ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಸೂಚನೆಗಳು ಇದ್ದರೂ ಸಹ ಉತ್ತರ ಪ್ರದೇಶ ಸರಕಾರ ʻಕನ್ವರ್ ಯಾತ್ರೆʼ ಅನುಮತಿ ನೀಡಿರುವುದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ ಹಾಗೂ ರಾಜ್ಯ ಸರಕಾರಕ್ಕೆ ನೋಟಿಸ್ ನೀಡಿದೆ.
ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ನೇತೃತ್ವದ ನ್ಯಾಯಪೀಠವು ’ಇಂತಹ ಉತ್ಸವಗಳು ಕೋವಿಡ್ ಮೂರನೆಯ ಅಲೆ ಉಲ್ಬಣಗೊಳ್ಳಲು ಪೂರಕವಾಗುತ್ತವೆ’ ಎಂದು ಆತಂಕ ವ್ಯಕ್ತಪಡಿಸಿದೆ.
ಯುಪಿ ಸರಕಾರ ”ಕನ್ವರ್ ಯಾತ್ರೆ ಶಿವನ ಹತ್ತಾರು ಭಕ್ತರು ಸೇರುವ ಕಾರ್ಯಕ್ರಮವು ‘ಕನಿಷ್ಠ ಸಂಖ್ಯೆಯ ಜನರೊಂದಿಗೆ’ ನಡೆಸಬಹುದು. ಅಗತ್ಯವಿದ್ದರೆ ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಬಹುದು” ಎಂದು ಹೇಳಿ ಅನುಮತಿಯನ್ನು ನೀಡಿದೆ.
ಕನ್ವರ್ ಯಾತ್ರೆಯು ಶ್ರವಣ ತಿಂಗಳ ಪ್ರಾರಂಭದೊಂದಿಗೆ ಹದಿನೈದು ದಿನಗಳು ನಡೆಯುತ್ತದೆ. (ಸಾಮಾನ್ಯವಾಗಿ ಜುಲೈ ಕೊನೆಯ ವಾರದಲ್ಲಿ). ಯಾತ್ರೆಯ ಭಾಗವಾಗಿ, ಗಂಗಾ ನೀರನ್ನು ತಮ್ಮ ಶಿವ ದೇವಾಲಯಗಳಲ್ಲಿ ಅರ್ಪಿಸಲು ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ದೆಹಲಿ ಮತ್ತು ಹಿಮಾಚಲ ಪ್ರದೇಶದ ಭಕ್ತರು ಅಥವಾ ಕನ್ವರಿಯರು ಪವಿತ್ರ ನಗರವಾದ ಹರಿದ್ವಾರದಲ್ಲಿ ಒಟ್ಟುಗೂಡುತ್ತಾರೆ. ಕೋವಿಡ್ ಆರಂಭದ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಯಾತ್ರೆ ರದ್ದುಗೊಂಡಿತ್ತು.
ಉತ್ತರಾಖಂಡ ನೂತನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ವರ್ಷದ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಿದೆ. ”ಯಾತ್ರೆಯಿಂದಾಗಿ ಕೋವಿಡ್ ಹೆಚ್ಚಳವಾಗಬಹುದು” ಎಂದು ತಜ್ಞರ ಎಚ್ಚರಿಕೆ ನೀಡಿದ ಹಿನ್ನೆಲೆ ಸರಕಾರ ಈ ಕ್ರಮಕೈಗೊಂಡಿದೆ. ಈ ಹಿಂದೆ ಕುಂಭ ಮೇಳದ ಬಳಿಕ ಕೋವಿಡ್ ಹೆಚ್ಚಳಕ್ಕೆ ಈ ರಾಜ್ಯ ಸಾಕ್ಷಿಯಾಗಿತ್ತು.
ಇದಕ್ಕೂ ಮೊದಲು ರಾಜ್ಯದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಪ್ರಮುಖರು ಉತ್ತರಾಖಂಡ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು ವಾರ್ಷಿಕ ತೀರ್ಥಯಾತ್ರೆಯನ್ನು ರದ್ದುಗೊಳಿಸಲು ಕೋರಿದ್ದರು.
ಕೂಡಲೇ ಇದರ ಬಗ್ಗೆ ಪ್ರತಿಕ್ರಿಯೆ ನೀಡಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಸೂಚನೆ ನೀಡಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿಪಡಿಸಿದೆ.