ಬಿಜೆಪಿಯ ಸತ್ಯಾಶೋಧನಾ ಸಮಿತಿಯ ರಾಜಕೀಯ

ಶೈಲಜಾ ಹಿರೇಮಠ. ಗಂಗಾವತಿ
“ಯತ್ರ ನಾರಸ್ತು ಪೂಜೆಂತೆ, ತತ್ರ ರಮಂತೆ ದೇವತಃ”, ಎಲ್ಲಿ ನಾರಿಯರನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಸಂಸ್ಕೃತ ಶ್ಲೋಕವನ್ನು ಕಂಠಪಾಠ ಮಾಡಿಕೊಂಡು, ಹೆಣ್ಣನ್ನು ಭಾರತಮಾತೆ ಪೂಜ್ಯಳು ಎಂದು ಹಾದಿ ಬೀದಿಯಲ್ಲಿ ಭಾಷಣ ಮಾಡುತ್ತಾ “ಬೇಟಿ ಪಡವ್, ಬೇಟಿ ಬಚಾವ್” ಎಂದು ಘೋಷಣೆಯನ್ನು ಕೂಗುತ್ತಾ, ಅಧಿಕಾರಕ್ಕೆ ಬಂದ ಮಾನ್ಯ  ಮೋದಿಯವರ ಬಿಜೆಪಿ ಸರ್ಕಾರದಲ್ಲಿ ಕಳೆದ ಹತ್ತು ವರ್ಷಗಳಿಂದ ತಮ್ಮ ಆಡಳಿತದಲ್ಲಿ ಮಹಿಳೆಯರು ಅದೆಷ್ಟು ಸುರಕ್ಷಿತರು? ಎಂದು ಅವರೇ ಅವಲೋಕನ ಮಾಡಿಕೊಳ್ಳಬೇಕು. ಏಕೆಂದರೆ ಇಡೀ ಮನುಕುಲವೇ ನಾಚಿಕೆಪಡುವಂತಹ ಹೀನ ಕೃತ್ಯಗಳು ಅವರ ಆಡಳಿತದ ಕಾಲದಲ್ಲಿ ಹೆಚ್ಚು ನಡೆದಿರುತ್ತವೆ… ಅದಕ್ಕೆ ಉದಾಹರಣೆಯಾಗಿ ಸಾವಿರಾರು ಘಟನೆಗಳಿದ್ದರೂ, ಇಲ್ಲಿ ಎರಡು ಘಟನೆಗಳನ್ನು ಅವಲೋಕನ ಮಾಡೋಣ.‌

2012ರಲ್ಲಿ ದೆಹಲಿಯ ನಿರ್ಭಯಳ ಸಾಮೂಹಿಕ ಅತ್ಯಾಚಾರ ವಿಷಯವನ್ನು ಮುಂದಿಟ್ಟುಕೊಂಡು “ಬೇಟಿ ಪಡಾವ್, ಬೇಟಿ ಬಚಾವ್ “ಎಂದು ಇಡೀ ಭಾರತ ದೇಶದ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡ ಹಾಗೆ ರಂಜಿಸಿ, ತಮ್ಮವಾಟ್ಸಾಪ್ ಯೂನಿವರ್ಸಿಟಿ ಮೂಲಕ ಮನೆಮನೆಗೆ ಹೊಕ್ಕು, ಇಂದು ಮನೆಯಲ್ಲಿರುವ ಗೃಹಿಣಿಯರೂ ಸುರಕ್ಷಿತವಾಗಿಲ್ಲದ  ವಾತಾವರಣದ ಆಡಳಿತವನ್ನು ಬಿಜೆಪಿಯವರು ಮಹಿಳೆಯರಿಗೆ ಬಂಪರ್ ಬಹುಮಾನವಾಗಿ ಕೊಟ್ಟಿದ್ದಾರೆ.

ಬಿಜೆಪಿ ಸರ್ಕಾರ  ಮಹಿಳೆಯರ ಅಸ್ಮಿತೆಗೆ  ದಕ್ಕೆ ಉಂಟುಮಾಡಿದೆ.”ಬೇಟಿ ಪಡವ್, ಬೇಟಿ ಬಚಾವ್” ಎಂಬ ನಯಾ ಪೈಸೆ ಖರ್ಚಿಲ್ಲದ ಈ ಘೋಷಣೆಗೆ, ನಮ್ಮದೇ ಮಕ್ಕಳು ನಾವೇ ವಿದ್ಯಾಭ್ಯಾಸ ಕೊಡುವವರು, ನಾವೇ ಸಾಕಿ ಸಲಹುವ  ಪೋಷಕರು. ಇದರಲ್ಲಿ ಸರ್ಕಾರದ ಪಾತ್ರವೇನು ?  ಈ ಪುಕ್ಕಟ್ಟೆ ಘೋಷಣೆಯನ್ನೇ ಯೋಜನೆಯೆಂದು ನಂಬಿ ಭಾರತದ ಮಹಿಳೆಯರು ಯಾವುದೇ ಆಲೋಚನೆ ಮಾಡದೆ, ಅದರಲ್ಲೂ ಕೆಳ ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗದ ಮಹಿಳೆಯರು, ಮೋದಿಯವರು ತಮ್ಮನ್ನು ರಕ್ಷಣೆ ಮಾಡಲು ಬಂದ ಸಾಕ್ಷಾತ್ ದೇವರೆಂದು ನಂಬಿ ಅವರಿಗೆ ಮತ ಚಲಾಯಿಸಿದರು.  ಆದರೆ ಅವರ  ನಂಬಿಕೆಯನ್ನು ಉಳಿಸಿಕೊಂಡರೆ ಮಾನ್ಯ ಮೋದಿಯವರು ಎಂದು ನಮ್ಮ ಮಹಿಳೆಯರು ಯೋಚಿಸಬೇಕು.

ಮಾನ್ಯ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ವಾಸ್ತವದಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರಗಳು, ಬೆತ್ತಲೆ ಮೆರವಣಿಗೆಗಳು, ಲೈಂಗಿಕ ದೌರ್ಜನ್ಯಗಳು, ಕೊಲೆಗಳು,  ಹೆಣ್ಣು ಬ್ರೂಣ ಹತ್ಯೆಗಳು, ನಡೆದಷ್ಟು ಸ್ವಾತಂತ್ರ ಭಾರತದ ಹಿಂದಿನ ಬಿಜೆಪಿಯ ವಾಜಪೇಯಿ ಸರ್ಕಾರ ಸೇರಿದಂತೆ, ಯಾವುದೇ ಸರ್ಕಾರಗಳಲ್ಲಿಯೂ ಬಹುಶಃ ನಡೆದಿರಲಿಕ್ಕಿಲ್ಲ.ಮೇಲಿನ ಎಲ್ಲಾ ಆಘಾತಕಾರಿ ಘಟನೆಗಳನ್ನು ಖಂಡಿಸಿ, ತಮ್ಮ ” ಬೇಟಿ ಬಚಾವ್” ಎಂಬ ಮಾತನ್ನು ಉಳಿಸಿಕೊಳ್ಳಲು ವಿಫಲರಾದರು.

ಇದನ್ನೂ ಓದಿಪುಸ್ತಕ ವಿಮರ್ಶೆ| ವಿದ್ಯಾವಂತ ವೇಶ್ಯೆಯ ಆತ್ಮಕಥೆ, ಒಂದು ಒಳನೋಟ

2020ರಲ್ಲಿ ಉತ್ತರ ಪ್ರದೇಶದ ಹಥರಾಸ್ ನಲ್ಲಿ ದಲಿತ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆ ಭೀಕರ ದೃಶ್ಯಗಳು ಇಂದಿಗೂ ನಮ್ಮ ಕಣ್ಣಮುಂದಿದೆ.ಈ ಪ್ರಕರಣ ನಡೆದಾಗ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ  ಮಾನ್ಯ ಯೋಗಿವಆದಿತ್ಯನಾಥ್ ಹಾಗೂ  ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿಯವರು , ಘಟನೆ ಕುರಿತಂತೆ ತತಕ್ಷಣ ಒಂದು ಸಂತಾಪದ ಹೇಳಿಕೆಯನ್ನೂ ನೀಡಲಿಲ್ಲ.ಒಬ್ಬ ಮಹಿಳೆಯಾಗಿ ಶ್ರೀಮತಿ ಸೃತಿ ಇರಾನಿಯವರು ಖಂಡಿಸಲಿಲ್ಲ.

ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ರೆಯ ಕುಟುಂಬದವರಿಗೆ ಆಕೆಯ ಶವವನ್ನು ನೀಡದೆ, ಮಾಹಿತಿ ಇಲ್ಲದೆ ಆಕೆಯನ್ನು ಸುಟ್ಟ ರೀತಿ ಬಿಜೆಪಿಯ ದುರಾಡಳಿತಕ್ಕೆ ಕೈಗನ್ನಡಿಯಾಗಿದೆ.  ಅಂದು ರಾಷ್ಟ್ರೀಯ ಮಹಿಳಾ ಆಯೋಗ & ಬಿಜೆಪಿ ಮಹಿಳಾ ಮೋರ್ಚಾ ಮೌನವೃತ ಆಚರಿಸಿದವು. ಅಲ್ಲದೆ ಸಂತ್ರಸ್ತೆಯ ಕುಟುಂಬದವರಿಗೆ ಸಾಂತ್ವಾನ ಹೇಳ ಹೊರಟ ಕಾಂಗ್ರೆಸ್ ಪಕ್ಷದ ನಾಯಕಿ ಶ್ರೀಮತಿ ಪ್ರಿಯಾಂಕಗಾಂಧಿಯವರಿಗೆ, ಎದುರಿನಿಂದ ಅವರ ಬಟ್ಟೆಯನ್ನು ಹಿಡಿದು ಎಳೆದಾಡಿ, ಅವರೊಂದಿಗೆ ಅವಮಾನವೀಯವಾಗಿ ನಡೆದುಕೊಂಡ ಪೊಲೀಸರ ದುರ್ವತನೆ ಬಿಜೆಪಿಯ ದಬ್ಬಾಳಿಕೆಗೆ ಮತ್ತೊಂದು ಸಾಕ್ಷಿಯಾಗಿತ್ತು.

ಹಾಗೆಯೇ ಇತ್ತೀಚಿಗೆ ನಡೆದ ಮಣಿಪುರದ ಘಟನೆಯಂತೂ,  ಅನಾಗರಿಕ ಪುರುಷಮೃಗಗಳ ಅಟ್ಟಹಾಸಕ್ಕೆ ಒಂದು ನಿದರ್ಶನವಾಗಿತ್ತು. ಇಡೀ ದೇಶವೇ ಈ ಪ್ರಕರಣವನ್ನು ಖಂಡಿಸಿ ಹೋರಾಟ ಮಾಡಿದರೂ, ಇಂದಿಗೂ ಸಂತ್ರಸ್ತೆಯರು ನ್ಯಾಯ ಸಿಗದೇ ಕತ್ತಲ ಕೋಣೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಈ ಪ್ರಕರಣದಲ್ಲಿಯೂ ಮಾನ್ಯ ಮೋದಿಯವರು ತತಕ್ಷಣವೇ, ಒಂದೇ ಒಂದು ಸಂತಾಪದ ಹೇಳಿಕೆಯನ್ನು ನೀಡಲಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವೃತ ಆಚರಿಸಿತು. ಶ್ರೀಮತಿ ಸೃತಿ ಇರಾನಿಯವರಿಗೆ ತಾವೊಬ್ಬ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ,  ಸಂತ್ರಸ್ತರಿಗೆ ಸಾಂತ್ವಾನ ಹೇಳುವ ಸೌಜನ್ಯವೂ ತೋರಿಸಲಿಲ್ಲ. ಮೇಲಾಗಿ ದೇಶದ ಬುಡಕಟ್ಟು ಜನಾಂಗದ ದಲಿತ ಮಹಿಳಾ ರಾಷ್ಟ್ರಪತಿಗಳು ಕೂಡ ತಮ್ಮನ್ನು ಆಯ್ಕೆ ಮಾಡಿದ ಪಕ್ಷಕ್ಕೆ ನಿಷ್ಠೆ ತೋರಿದರು.

ಆದರೆ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಂತಹದೇ ಒಂದು ಅಹಿತಕರ ಭೀಕರ  ಪ್ರಕರಣ ಕರ್ನಾಟಕದ ಸಾಂಸ್ಕೃತಿಕ ಇತಿಹಾಸಕ್ಕೆ ಒಂದು ಕಪ್ಪು ಚುಕ್ಕೆ. ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆಯ ಮೇಲಿನ ಈ ಅವಮಾನವೀಯ ಹಿಂಸಾಕೃತ್ಯವನ್ನು ಕರ್ನಾಟಕದ ಜನತೆ ಎಂದು ಸಹಿಸುವುದಿಲ್ಲ.ಕಾಕತಾಳೀಯವೆಂಬತೆ, ಅದೇ ಸಮಯದ ಆಸುಪಾಸಿನಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನೆಡೆಯುವ ಸಂದರ್ಭದಲ್ಲಿ ಬೆಳಕಿಗೆ ಬಂದ ಈ ಘಟನೆಯನ್ನು ಕರ್ನಾಟಕದ ಕಾಂಗ್ರೆಸ್ ಪಕ್ಷದ ಸರ್ಕಾರ ತೀವ್ರವಾಗಿ ಖಂಡಿಸಿತು.

ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು, ತತಕ್ಷಣ ಈ  ಘಟನೆಯನ್ನು ತೀವ್ರವಾಗಿ ಖಂಡಿಸುವುದರೊಂದಿಗೆ ,ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಶಿಫಾರಸು ಮಾಡಿದರು ಮತ್ತು ತನಿಖೆಗೂ ಆದೇಶ ಮಾಡಿದರು. ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಮೀ ಹೆಬ್ಬಾಳಕರ್ ಸಂತ್ರಸ್ತೆಗೆ ಸಾಂತ್ವಾನ ಹೇಳುವುದರೊಂದಿಗೆ, ಆಕೆಗೆ ಸುರಕ್ಷತೆಯನ್ನು ಒದಗಿಸಿಕೊಟ್ಟರು. ಅಷ್ಟೇ ಅಲ್ಲದೆ ಸಂತ್ರಸ್ತೆಯ ಆರ್ಥಿಕ ನಿರ್ವಹಣೆಗಾಗಿ ಎರಡು ಎಕರೆ ಭೂಮಿಯನ್ನು ಸರ್ಕಾರದಿಂದ ಕೊಡಿಸುವುದರೊಂದಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಮಾನ್ಯ ಸತೀಶ್ ಜಾರಕಿಹೊಳಿಯವರು ಮಾನವೀಯತೆ ಮೆರೆದರು. ಇದು ಸರ್ಕಾರದ ಜವಬ್ದಾರಿಯೆನ್ನುವುದನ್ನು ಅರಿತು ನೆಡೆದರು.

ಉತ್ತರ ಭಾರತದ ಎರಡು ಘಟನೆಗಳು ನಡೆದಾಗ ತತಕ್ಷಣ ಸ್ಪಂದಿಸದ ಬಿಜೆಪಿ ಸರ್ಕಾರ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ರಾಷ್ಟ್ರಾಧ್ಯಕ್ಷರಾದ ನಡ್ದಾ, ರಾಜ್ಯದ ಬಿಜೆಪಿ ನಾಯಕರುಗಳು, ಬಿಜೆಪಿ ಮಹಿಳಾ ಮೋರ್ಚಾದವರು, ಬೆಳಗಾವಿ ಘಟನೆಯನ್ನು ಖಂಡಿಸಿ ಹೇಳಿಕೆ ಕೊಡುತ್ತಿರುವುದು ಅದೆಷ್ಟು ಸರಿ? ಮಂಡ್ಯದಲ್ಲಿ  ಬಿಜೆಪಿ ಮಹಿಳಾ ಮೋರ್ಚಾ  ಹಮ್ಮಿಕೊಂಡ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕರಾದ ಆರ್.‌ ಅಶೋಕ್ ಅವರು ಬೆಳಗಾವಿ ಪ್ರಕಟಣೆಯನ್ನು ಖಂಡಿಸುವ ಬದ್ಧತೆ ಇರುವಷ್ಟು, ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಅನೇಕ ಇಂತಹ ಹೇಯಕೃತ್ಯಗಳಿಗೆ ಅದೆಷ್ಟು ಸ್ಪಂದನೆ ನೀಡಿದ್ದಾರೆ ಎಂಬುದು ತಮಗೆ ತಾವೇ ಮನವರಿಕೆ ಮಾಡಿಕೊಳ್ಳಬೇಕು.

ಮಣಿಪುರ ಬೆತ್ತಲೆ ಪ್ರಕರಣ

ಕೊಪ್ಪಳ ಜಿಲ್ಲೆಯವರಾದ ವಿಧಾನಪರಿಷತ್ತಿನ ಸದಸ್ಯರಾದ,ನನ್ನ ಸ್ನೇಹಿತರು ಆದ ಶ್ರೀಮತಿ ಹೇಮಲತಾ ನಾಯಕ ಅವರು ಕೂಡ ಬೆಳಗಾವಿ ಘಟನೆ ಖಂಡಿಸಿ ಪ್ರತಿಭಟನೆಮಾಡಿದರು, ಅವರು ಮೇಲಿನ ಘಟನೆಗಳಿಗೆ ಯಾಕೆ ಸ್ಪಂದಿಸಲಿಲ್ಲ ? ಅಂದರೆ, ಬಿಜೆಪಿ ರಾಜಕೀಯದ ಲಾಭಕ್ಕಾಗಿ, ಮಹಿಳೆಯರ ಇಂತಹ ಹೀನಕೃತ್ಯಗಳನ್ನು ಬಳಸಿಕೊಳ್ಳುತ್ತಿದೆಯೇ ? ಅದರಲ್ಲೂ ರಾಷ್ಟ್ರೀಯ ಮಹಿಳಾ ಆಯೋಗದವರು ಹಾಗೂ ರಾಷ್ಟ್ರೀಯ ಬಿಜೆಪಿ ಮಹಿಳಾ ನಾಯಕಿಯರು ಇಂದು “ಸತ್ಯಶೋಧನಾ ಸಮಿತಿ” ರಚನೆ ಮಾಡಿಕೊಂಡು ಬೆಳಗಾವಿಗೆ ಆಗಮಿಸಿರುವುದು ಇವರ ಬಂಢತನವಲ್ಲದೆ ಇನ್ನೇನು ?

ಮಹಿಳೆ ಶತಮಾನಗಳಿಂದಲೂ ಶೋಷಿತಳು. ಇಂದಿಗೂ ಆಕೆಯನ್ನು ದ್ವಿತೀಯ ದರ್ಜೆಯ ಪ್ರಜೆಗಳಾಗಿ ನೋಡುತ್ತಿರುವುದು ಅವಮಾನವೀಯ. ಈ ಹಿಂದೆ ಎಲ್ಲಾ ಪಕ್ಷದವರ ಆಡಳಿತದಲ್ಲಿಯೂ ಇಂತಹ ಅನೇಕ ಕೃತಗಳು ಜರುಗಿವೆಯಾದರೂ ಹಿಂದಿನ ಯಾವುದೇ ಸರ್ಕಾರಗಳು ಪ್ರಕರಣ ಬೆಳಕಿಗೆ ಬಂದಾಕ್ಷಣ ತೀವ್ರವಾಗಿ ಖಂಡಿಸಿ ಸಂತ್ರಸ್ತೆಯರ ಪರವಾಗಿ ನಿಂತು ನಿಷ್ಪಕ್ಷ ಧೋರಣೆ ತಾಳುತ್ತಿದ್ದವು.

ಯಾವ ನಿರ್ಭಯ ಪ್ರಕರಣವನ್ನು ಆಯುಧವನ್ನಾಗಿಟ್ಟುಕೊಂಡು ಚುನಾವಣಾ ರ್ಯಾಲಿಗಳನ್ನು ಮಾಡಿ ಆಡಳಿತಕ್ಕೆ ಬಂದ ಬಿಜೆಪಿಯವರೋ, ಅಧಿಕಾರ ಬಂದ ಮೇಲೆ ಮಹಿಳೆಯರಿಗೆ ನ್ಯಾಯ ಕೊಡಿಸಲು ಎಂದೂ ಒತ್ತಾಸೆಯಾಗಿ ನಿಲ್ಲಲಿಲ್ಲ .ಆದರೆ ಅಂದಿನ ಪ್ರಧಾನ ಮಂತ್ರಿಗಳಾದ ಶ್ರೀ ಮನಮೋಹನ್ ಸಿಂಗ್ ಅವರು ನಿರ್ಭಯ ಪ್ರಕರಣವನ್ನು ಖಂಡಿಸಿ, ಅದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಪ್ರಕರಣಕ್ಕಾಗಿಯೇ, “ತ್ವರಿತ ನ್ಯಾಯಾಲಯ” ಗಳ ನಿರ್ಮಾಣ ಮಾಡಿ ತ್ವರಿತಗತಿಯಲ್ಲಿ ಆಕೆಯ ಪ್ರಕರಣಕ್ಕೆ ನ್ಯಾಯಸಿಗುವಲ್ಲಿ ಮಾನವೀಯತೆ ಮೆರೆದರು. ಅಲ್ಲದೆ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ನಿರ್ಭಯ ಸಹೋದರನ ಸಂಪೂರ್ಣ ವಿದ್ಯಾಭ್ಯಾಸದ ಹೊಣೆ ಹೊತ್ತರು.‌

ಆದರೆ, ಇಂದು ಕರ್ನಾಟಕದ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿರುವುದು ಸರಿಯೇ? ಮಹಿಳೆಯರ ಇಂತಹ ಹೀನಕೃತ್ಯಗಳನ್ನು ತಮ್ಮ ರಾಜಕೀಯ ತೆವಲಿಗೆ ಬಳಸಿಕೊಳ್ಳುವ ಬಿಜೆಪಿ ಪಕ್ಷದ ಈ “ಸತ್ಯ ಶೋಧನಾ ಸಮಿತಿ”ಯು ,  ಸಂತ್ರಸ್ತರಿಗೆ ಯಾವ ರೀತಿ ನ್ಯಾಯ ಕೊಡಬಲ್ಲದು? ಎನ್ನುವುದನ್ನು ಕಾದು ನೋಡಬೇಕು. ಅದೇನೇ ಇರಲಿ ಮಹಿಳೆಯರ ಮೇಲಿನ ಇಂತಹ ದೌರ್ಜನ್ಯಗಳು ಮತ್ತು ಹಿಂಸಾಚಾರ ನಡೆದಾಗ ಪಕ್ಷಭೇದ ಮರೆತು ಮಹಿಳೆಯರ ಜೊತೆ ನಿಲ್ಲುವುದು ನಾಗರಿಕ ಸಮಾಜದ ಕರ್ತವ್ಯ ಮತ್ತು ಜವಾಬ್ದಾರಿ . ಇದನ್ನು ಆಡಳಿತ ಮಾಡುವ ಯಾವುದೇ ಪಕ್ಷದವರು ಅರ್ಥಮಾಡಿಕೊಳ್ಳಬೇಕು.

ಈ ವಿಡಿಯೋ ನೋಡಿಬಿಗ್‌ ಡಿಬೇಟ್‌ : ಐದು ರಾಜ್ಯಗಳ ಚುನಾವಣಾ ಫಲಿತಾಂಶ 2023| Assembly Election Results 2023

 

 

 

Donate Janashakthi Media

Leave a Reply

Your email address will not be published. Required fields are marked *