪಾಠ ಮಾಡಬೇಕಿದೆ” ಎಂದು ತಮ್ಮ ಸಂಕಷ್ಟ ತೋಡಿಕೊಂಡರು.

ಕಳೆದ ವರ್ಷದ ವರೆಗೆ ಶಾಲೆಯಲ್ಲಿ ನಾಲ್ವರು ಶಿಕ್ಷಕರಿದ್ದರು. ಜೊತೆಗೆ ಒಬ್ಬ ಅತಿಥಿ ಶಿಕ್ಷಕರನ್ನು ನೀಡುವಂತೆ ಕಳೆದ ಎಪ್ರಿಲ್‌ನಲ್ಲಿ ಕೂಡಾ ಮುಖ್ಯೋಪಾದ್ಯಾಯರು ಶಿಕ್ಷಣ ಇಲಾಖೆಗೆ ಪತ್ರ ಬರೆದ್ದರು. ಈ ನಡುವೆ ಒಬ್ಬ ಶಿಕ್ಷಕರು ವರ್ಗಾವಣೆಯಾಗಿದ್ದು, ಶಾಲೆಯ ಶಿಕ್ಷಕರ ಸಂಖ್ಯೆ ಮೂರಕ್ಕೆ ಇಳಿದಿದೆ.

ಇದನ್ನೂ ಓದಿ: ನೂತನ ಶಾಸಕರಿಗೆ ಬಲಪಂಥೀಯರಿಂದ ಮೋಟಿವೇಶನ್ ಭಾಷಣ: ಸ್ಪೀಕರ್‌ U.T. ಖಾದರ್‌ಗೆ ಪತ್ರ ಬರೆದ ಸಿಪಿಐ(ಎಂ)

“ನಾನು ಸೇರಿದಂತೆ ಶಾಲೆಯ ಇತರ ಇಬ್ಬರು ಶಿಕ್ಷಕರು ಹೇಗೊ ನಿರ್ವಹಣೆ ಮಾಡುತ್ತಿದ್ದೇವೆ. ಇದರ ಜೊತೆಗೆ ನನಗೆ ಮುಖ್ಯೋಪಾದ್ಯಾಯರ ಕೆಲಸ ಕೂಡಾ ಇವೆ. ಕಳೆದ ವರ್ಷದ ವರೆಗೆ ಇಲ್ಲಿ ನಾಲ್ಕು ಶಿಕ್ಷಕರು ಇದ್ದೆವು. ಜೊತೆಗೆ ಒಬ್ಬ ಅತಿಥಿ ಶಿಕ್ಷಕರನ್ನು ನೀಡುತ್ತೇವೆ ಎಂದು ಶಿಕ್ಷಣ ಇಲಾಖೆ ಹೇಳಿತ್ತು. ಆದರೆ ಈ ನಡುವೆ ಒಬ್ಬ ಶಿಕ್ಷಕರು ವರ್ಗಾವಣೆಯಾಗಿ ಹೋಗಿದ್ದಾರೆ, ಆದರೆ ಅವರ ಹುದ್ದೆಗೆ ಇನ್ನೂ ಯಾರೂ ಬಂದಿಲ್ಲ. ಶಿಕ್ಷಣ ಇಲಾಖೆಗೆ ಕೂಡಾ ಅತಿಥಿ ಶಿಕ್ಷಕರನ್ನು ನೀಡುವಂತೆ ಕೇಳಿಕೊಂಡಿದ್ದೇವೆ. ಆದರೆ ಅವರು ಇನ್ನೂ ಯಾವುದೆ ಕ್ರಮ ಕೈಗೊಂಡಿಲ್ಲ” ಎಂದು ಮುಖ್ಯ ಶಿಕ್ಷಕಿ ವೃಂದಾವತಿ ಹೇಳಿದರು.

ಈ ಬಗ್ಗೆ ಮಂಗಳೂರು ದಕ್ಷಿಣದ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಸ್. ಈಶ್ವರ ಅವರು ಮಾತನಾಡಿ,”ಶಿಕ್ಷಣ ಇಲಾಖೆ ಕಳೆದ ಬಾರಿ 118 ಅತಿಥಿ ಶಿಕ್ಷರನ್ನು ನೀಡಿತ್ತು. ಆದರೆ ಈ ಬಾರಿ ಅದರ ಅರ್ಧ ಅಂದರೆ 59 ಅತಿಥಿ ಶಿಕ್ಷಕರನ್ನು ನೀಡಿದ್ದಾರೆ. ಮತ್ತೆ 54 ಅತಿಥಿ ಶಿಕ್ಷಕರಿಗಾಗಿ ಬೇಡಿಕೆ ನೀಡಿದ್ದೇವೆ. ಇಲಾಖೆಯಿಂದ ಅತಿಥಿ ಶಿಕ್ಷಕರನ್ನು ನೀಡುತ್ತಿದ್ದಂತೆ ಮೊದಲ ಪ್ರಾಶಸ್ಯ್ರದಲ್ಲಿ ಶಿಕ್ಷಕರನ್ನು ನಿಯೋಜನೆ ಮಾಡಲಿದ್ದೇವೆ. ಈ ಸಮಸ್ಯೆಯನ್ನು ಒಂದು ವಾರದ ಒಳಗಡೆ ನೀಗಿಸಲಿದ್ದೇವೆ” ಎಂದು ಹೇಳಿದರು.

ಶಾಲೆಯಲ್ಲಿ ಶಿಕ್ಷಕರ ಕೊರತೆಯ ಬಗ್ಗೆ ಮಾತನಾಡಿದ ಬೋಳಿಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೆಸಿಂತಾ ಅವರು, “ಶಾಲೆಗೆ ಶಿಕ್ಷಕರನ್ನು ನೇಮಿಸುವುದು ಸರ್ಕಾರವಾಗಿದೆ. ಶಾಲೆಯಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವಂತೆ ನಾವು ನಮ್ಮ ಶಾಸಕರ ಜೊತೆಗೆ ಮೌಖಿಕವಾಗಿ ವಿನಂತಿ ಮಾಡಿದ್ದೇವೆ. ನೇಮಕ ಆದ ಕೂಡಲೆ ಶಿಕ್ಷಕರ ನಿಯೋಜನೆ ಆಗುವಂತೆ ನೋಡಿಕೊಳ್ಳುತ್ತೇನೆ ಎಂದು ಸ್ಪೀಕರ್ ಹೇಳಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯುತ್ತದೆ ಎಂದು ಆಶಿಸುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭಾ ಚುನಾವಣೆ ವೇಳೆ ಖಾದರ್ ಅವರು ತಮ್ಮ ಮಗಳೊಂದಿಗೆ ತೆರಳಿ ಇದೇ ಶಾಲೆಯಲ್ಲಿ ಮತದಾನ ಮಾಡಿದ್ದರು

ಈ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್, “ಈ ಹಿಂದೆ ಇದ್ದ ಶಿಕ್ಷಕರು ವರ್ಗಾವಣೆ ಆಗಿದ್ದರಿಂದ ಶಾಲೆಯಲ್ಲಿ ಶಿಕ್ಷಕರ ಕೊರತೆಯಾಗಿದೆ. ಇದನ್ನು ಬಗೆಹರಿಸುವಂತೆ ನನಗೆ ಮನವಿ ಬಂದಿದ್ದು, ಈ ಬಗ್ಗೆ ಶಿಕ್ಷಣಾಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ವಿದ್ಯಾರ್ಥಿಗಳ ಸಂಖ್ಯೆಗಳಿಗೆ ಅನುಗುಣವಾಗಿ ಶಿಕ್ಷಕರನ್ನು ನೀಡುತ್ತೇವೆ ಎಂದು ಅವರು ಕೂಡಾ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಆದಷ್ಟು ಶೀಘ್ರವೆ ಸಮಸ್ಯೆ ಪರಿಹಾರವಾಗಲಿದೆ” ಎಂದರು.

ವಿಡಿಯೊ ನೋಡಿ: ಸೌಜನ್ಯಳಿಗೆ ನ್ಯಾಯ ಸಿಗುವವರೆಗೂ ಧರ್ಮಸ್ಥಳ ಸಂಘದ ಸಾಲ ಕಟ್ಟುವುದಿಲ್ಲ

Donate Janashakthi Media

Leave a Reply

Your email address will not be published. Required fields are marked *