ಕಲಬುರ್ಗಿ : ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ನಿರ್ದೇಶನದ ‘ಟಿಪ್ಪು ನಿಜಕನಸುಗಳು’ ನಾಟಕ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಪ್ರದರ್ಶನವಾದರೆ, ಅದನ್ನು ವಿರೋಧಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರಿಂದ ಜಗತ್ ವೃತ್ತದಲ್ಲಿ ‘ಸಾವರ್ಕರ್ ಮಾಫಿನಾಮಾ’ ಬೀದಿ ನಾಟಕ ಪ್ರದರ್ಶನವಾಯಿತು.
‘ಟಿಪ್ಪು ಸುಲ್ತಾನ್ ಕುರಿತು ಕಲ್ಪಿತ ನಾಟಕ ರಚಿಸಿ, ರಂಗಭೂಮಿಯಲ್ಲಿ ಪ್ರಯೋಗಿಸಲಾಗುತ್ತಿದೆ’ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ‘ಸಾವರ್ಕರ್ ಮಾಫಿನಾಮಾ’ ಬೀದಿ ನಾಟಕದ ಸಣ್ಣ ತುಣುಕು ಪ್ರದರ್ಶಿಸಿದರು. ಇದಕ್ಕೂ ಮುನ್ನ ಲೇಖಕ ಕೋ, ಚೆನ್ನಬಸಪ್ಪ ಅವರು ಬರೆದ ‘ಅಪ್ರತಿಮ
ದೇಶಭಕ್ತ ಟೀಪೂ ಸುಲ್ತಾನ್(ಟಿಪ್ಪು ಸುಲ್ತಾನ್)’ ಪುಸ್ತಕ ಹಿಡಿದು ಟಿಪ್ಪು ಪರ ಘೋಷಣೆ ಕೂಗಿ, ಜಾಗೃತಗೀತೆಗಳನ್ನು ಹಾಡಿದರು. ‘ಸಾವರ್ಕರ್ ಜೀವನ ಗಾಥೆಯ ಆಯ್ದ ಭಾಗಗಳನ್ನು ಆಧರಿಸಿ 45 ನಿಮಿಷಗಳ ಬೀದಿ ನಾಟಕ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಜನದಟ್ಟಣೆ ಆಗುವುದೆಂದು ಪೊಲೀಸರು ಪೂರ್ಣಪ್ರಮಾಣದ ಅನುಮತಿ ನೀಡಲಿಲ್ಲ. ಹೀಗಾಗಿ ಸಾವರ್ಕರ್ ಜೈಲಿನಲ್ಲಿ ಕ್ಷಮಾಪಣೆ ಕೇಳುವ 10 ನಿಮಿಷ ದೃಶ್ಯವಷ್ಟೇ ಪ್ರದರ್ಶಿಸಲು ಸಾಧ್ಯವಾಯಿತು’ ಎಂದು ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ತಿಳಿಸಿದರು.
ಇದನ್ನೂ ಓದಿ : ಕಿತ್ತೂರ ಚೆನ್ನಮ್ಮ ನಾಟಕದಲ್ಲಿ ಟಿಪ್ಪುವಿಗೆ ಅವಮಾನ
‘ಪೊಲೀಸ್ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿ ‘ಸಾವರ್ಕರ್ ಮಾಫಿನಾಮಾ’ ಬೀದಿ ನಾಟಕದ ಪೂರ್ಣಪ್ರಮಾಣದ ಪ್ರದರ್ಶನಕ್ಕೆ ಅವಕಾಶ ನೀಡದೆ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ದಮನಗೊಳಿಸಿದ್ದಾರೆ’ ಎಂದು ಚಿಂತಕಿ ಕೆ. ನೀಲಾ ಆರೋಪಿಸಿದರು. ನಮ್ಮ ಚುನಾವಣೆಯ ಪ್ರಮುಖ ಅಸ್ತ್ರ ಸಾವರ್ಕರ್ ಮತ್ತು ಟಿಪ್ಪು ಎಂದು ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಮಾತನಾಡುವ ಮೂಲಕ ವಿವಾದ ಸೃಷ್ಟಿಸಿದ್ದರು. ಅದರಂತೆ ಅವರು ಟಿಪ್ಪು ಕುರಿತು ಸುಳ್ಳು ವಿಚಾರಗಳನ್ನು ಹೇಳುತ್ತಿದ್ದಾರೆ. ಕೋಮುಗಲಭೆ ಎಬ್ಬಿಸಿ ಮತ ವಿಭಜಿಸುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.
