ಬೆಂಗಳೂರು: ಕೇಂದ್ರದ ಬಿಜೆಪಿ ಸರಕಾರವು ಅಗತ್ಯ ವಸ್ತುಗಳ ಬೆಲೆಗಳನ್ನು ನಿರಂತರವಾಗಿ ಏರಿಸುತ್ತಲೇ ಇದೆ. ಇದರಿಂದ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪೆಟ್ರೋಲ್-ಡೀಸೆಲ್ ಬೆಲೆ, ಧಾನ್ಯಗಳ ಬೆಲೆ, ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಹಾಗೂ ಅಡುಗೆ ಎಣ್ಣೆಯ ಬೆಲೆ ಏರಿಕೆ ವಿರುದ್ಧ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಸಂಘಟನೆಯು ರಾಜ್ಯವ್ಯಾಪಿಯಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು.
ಬೆಲೆಗಳ ನಿರಂತರ ಏರಿಕೆಯಿಂದಾಗಿ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸಿದ್ದು, ಬದುಕು ನಡೆಸುವುದೇ ದುಸ್ತರವಾಗಿದೆ. ವರ್ಷದ ಆರಂಭದಿಂದಲೂ ದರ ಹೆಚ್ಚಳವಾಗುತ್ತಿರುವ ಸಿಲಿಂಡರ್ ಬೆಲೆ ಈಗ ಏಕಾಏಕಿ 25 ರೂಪಾಯಿ ಹೆಚ್ಚಳದೊಂದಿಗೆ 826 ರೂ.ಗಳಾಗಿದೆ. ಈ ತಿಂಗಳಲ್ಲೇ 1000 ರೂಪಾಯಿ ಆಗಲಿದೆ ಅನ್ನೋ ಆತಂಕ ಶುರುವಾಗಿದೆ. ಇನ್ನು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 96 ರೂಪಾಯಿ ಏರಿಕೆಯಾಗಿದೆ. ಇದೀಗ ಕಮರ್ಷಿಯಲ್ ಸಿಲಿಂಡರ್ ದರ 1,666 ರೂಪಾಯಿ ಆಗಿದೆ ಎಂದು ಡಿವೈಎಫ್‌ಐ ಸಂಘಟನೆಯು ಆರೋಪಿಸಿದೆ.
ಇದನ್ನು ಓದಿ: ಖಾಸಗಿ ಬಸ್ ದರ ಏರಿಕೆ ಹಿನ್ನಲೆ: ಸಾರಿಗೆ ಪ್ರಾಧಿಕಾರದ ಸಭೆ ಕರೆಯಲು ಡಿವೈಎಫ್‌ಐ ಆಗ್ರಹ
ಕೇಂದ್ರದಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದ ಮೇಲೆ ಗ್ಯಾಸ್ ಹಾಗೂ ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಏರಿಕೆ ಮಾಡಿದರಿಂದ ಜನ ಸಾಮಾನ್ಯರು ಜೀವನ ನಡೆಸಲು ತೊಂದರೆಯಾಗಿದೆ. ಅದರೊಂದಿಗೆ ಈಗ ಮತ್ತೆ ಗ್ಯಾಸ್ ಬೆಲೆ ಹೆಚ್ಚಳ ಮಾಡುವ ಮೂಲಕ ಸರಕಾರ ಜನ ಸಾಮಾನ್ಯರ ಬದುಕಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಡಿವೈಎಫ್ಐ ಆಕ್ರೋಶ ವ್ಯಕ್ತಪಡಿಸಿದೆ.
ಈ ಹಿಂದೆ ಸಬ್ಸಿಡಿ ದರದಲ್ಲಿ ಜನರು ಖರೀಸುತ್ತಿದ್ದ ಸಿಲಿಂಡರ್ ಬೆಲೆಗಳು ಈಗಿನ ದರಕ್ಕಿಂತ ಅರ್ಧಕ್ಕಿಂತ ಕಡಿಮೆ ಇದ್ದವು. ಆದರೆ, ಆಡಳಿತರೂಢ ಸರಕಾರವ ಸಬ್ಸಿಡಿ ಹಣವನ್ನು ನೇರ ಬ್ಯಾಂಕ್ ಖಾತೆಗೆ ವರ್ಗವಣೆ ಮಾಡುವೆ ಎಂದು ನಂಬಿಸಿ ಜನರಿಂದ ದುಬಾರಿ ಬೆಲೆಗೆ ಸಿಲಿಂಡರ್ ಕೊಳ್ಳುವಂತೆ ಮಾಡಿತು. ಇತ್ತ ದೇಶದ ಲಕ್ಷಾಂತರ ಮಂದಿಗೆ ಸಬ್ಸಿಡಿ ಹಣವೂ ವರ್ಗಾವಣೆಯಾಗದೆ ದುಬಾರಿ ಸಿಲಿಂಡರ್ ಖರೀದಿ ಮಾಡುತ್ತಿದ್ದು, ಗ್ಯಾಸ್ ಸಿಲಿಂಡರ್‌ನ ಮಾರುಕಟ್ಟೆ ದರದಲ್ಲೇ ಖರೀದಿಸುವುದರಿಂದ ಜನರ ಜೀವನ ನಿರ್ವಹಣೆ ದುಸ್ಥಿತಿಗೆ ದೂಡಿದೆ ಎಂದು ಸಂಘಟನೆ ವಿವರಿಸಿದರು.
ಸರಕಾರ ಕೂಡಲೇ ಏರಿಸಿರುವ ಸಿಲಿಂಡರ್ ಗ್ಯಾಸ್ ಬೆಲೆ ಇಳಿಸುವ ಮೂಲಕ ಜನ ಸಾಮಾನ್ಯರಿಗೆ ಆಸರೆಯಾಗಬೇಕು. ಇಲ್ಲವಾದಲ್ಲಿ ಜನತೆ ಮತ್ತಷ್ಟು ತೀವ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಡಿವೈಎಫ್‌ಐ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕಾರ್ಯದರ್ಶಿ ಬಸವರಾಜ ಪೂಜಾರ ಅವರ ನೇತೃತ್ವದಲ್ಲಿ ಕಾರ್ಯಕರ್ತರು ರಾಜ್ಯವ್ಯಾಪಿ ತಾಲೂಕಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಒತ್ತಾಯಿಸಿದ್ದಾರೆ.