ರೈತನ 31 ಪೈಸೆ ಸಾಲ ಬಾಕಿ: ಸಾಲ ತೀರಿಸಿದ ಪತ್ರ ನೀಡಲು ನಿರಾಕರಿಸಿದ ಎಸ್‌ಬಿಐಗೆ ಗುಜರಾತ್‌ ಹೈಕೋರ್ಟ್‌ ಛೀಮಾರಿ

ಅಹಮದಾಬಾದ್‌: ಕೇವಲ 31 ಪೈಸೆ ಬಾಕಿ ಉಳಿಸಿಕೊಂಡಿರುವ ರೈತನಿಗೆ ಸಾಲ ತೀರುವಳಿ ಪ್ರಮಾಣಪತ್ರ ನೀಡಲು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ನಿರಾಕರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಗುಜರಾತ್‌ ಹೈಕೋರ್ಟಿನ ನ್ಯಾಯಾಧೀಶರು ಬ್ಯಾಂಕಿಗೆ ಛೀಮಾರಿ ಹಾಕಿದೆ. ಇದೊಂದು ರೀತಿಯ ಕಿರುಕುಳವೇ ಸರಿ ಎಂದು ಹೇಳಿದ್ದಾರೆ.

ಹೈಕೋರ್ಟ್‌ ನ್ಯಾಯಮೂರ್ತಿ ಭಾರ್ಗವ್ ಕರಿಯಾ ಅವರಿದ್ದ ನ್ಯಾಯಪೀಠ ಏಪ್ರಿಲ್​ ನಲ್ಲಿ ಅರ್ಜಿಯ ವಿಚಾರಣೆ ನಡೆಸಿತ್ತು. ಭೂ ವ್ಯವಹಾರವನ್ನು ತೆರವುಗೊಳಿಸಲು ರೈತರಿಗೆ ಸಂಬಂಧಪಟ್ಟ ಬ್ಯಾಂಕಿನಿಂದ ‘ಯಾವುದೆ ರೀತಿಯ ಬಾಕಿ ಇಲ್ಲ’ ಎಂಬ ಪ್ರಮಾಣಪತ್ರದ ಅಗತ್ಯವಿರುತ್ತದೆ. ಆದರೆ, ಭೂಮಿ ಮಾರಾಟದ ವಿಷಯದಲ್ಲಿ ಕೇವಲ 31 ಪೈಸೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ರೈತನಿಗೆ ಸಾಲ ತೀರುವಳಿ ಪ್ರಮಾಣಪತ್ರ ನೀಡಲು ಎಸ್‌ಬಿಐ ನಿರಾಕರಿಸಿದೆ.

ಪ್ರಕರಣದ ವಿವರಗಳ ಪ್ರಕಾರ, ರಾಕೇಶ್ ವರ್ಮಾ ಮತ್ತು ಮನೋಜ್ ವರ್ಮಾ ಎಂಬ ಇಬ್ಬರು ರೈತರು 2020 ರಲ್ಲಿ ಅಹಮದಾಬಾದ್ ನಗರದ ಸಮೀಪ ಖೋರಾಜ್ ಗ್ರಾಮದಲ್ಲಿ ರೈತ ಶಾಮ್​ಜಿ ಭಾಯಿ ಮತ್ತು ಅವರ ಕುಟುಂಬದಿಂದ ತುಂಡು ಭೂಮಿಯನ್ನು ಖರೀದಿಸಿದ್ದರು. ಶ್ಯಾಮ್‌ಜಿ ಭಾಯಿ ಅವರು ಎಸ್‌ಬಿಐನಿಂದ ಪಡೆದಿದ್ದ 3 ಲಕ್ಷ ರೂ.ಗಳ ಬೆಳೆ ಸಾಲವನ್ನು ಮರುಪಾವತಿಸುವ ಮೊದಲು ಅರ್ಜಿದಾರರಿಗೆ ಭೂಮಿಯನ್ನು ಮಾರಾಟ ಮಾಡಿದ್ದರಿಂದ, ರಾಕೇಶ್‌ ವರ್ಮಾ ಮತ್ತು ಮನೋಜ್‌ ವರ್ಮಾ(ಹೊಸ ಜಮೀನಿನ ಮಾಲೀಕರು) ತಮ್ಮ ಹೆಸರನ್ನು ಕಂದಾಯದಲ್ಲಿ ನಮೂದಿಸಲು ಸಾಧ್ಯವಾಗಲಿಲ್ಲ.