ಬೀದಿ ನಾಟಕದ ಪೈಕಿ ಅಂಡಮಾನ್ ಜೈಲಿನಲ್ಲಿ ಬಂಧಿಯಾಗಿದ್ದ ಸಾವರ್ಕರ್ ಅವರು ಬ್ರಿಟಿಷ್ ಅಧಿಕಾರಿಗೆ ಕ್ಷಮಾಪಣೆ ಕೇಳುವ ತುಣುಕೊಂದನ್ನು ವಿನಾಯಕ ದಾಮೋದರ ಸಾವರ್ಕರ್ ಪಾತ್ರದಲ್ಲಿ ಕೋದಂಡರಾಮ, ಬ್ರಿಟಿಷ್ ಅಧಿಕಾರಿಗಳಾಗಿ ಮಲ್ಲಿಕಾರ್ಜುನ ಕನ್ನ, ಸಂಗಯ್ಯ ಕರ್ಣ ಮತ್ತು ಶರಣಗೌಡ ಮಾಲಿ ಪಾಟೀಲ ಅಭಿನಯಿಸಿದರು.
ಇದನ್ನೂ ಓದಿ : ‘ಟಿಪ್ಪು ನಿಜಕನಸುಗಳುʼ ಪುಸ್ತಕ ಮಾರಾಟ, ವಿತರಣೆ ಮಾಡದಂತೆ ಬೆಂಗಳೂರು ನ್ಯಾಯಾಲಯ ತಡೆ!
ಹೋರಾಟಗಾರರಾದ ಅರ್ಜುನ ಭದ್ರೆ, ಜಗದೇವಿ ನೂಲಕರ್, ಗುಲಾಬೂರಾಣಿ, ಸುಧಾಮ ಧನ್ನಿ, ಮರೆಪ್ಪ ಹಳ್ಳಿ, ಮಲ್ಲಣ್ಣ ಮಸ್ಕಿ, ಮಲ್ಲಿಕಾರ್ಜುನ ಹಳ್ಳಿ, ಬಸವರಾಜ, ಪಾಂಡುರಂಗ ಮಾವಿನಕರ್, ಸಿದ್ರಾಮ, ಪ್ರಭು ಖಾನಾಪುರೆ, ಡಾ.ಅಶೋಕ, ಸಂಗಯ್ಯ ಎಸ್.ಹಳ್ಳದಮಠ, ಶರಣಬಸಪ್ಪ ಮಮಶೆಟ್ಟಿ ಇದ್ದರು.
ಅಖಿಲ ಭಾರತ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಒಕ್ಕೂಟ, ಗಾಂಧಿ ವಿಚಾರ ವೇದಿಕೆ, ಜನರಂಗ, ರಂಗ ಗುಡಿಸಲು, ಕಲಬುರಗಿ ಆರ್ಟ್ ಸೆಂಟರ್, ಇಂಡಿಯನ್ ಕಲ್ಚರಲ್ ಸೆಂಟರ್, ಸೂರ್ಯ ನಗರಿ, ಬೀದಿ ನಾಟಕ ತಂಡ, ಸಿಯುಕೆ ಸಂಶೋಧನಾ ವಿದ್ಯಾರ್ಥಿ ಸಂಘಟನೆ ಸೇರಿ ಹಲವು ಸಂಘಟನೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