ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಸಂಶಯಿತರ ಜೊತೆ ಕಾಣಿಸಿಕೊಂಡ ಕಾಂಗ್ರೆಸ್ ಮಾಜಿ ಸಚಿವ ಅಭಯಚಂದ್ರ ಜೈನ್!

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ – ಕೊಲೆ ಪ್ರಕರಣದಲ್ಲಿ ಸೌಜನ್ಯ ಕುಟುಂಬಿಕರು ಪ್ರಕರಣದ ಆರೋಪಿಗಳೆಂದು ಸಂಶಯವ್ಯಕ್ತಪಡಿಸುತ್ತಿರುವ ವ್ಯಕ್ತಿಗಳ ಜೊತೆಗೆ ಕಾಂಗ್ರೆಸ್‌ನ ಮಾಜಿ ಸಚಿವ ಅಭಯಚಂದ್ರ ಜೈನ್ ಶುಕ್ರವಾರ ಕಾಣಿಸಿಕೊಂಡಿದ್ದು, ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಸೌಜನ್ಯ ಪ್ರಕರಣದಲ್ಲಿ ಕುಟುಂಬಿಕರು ಮತ್ತು ಸೌಜನ್ಯ ಕುಟುಂಬದ ಪರ ಹೋರಾಟ ನಡೆಸುತ್ತಿರುವವರು ಪ್ರಕರಣದ ಆರೋಪಿಗಳೆಂದು ಸಂಶಯ ವ್ಯಕ್ತಪಡಿಸಿದ್ದ ವ್ಯಕ್ತಿಗಳು ಮಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ  ಶುಕ್ರವಾರ  ಪತ್ರಿಕಾಗೋಷ್ಠಿ ನಡೆಸಿದ್ದರು. ಇವರೊಂದಿಗೆ ಕಾಂಗ್ರೆಸ್ ಮಾಜಿ ಸಚಿವ ಕಾಣಿಸಿಕೊಂಡಿದ್ದು ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರಕರಣದ ಆರೋಪಿಗಳು ಎಂದು ಸೌಜನ್ಯ ಅವರ ಕುಟುಂಬಿಕರು ಆರೋಪಿಸಿದ್ದ ಧೀರಜ್ ಕೆಲ್ಸ, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ಮಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಸೌಜನ್ಯ ಪರವಾಗಿ ಹೋರಾಟ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಹೊಸ ಶಾಸಕರಿಗೆ ಭಾಷಣ ಮಾಡಲಿದ್ದಾರೆ ವಿವಾದಾತ್ಮಕ ಗುರು ರವಿಶಂಕರ್ ಗುರೂಜಿ!

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಧೀರಜ್ ಕೆಲ್ಸ, “ಇತ್ತೀಚೆಗೆ ದಿನಗಳಲ್ಲಿ ನಮ್ಮ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಈ ವಾರದಲ್ಲಿ  ಕಾನತ್ತೂರು ದೇವರ ಮುಂದೆ ಆಣೆ ಪ್ರಮಾಣ ಮಾಡುತ್ತೇವೆ. ನಮ್ಮ ವಿರುದ್ಧ ಆರೋಪ ಮಾಡುತ್ತಿರುವ ತಿಮರೋಡಿ ಶೆಟ್ಟಿ, ಧೈರ್ಯವಿದ್ದರೆ, ಅಪ್ಪನಿಗೆ ಹುಟ್ಟಿದವರಾದರೆ ದೇವರ ಮುಂದೆ ಬಂದು ಆಣೆ ಪ್ರಮಾಣ ಮಾಡಲಿ. ಸಿಬಿಐ ನಮ್ಮನ್ನು ಕರೆದು ಹಲವಾರು ಬಾರಿ ಕರೆಸಿ ವಿವಿಧ ಆಯಾಮದಲ್ಲಿ ವಿಚಾರಣೆ ನಡೆಸಿದೆ” ಎಂದು ಹೇಳಿದ್ದಾರೆ.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, “ಈ ಹುಡುಗರ ಮೇಲೆ ಮಂಪರು ಪರೀಕ್ಷೆ ಕೂಡಾ ಆಗಿದೆ. ಆದರೂ ಕೂಡಾ ಪ್ರಕರಣವನ್ನು ಟ್ವಿಸ್ಟ್ ಮಾಡಿ ಬೇರೆ ಬೇರೆ ರೀತಿಯಲ್ಲಿ ಡ್ಯಾಮೇಜ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದು ಬರಿಯ ಹಣ ಮಾಡುವ ತಂತ್ರ. ತಿಮರೋಡಿ ಮಹೇಶ್ ಶೆಟ್ಟಿ ಬೆಳ್ತಂಗಡಿ ತಾಲೂಕಿನ ಬಹಳ ಕೆಟ್ಟ ವ್ಯಕ್ತಿ. ಅವನು ರೌಡಿ ಶೀಟರ್ ಕೂಡಾ ಆಗಿದ್ದಾನೆ. ಅಲ್ಲದೆ ಹಣ ಮಾಡುವ ಒಂದೇ ಉದ್ದೇಶದಿಂದ ಸೌಜನ್ಯ ಮನೆಯವರನ್ನು ಉಪಯೋಗಿಸಿಕೊಂಡು ಇಂತಹ ಕೃತ್ಯ ಮಾಡುತ್ತಿದ್ದಾರೆ. ಇದಕ್ಕೆ ನಾವು ಭಯ ಪಡುವುದಿಲ್ಲ” ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *