ಬೆಂಗಳೂರು: ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ‘ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಆಡಳಿತಾತ್ಮಕ ಸ್ವಾಯತ್ತತೆ ಹಾಗೂ ಶೈಕ್ಷಣಿಕ ಗುಣಮಟ್ಟ ಜತೆಗೆ ಅಸ್ಮಿತೆ ಉಳಿಸಿ’ ಎಂದು ಆಗ್ರಹಿಸಿ ನವೆಂಬರ್ 28ರಂದು ಧರಣಿ ನಡೆಯಿತು.
ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲೂ ಶೈಕ್ಷಣಿಕ ಮಂಡಳಿ ಸ್ಥಾಪನೆ, ಪರೀಕ್ಷಾ ವಿಭಾಗ ಮರು ವರ್ಗಾವಣೆ, ಮೌಲ್ಯಮಾಪನದ ಬಾಕಿ ಬಿಡುಗಡೆ ಸೇರಿ 13 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಹಸು ಮಾರಾಟ ಮಾಡಿ RTI ದಾಖಲೆ ಪಡೆದ ರೈತ : 16 ಸಾವಿರ ಪುಟಗಳ ದಾಖಲೆಗೆ ₹32 ಸಾವಿರ ಪಾವತಿ!
ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ಮಾತನಾಡಿ, ‘ಪಿಯು ಕಾಲೇಜುಗಳ ಬಲವರ್ಧನೆಗಾಗಿ ಯಾವುದೇ ಹೊಸ ಕಾಲೇಜು ಸ್ಥಾಪನೆಗೆ ಮುಂದಿನ ಮೂರು ವರ್ಷ ಅನುಮತಿ ನೀಡಬಾರದು. 9–10 ಹಾಗೂ 11–12ನೇ ತರಗತಿಗಳ ಬೋಧನಾ ವ್ಯಾಪ್ತಿಯನ್ನು ಒಂದೇ ಶೈಕ್ಷಣಿಕ ವ್ಯಾಪ್ತಿಗೆ ತರಬೇಕೆಂಬ ಕಡತವನ್ನು ತಿರಸ್ಕರಿಸಬೇಕು. ₹13.5 ಕೋಟಿ ಮೌಲ್ಯಮಾಪನ ಸಂಭಾವನೆ ಬಿಡುಗಡೆ ಮಾಡಬೇಕು. ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು. ಉಪನಿರ್ದೇಶಕರ ಕಚೇರಿ ಬಲವರ್ಧನೆಗೆ ಹಿರಿಯ ಪ್ರಾಂಶುಪಾಲರಿಬ್ಬರನ್ನು ಸಹಾಯಕ ನಿರ್ದೇಶಕರಾಗಿ ನೇಮಿಸಬೇಕು’ ಎಂದು ಆಗ್ರಹಿಸಿದರು.
‘ಪಿಯು ಪರೀಕ್ಷಾ ವಿಭಾಗವನ್ನು ಕರ್ನಾಟಕ ಶಾಲಾಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಇಲಾಖೆಗೆ ಮರು ವರ್ಗಾಯಿಸಬೇಕು. ಉನ್ನತ ಶಿಕ್ಷಣ ಇಲಾಖೆಯಂತೆಯೇ ಶೈಕ್ಷಣಿಕ ಮಂಡಳಿ ಸ್ಥಾಪಿಸಬೇಕು. ವಿದ್ಯಾರ್ಥಿ ಹಾಗೂ ಉಪನ್ಯಾಸಕರ ಅನುಪಾತ ಸುಧಾರಣೆಗೆ ಒತ್ತು ನೀಡಬೇಕು. ನಗದುರಹಿತ ಚಿಕಿತ್ಸಾ ಯೋಜನೆ ವಿಸ್ತರಣೆ ಮಾಡಬೇಕು. ಶೈಕ್ಷಣಿಕ ಅರ್ಹತೆ ಇರುವವರಿಗೆ ಆಂಧ್ರಪ್ರದೇಶ ಮಾದರಿಯಲ್ಲಿ ಪದವಿ ಕಾಲೇಜುಗಳಿಗೆ ಪದೋನ್ನತಿ ನೀಡಬೇಕು. ಕಾರ್ಯಭಾರ ಕೊರತೆ ಸರಿದೂಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಎಸ್.ವಿ.ಸಂಕನೂರ, ಕೆ. ವಿವೇಕಾನಂದ ಧರಣಿಗೆ ಬೆಂಬಲ ಸೂಚಿಸಿದರು.
ಇದನ್ನೂ ನೋಡಿ: ಮತದಾರರ ವಿಶೇಷ ಪರಿಷ್ಕರಣೆ ಅಂದರೆ ಹಿಂದೂ ರಾಷ್ಟ್ರ ನಿರ್ಮಾಣವಾ?! – ಡಾ.ಕೆ.ಪ್ರಕಾಶ್ Janashakthi Media
