ನವದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪತ್ರಕರ್ತ ತರುಣ್ ತೇಜ್ಪಾಲ್ ಅವರನ್ನು ಗೋವಾದ ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿ ಅಂತಿಮ ತೀರ್ಪು ನೀಡಿತ್ತು. ತೀರ್ಪು ಪ್ರಶ್ನಿಸಿ ಗೋವಾ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಸಂದರ್ಭದಲ್ಲಿ ನ್ಯಾಯಾಲಯವು ಪ್ರಕರಣದ ವಿಚಾರಣೆಗೆ ಮತ್ತೆ ಸಮಯ ನೀಡಲು ಸಾಧ್ಯವಿಲ್ಲ ಎಂದು ಮುಕ್ತಾಯಗೊಳಿಸಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್, ವಿನೀತ್ ಶರಣ್ ಮತ್ತು ಎಂ.ಆರ್. ಶಾ ಅವರನ್ನೊಳಗೊಂಡ ನ್ಯಾಯಪೀಠವು ‘ಈಗಾಗಲೇ ವಿಚಾರಣೆ ಪೂರ್ಣಗೊಂಡಿರುವ ಪ್ರಕರಣಕ್ಕೆ ಮತ್ತೆ ಸಮಯ ವಿಸ್ತರಿಸುವಂತಹ ಯಾವುದೇ ಆದೇಶ ನೀಡುವ ಅಗತ್ಯವಿಲ್ಲ‘ ಎಂದು ಹೇಳಿದೆ.
ಇದನ್ನು ಓದಿ: ತೇಜಪಾಲ್ ಅತ್ಯಾಚಾರ ಪ್ರಕರಣ ತೀರ್ಪು: ಮಹಿಳೆಯರ ಸುರಕ್ಷಿತೆಗೆ ಮಾರಕ
ಗೋವಾದ ವಿಚಾರಣಾ ನ್ಯಾಯಾಲಯ ಮೇ 21 ರಂದು ಪತ್ರಕರ್ತ ತೇಜ್ಪಾಲ್ರನ್ನು ಸಾಕ್ಷಾಧಾರಗಳ ಕೊರತೆಯಿಂದಾಗಿ ನಿರ್ದೋಷಿ ಎಂದು ಖುಲಾಸೆಗೊಳಿಸಿತು. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
ಕಳೆದ ವರ್ಷದ ಅಕ್ಟೋಬರ್ನಲ್ಲಿ, ಗೋವಾ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ಮನವಿ ಮೇರೆಗೆ, ಸುಪ್ರೀಂ ಕೋರ್ಟ್ ತೇಜ್ಪಾಲ್ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ಮಾರ್ಚ್ 21, 2021ರವರೆಗೆ ಸಮಯ ವಿಸ್ತರಿಸಿತ್ತು. ಗೋವಾ ಸರ್ಕಾರ ಕೂಡ, ವಿಚಾರಣೆ ಪೂರ್ಣಗೊಳಿಸಲು, ಸಮಯ ವಿಸ್ತರಿಸುವಂತೆ ಮನವಿ ಮಾಡಿತ್ತು.
2013 ರಲ್ಲಿ ಗೋವಾದ ಬಾಂಬೋಲಿಂ ಬಳಿಯಿರುವ ಪಂಚತಾರಾ ಹೋಟೆಲ್ವೊಂದರಲ್ಲಿ ಆಯೋಜಿಸಿದ್ದ ಥಿಂಕ್ ಫೆಸ್ಟಿವಲ್ ಕಾರ್ಯಕ್ರಮದ ಸಂದರ್ಭದಲ್ಲಿ ಸಹೋದ್ಯೋಗಿ ಪತ್ರಕರ್ತೆಯ ಮೇಲೆ ತರುಣ್ ತೇಜ್ಪಾಲ್ ಬಲಾತ್ಕಾರ ನಡೆಸಿದ್ದರು ಎಂಬ ಆರೋಪವನ್ನು ತೇಜ್ಪಾಲ್ ಎದುರಿಸುತ್ತಿದ್ದರು. ಈ ಕುರಿತಂತೆ ಭಾರತೀಯ ದಂಡ ಸಂಹಿತೆ ಖಾಯ್ದೆ ಕಲಂ 376, 341, 342, ಕಲಂ ಸೇರಿದಂತೆ ಮತ್ತಿತರೆ ಅಡಿಯಲ್ಲಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದರು.