ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ 11ನೇ ಬಾರಿಗೆ ಮುಂದೂಡಿದ ಸುಪ್ರೀಂಕೋರ್ಟ್!

ನವದೆಹಲಿ: ದೆಹಲಿ ಗಲಭೆಗಳ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಮತ್ತೆ ಮುಂದೂಡಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರ ಪೀಠವು ಜನವರಿ 31 ಕ್ಕೆ ಪ್ರಕರಣವನ್ನು ಪಟ್ಟಿ ಮಾಡಿದೆ.

ನ್ಯಾಯ ಪೀಠವು ಮಧ್ಯಾಹ್ನದ ಊಟದವರೆಗೆ ಮಾತ್ರ ಲಭ್ಯವಿರುವುದರಿಂದ ಪ್ರಕಣವನ್ನು ಮುಂದೂಡಿದೆ. “ನಾವು ವಾದಿಸಲು ಸಿದ್ಧರಿದ್ದೇವೆ. ದುರದೃಷ್ಟವಶಾತ್, ನ್ಯಾಯ ಪೀಠವು ಊಟದ ನಂತರ ಇರುವುದಿಲ್ಲ” ಎಂದು ಪ್ರಕರಣ ಉಮರ್ ಖಾಲಿದ್ ಪರ ವಕೀಲ ಸಿಯು ಸಿಂಗ್ ಹೇಳಿದ್ದಾರೆ. ಸುಪ್ರೀಂಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಮುಂದೂಡುತ್ತಿರುವುದು ಇದು ಹನ್ನೊಂದನೇ ಬಾರಿಯಾಗಿದೆ.

ಇದನ್ನೂ ಓದಿ: ಮಂಗಳೂರು | ಶ್ರೀನಿವಾಸ್ ಕಾಲೇಜಿನ ಅಶೋಕ ಸ್ಥಂಬದಲ್ಲಿ ಆರೆಸ್ಸೆಸ್‌ ಬಾವುಟ ಹಾರಿಸಿದ ಕಿಡಿಗೇಡಿಗಳು

ಜನವರಿ 10 ರಂದು ಎರಡೂ ಕಡೆಯವರು ಒಂದೇ ರೀತಿ ವಿನಂತಿಸಿದ್ದರಿಂದ ನ್ಯಾಯಾಲಯವು ಪ್ರಕಣವನ್ನು ಮುಂದೂಡಿತ್ತು ಮತ್ತು ಈ ವೇಳೆ ಇದು ‘ಅಂತಿಮ’ ಮುಂದೂಡಿಕೆ ಎಂದು ಹೇಳಿತ್ತು. ಪ್ರಕರಣವನ್ನು ಮುಂದೂಡಲು ಇಷ್ಟವಿಲ್ಲ ಎಂದು ಆ ಸಮಯದಲ್ಲಿ ನ್ಯಾಯಾಲಯವು ಎಂದು ಹೇಳಿತ್ತು. ಇದೀಗ ಮತ್ತೆ ಪ್ರಕರಣವನ್ನು ಜನವರಿ 31 ಕ್ಕೆ ಮುಂದೂಡಲಾಗಿದೆ. ಇದಕ್ಕೂ ಮೊದಲು 2023ರ ನವೆಂಬರ್‌ನಲ್ಲಿ ನ್ಯಾಯಾಲಯವು ಎರಡೂ ಕಡೆಯ ವಕೀಲರ ಲಭ್ಯತೆಯಿಲ್ಲದ ಕಾರಣ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿತ್ತು.

ದೆಹಲಿ ಗಲಭೆಗಳ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ಜಾಮೀನು ನಿರಾಕರಿಸುವ 2022 ರ ಅಕ್ಟೋಬರ್‌ನಲ್ಲಿ ನೀಡಲಾಗಿದ್ದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಉಮರ್ ಖಾಲಿದ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅವರನ್ನು 2020ರ  ಸೆಪ್ಟೆಂಬರ್‌ನಲ್ಲಿ ದೆಹಲಿ ಪೊಲೀಸರು ಬಂಧಿಸಿ, ಕ್ರಿಮಿನಲ್ ಪಿತೂರಿ, ಗಲಭೆ, ಕಾನೂನುಬಾಹಿರ ಸಭೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. ಅಂದಿನಿಂದ ಅವರು ಜೈಲಿನಲ್ಲೇ ಇದ್ದಾರೆ.

2022 ರ ಮಾರ್ಚ್‌ನಲ್ಲಿ ಕರ್ಕರ್ಡೂಮಾ ನ್ಯಾಯಾಲಯವು ಉಮರ್ ಖಾಲಿದ್‌ ಅವರಿಗೆ ಜಾಮೀನು ನಿರಾಕರಿಸಿತು. ನಂತರ ಅವರು ಹೈಕೋರ್ಟ್‌ಗೆ ಮೊರೆ ಹೋದರು. ಅಲ್ಲಿ ಕೂಡಾ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು. ಈ ಕಾರಣಕ್ಕೆ ಅವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 2023ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಪ್ರಕರಣದ ಕುರಿತು ದೆಹಲಿ ಪೊಲೀಸರ ಪ್ರತಿಕ್ರಿಯೆಯನ್ನು ಕೇಳಿತ್ತು.

ಇದನ್ನೂ ಓದಿ: ಪುಣೆ | ‘ಜೈ ಶ್ರೀ ರಾಮ್’ ಕೂಗುತ್ತಾ ಎಫ್‌ಟಿಐಐ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಹಿಂದುತ್ವದ ಗುಂಪು

2023ರ ಜುಲೈನಲ್ಲಿ ಪ್ರಕರಣದ ವಿಚಾರಣಾ ಪೀಠವು ಎರಡು ನಿಮಿಷಗಳಲ್ಲಿ ವಿಚಾರಣೆಯನ್ನು ಮುಕ್ತಾಯಗೊಳಿಸುವುದಾಗಿ ಹೇಳಿದೆ. ಆದರೆ ಆಗಸ್ಟ್‌ನಲ್ಲಿ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಅದೇ ವರ್ಷ ಆಗಸ್ಟ್ 18 ರಂದು ಪ್ರಕರಣ ಮುಂದೂಡಲ್ಪಟ್ಟಿತು. ಅಷ್ಟೆ ಅಲ್ಲದೆ 2023ರ ಸೆಪ್ಟೆಂಬರ್ 5 ರಂದು ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ದೀಪಂಕರ್ ದತ್ತಾ ಅವರ ಮುಂದೆ ಮತ್ತೆ ಬಂದಿತ್ತು. ಆದರೆ ಖಾಲಿದ್ ಪರ ವಕೀಲ ಕಪಿಲ್ ಸಿಬಲ್ ಅವರ ಅಲಭ್ಯತೆಯಿಂದಾಗಿ ಒಂದು ವಾರ ಮುಂದೂಡಲಾಯಿತು.

ಸೆಪ್ಟೆಂಬರ್ 12, 2023 ರಂದು ಪ್ರಕರಣವನ್ನು ವಾದಿಸಲು ನ್ಯಾಯಾಲಯವು ‘ಅಂತಿಮ’ ಅವಕಾಶವನ್ನು ನೀಡಿತು. ಆದಾಗ್ಯೂ, ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ತ್ರಿವೇದಿ ಅವರ ಮುಂದೆ ಪ್ರಕರಣ ಬಂದಾಗ, ಅವರು ಸಾಕ್ಷ್ಯಚಿತ್ರ ಸಾಕ್ಷ್ಯಗಳ ಆಧಾರದ ಮೇಲೆ ಜಾಮೀನು ಅರ್ಜಿಯನ್ನು ಪರಿಶೀಲಿಸುವ ಇಂಗಿತವನ್ನು ವ್ಯಕ್ತಪಡಿಸಿದರು.

ಅಕ್ಟೋಬರ್ 11, 2023 ರಂದು ವಿಚಾರಣೆಗೆ ಪಟ್ಟಿ ಮಾಡಿದ ನಂತರ, ಈ ಪ್ರಕರಣವು ನ್ಯಾಯಮೂರ್ತಿ ತ್ರಿವೇದಿ ಮತ್ತು ದತ್ತಾ ಅವರ ಪೀಠದ ಮುಂದೆ ಬಂದಿತು. ಆದರೆ ಸಮಯದ ಕೊರತೆಯಿಂದಾಗಿ ವಿಷಯವನ್ನು ಆಲಿಸಲು ಸಾಧ್ಯವಿಲ್ಲ ಎಂದು ಅದು ಹೇಳಿತ್ತು. ಅದರ ನಂತರ ನವೆಂಬರ್ 1, 2023 ಕ್ಕೆ ಪಟ್ಟಿ ಮಾಡಲಾಗಿತ್ತು.

ವಿಡಿಯೊ ನೋಡಿ: #ಮಂಗಳೂರು – ರಾಷ್ಟ್ರ ಧ್ವಜ ಹಾರಿಸುವ ಅಶೋಕ ಸ್ಥಂಬದಲ್ಲಿ #ಆರೆಸ್ಸೆಸ್‌ ಬಾವುಟ ಹಾರಿಸಿದ ಕಿಡಿಗೇಡಿಗಳು

Donate Janashakthi Media

Leave a Reply

Your email address will not be published. Required fields are marked *