ರೈತ ಶ್ಯಾಮ್‌ಜಿ ಭಾಯಿ ಅವರು ಸಂಪೂರ್ಣ ಸಾಲ ಮರುಪಾವತಿ ಮಾಡಿದ್ದರೂ ಸಹ ಕೆಲವು ಕಾರಣಗಳಿಂದ ಎಸ್‌ಬಿಐ ಸಾಲ ತೀರುವಳಿ ಪ್ರಮಾಣಪತ್ರವನ್ನು ನೀಡಿರಲಿಲ್ಲ. ಎಸ್‌ಬಿಐ, ಸದರಿ ರೈತನಿಗೆ ಅಂತಹ ಪ್ರಮಾಣಪತ್ರ ನೀಡದೆ ತಡೆಹಿಡಿದಿತ್ತು. ಮತ್ತು ನೀಡುವುದಿಲ್ಲವೆಂದು ಸತಾಯಿಸುತ್ತಿತ್ತು. ಇದನ್ನು ಮನಗಂಡು ಹೊಸ ಮಾಲೀಕರು ಎರಡು ವರ್ಷಗಳ ಹಿಂದೆ ಹೈಕೋರ್ಟ್‌ನ ಮೊರೆ ಹೋಗಿದ್ದರು.

ಇದನ್ನು ಆಲಿಸಿದ ಹೈಕೋರ್ಟ್​, ಬ್ಯಾಂಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಇದು ತುಂಬಾ ಅತಿಯಾಯ್ತು. ರಾಷ್ಟ್ರೀಕೃತ ಬ್ಯಾಂಕ್ ಕೇವಲ 31 ಪೈಸೆಗೆ ಸಾಲ ತೀರುವಳಿ ಪ್ರಮಾಣಪತ್ರವನ್ನು ನೀಡುವುದಿಲ್ಲ ಎಂದು ಹೇಳುತ್ತಿರುವುದು ದುರದೃಷ್ಟಕರ ಎಂದು ನ್ಯಾಯಾಧೀಶರು ಹೇಳಿದರು.‌

ವಿಚಾರಣೆಯ ವೇಳೆ, ನ್ಯಾಯಮೂರ್ತಿ ಭಾರ್ಗವ್ ಕರಿಯಾ ಅವರು‌ ಸಾಲ ತೀರುವಳಿ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಬ್ಯಾಂಕ್‌ಗೆ ಕೇಳಿದಾಗ, ಎಸ್‌ಬಿಐ ಪರ ವಕೀಲ ಆನಂದ್ ಗೋಗಿಯಾ, “31 ಪೈಸೆ ಬಾಕಿ ಇರುವ ಕಾರಣ ಅದು ಸಾಧ್ಯವಿಲ್ಲ. ಇದು ಕಂಪ್ಯೂಟರ್​​ ವ್ಯವಸ್ಥೆಯಿಂದ ರಚಿತವಾಗಿದೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಎಸ್‌ಬಿಐ ಮ್ಯಾನೇಜರ್ ಮೌಖಿಕ ಸೂಚನೆ ನೀಡಿದ್ದಾರೆ ಎಂದು ಆನಂದ್ ಗೋಗಿಯಾ ಹೇಳಿದಾಗ, ನ್ಯಾಯಾಧೀಶರು ಕೋಪಗೊಂಡರು. ಮತ್ತು ನ್ಯಾಯಾಲಯಕ್ಕೆ ಹಾಜರಾಗುವಂತೆ ವ್ಯವಸ್ಥಾಪಕರಿಗೆ ಸೂಚಿಸುವಂತೆ ವಕೀಲರಿಗೆ ಹೇಳಿದರು.

ನ್ಯಾಯಮೂರ್ತಿ ಭಾರ್ಗವ್ ಕರಿಯಾ ಅವರು 50 ಪೈಸೆಗಿಂತ ಕಡಿಮೆ ಇರುವ ಯಾವುದನ್ನಾದರೂ ನಿರ್ಲಕ್ಷಿಸಬೇಕು ಮತ್ತು ಪ್ರಮಾಣಪತ್ರವನ್ನು ನೀಡಬೇಕು. ಏಕೆಂದರೆ ಮೂಲ ಸಾಲಗಾರ ಈಗಾಗಲೇ ಬೆಳೆ ಸಾಲದ ಸಂಪೂರ್ಣ ಬಾಕಿಯನ್ನು ಪಾವತಿಸಿದ್ದಾರೆ.

“ನೀವು ಜನರಿಗೆ ಏಕೆ ಕಿರುಕುಳ ಕೊಡುತ್ತಿದ್ದೀರಿ? ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯು 50 ಪೈಸೆಗಿಂತ ಕಡಿಮೆ ಹಣವನ್ನು ಎಣಿಕೆ ಮಾಡಬಾರದು ಎಂದು ಹೇಳುತ್ತದೆ. ಇದು ನಿಮ್ಮ ಮ್ಯಾನೇಜರ್‌ನಿಂದ ಕಿರುಕುಳವಲ್ಲದೆ ಬೇರೇನೂ ಅಲ್ಲ” ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *