ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಇಲ್ಲಿನ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದು, ಪೂರಕ ದಾಖಲೆಗಳ ಸಂಗ್ರಹ ಶುರು ಮಾಡಿದ್ದಾರೆ.
ಮುಡಾ ಹಗರಣ ಸಂಬಂಧ ತನಿಖಾ ತಂಡಗಳ ನೇತೃತ್ವ ವಹಿಸಿರುವ ಮೈಸೂರು ಡಿವೈಎಸ್‌ಪಿ ಎಸ್.ಕೆ. ಮಾಲತೇಶ್, ಚಾಮರಾಜನಗರ ಡಿವೈಎಸ್‌ಪಿ ಮ್ಯಾಥು ಥಾಮಸ್, ಇನ್‌ಸ್ಪೆಕ್ಟರ್‌ಗಳಾದ ರವಿಕುಮಾರ್ ಹಾಗೂ ಲೋಕೇಶ್‌ಕುಮಾರ್ ಜೊತೆ ಮೈಸೂರು ಲೋಕಾಯುಕ್ತ ಎಸ್.ಪಿ. ಟಿ.ಜೆ. ಉದೇಶ್ ಸೋಮವಾರ ಬೆಳಿಗ್ಗೆ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದರು. ಬಳಿಕ ಈ ಐವರ ತಂಡವು ಬೆಂಗಳೂರಿಗೆ ತೆರಳಿ, ಲೋಕಾಯುಕ್ತ ಎಡಿಜಿಪಿ ಮನೀಶ್ ಕರ್ಬೇಕರ್ ಅವರನ್ನು ಭೇಟಿ ಮಾಡಿ ಪ್ರಕರಣದ ಸದ್ಯದ ಬೆಳವಣಿಗೆಗಳ ಕುರಿತು ವಿವರಣೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು 14 ನಿವೇಶನಗಳನ್ನ ವಾಪಸ್ ನೀಡುವುದಾಗಿ ಪತ್ರ ಬರೆದಿದ್ದು, ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇತ್ತ ತನಿಖೆ ಪೂರ್ಣಗೊಳಿಸಲು 85 ದಿನಗಳಷ್ಟೇ ಉಳಿದಿವೆ. ಮೊದಲ ಹಂತದಲ್ಲಿ ಮುಡಾ ಆಯುಕ್ತರು, ಹಿಂದಿನ ಆಯುಕ್ತರಿಗೆ ನೋಟಿಸ್ ನೀಡಲಿದ್ದು, ಮೂಲ ದಾಖಲೆ ಗಳನ್ನು ಪರಿಶೀಲಿಸಲಿದ್ದಾರೆ. ನಂತರದಲ್ಲಿ ದೂರಿನಲ್ಲಿ ಉಲ್ಲೇಖಗೊಂಡಿರುವವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಹೆಚ್ಚಾಗಿದೆ.
ಸ್ನೇಹಮಯಿ ಕೃಷ್ಣಗೆ ನೋಟಿಸ್
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಲೋಕಾಯುಕ್ತ ಎಸ್.ಪಿ. ಟಿ.ಜೆ. ಉದೇಶ್ ನೋಟಿಸ್ ನೀಡಿದ್ದಾರೆ. ವಾಟ್ಸ್‌ಆ್ಯಪ್ ಮೂಲಕ ನೋಟಿಸ್ ಕಳುಹಿಸಿದ್ದು, ಮಂಗಳವಾರ (ಅ.1) ಬೆಳಿಗ್ಗೆ 7.30ಕ್ಕೆ ಕಚೇರಿಗೆ ಬರುವಂತೆ ಸೂಚಿಸಿದ್ದಾರೆ. ಪ್ರಕರಣದಲ್ಲಿ ಪೊಲೀಸರು ನೀಡಿದ ಮೊದಲ ನೋಟಿಸ್ ಇದು.