ನವದೆಹಲಿ: ದೇಶದ್ರೋಹದ ಕಾನೂನು ಪುನರ್‌ವಿಮರ್ಶೆ ಆಗುವವರೆಗೂ ಈ ಕಾನೂನಿನಡಿ ಯಾವುದೇ ಹೊಸ ಎಫ್‌ಐಆರ್‌ಗಳನ್ನು ದಾಖಲಿಸದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಕುರಿತು ವಿಚಾರಣೆ ನಡೆಸಿದ ಸಿಜೆಐ ರಮಣ ಅವರಿದ್ದ ನ್ಯಾಯಪೀಠ, ‘ಈ ಕಾನೂನಿನ ಪುನರ್‌ವಿಮರ್ಶೆ ಆಗುವವರೆಗೂ ನಾವು ಹೊಸ ಪ್ರಕರಣಗಳು ದಾಖಲಾಗುವುದನ್ನು ನಿರೀಕ್ಷಿಸುವುದಿಲ್ಲ’ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೇಳಿದರು.
ದೇಶದ್ರೋಹ ಕಾನೂನಿನ ಪ್ರಕರಣವನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ .ವಿ. ರಮಣ ಮತ್ತು ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿಯರನ್ನು ಒಳಗೊಂಡಿದ್ದ ನ್ಯಾಯಪೀಠ.ಈ ಪ್ರಕರಣಕ್ಕೆ ಮಧ್ಯಂತರ ಸೂಚಿಸಿದೆ. ಕೇಂದ್ರ ಸರ್ಕಾರವು ಕಾನೂನಿನ ಪರಾಮರ್ಶೆ ಮತ್ತು ಕಾನೂನಿನ ದುರ್ಬಳಕೆ ಘಟನೆಗಳ ಕುರಿತು ಹೆಚ್ಚಿನ ಸಮಯ ನೀಡುವಂತೆ ಮನವಿ ಮಾಡಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್, ಮರು ಪರಿಶೀಲನೆಯನ್ನು ಪೂರ್ಣಗೊಳಿಸುವವರೆಗು ದೇಶದ್ರೋಹ ಕಾನೂನನ್ನು ಬಳಸಿಕೊಳ್ಳುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟ ಪಡಿಸಿದೆ.
ಅರ್ಜಿದಾರರಲ್ಲಿ ಒಬ್ಬರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸೆಕ್ಷನ್ 124A ಪ್ರಾಥಮಿಕವಾಗಿ ಅಸಂವಿಧಾನಿಕವಾಗಿದೆ ಮತ್ತು ಕೇಂದ್ರವು ಈ ನಿಬಂಧನೆಯನ್ನು ಪರಿಶೀಲಿಸುವವರೆಗೆ ದೇಶದ್ರೋಹದ ನಿಬಂಧನೆಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಡೆಯಬೇಕು ಎಂದು ವಾದಿಸಿದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದವನ್ನು ಮಂಡಿಸಿದರು. ವಿಚಾರಣೆಯ ಸಂದರ್ಭದಲ್ಲಿ, ತುಷಾರ್ ಮೆಹ್ತಾ ಅವರು, ಕೇಂದ್ರವು ಬ್ರಿಟಿಷರ ಕಾಲದ ಕಾನೂನನ್ನು ಮರುಪರಿಶೀಲಿಸದೆ,ದೇಶದ್ರೋಹದ ಕಾನೂನಿನ ನಿಬಂಧನೆಯನ್ನು ತಡೆಹಿಡಿಯುವುದು ಸರಿಯಾದ ಮಾರ್ಗವಲ್ಲ. ಇದರೊಂದಿಗೆ ನಾವು ರಾಜ್ಯ ಸರ್ಕಾರಗಳಿಗೆ ನೀಡಬೇಕಾದ ಸೂಚನೆಗಳ ಕರಡನ್ನು ಸಿದ್ಧಪಡಿಸಿದ್ದೇವೆ ಮತ್ತು ಅದರ ಪ್ರಕಾರ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಯ ಅನುಮೋದನೆಯಿಲ್ಲದೆ ಎಫ್‌ಐಆರ್‌ಗಳನ್ನು ವಿಭಾಗಗಳ ಅಡಿಯಲ್ಲಿ ದಾಖಲಿಸಲಾಗುವುದಿಲ್ಲ. ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೇಶದ್ರೋಹ ಕಾನೂನಿಗೆ ಸದ್ಯಕ್ಕೆ ತಡೆ ನೀಡಬಾರದು ಎಂದು ಮನವಿ ಮಾಡಿದರು
ದೇಶದ್ರೋಹ ಕಾನೂನಿನಡಿ ಬಂಧಿತರಾಗಿರುವವರು ಜಾಮೀನಿಗೆ ಅರ್ಜಿ ಸಲ್ಲಿಸಬಹುದೆಂದು ಮತ್ತು ದೇಶದ್ರೋಹ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಜುಲೈಗೆ ಮುಂದೂಡಲಾಗಿದೆ ಎಂದು ನ್ಯಾಯಪೀಠವು ಹೇಳಿದೆ.