ಚೆನ್ನೈ : ಎಐಡಿಎಂಕೆ ಉಚ್ಚಾಟಿತ ನಾಯಕಿ ಹಾಗೂ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪ್ತೆ ವಿ. ಕೆ ಶಶಿಕಲಾ ಅವರಿಗೆ ಸಂಬಂಧ ಪಟ್ಟ 100 ಕೋಟಿ ಮೌಲ್ಯದ 11 ಆಸ್ತಿಯನ್ನ ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.
ಚೆನೈನ ಹೊರವಲಯದ ಸಿರುತಾವೂರ್ ಬಳಿಯ ಪಯ್ಯನೂರಿನಲ್ಲಿರೋ ಈ ಆಸ್ತಿಯನ್ನು 1991ರಿಂದ 1996ರ ಸಂದರ್ಭದಲ್ಲಿ ಜಯಲಲಿತಾ ಸಿಎಂ ಆಗಿದ್ದಾಗ ಶಶಿಕಲಾ 20 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ರು ಎಂಬ ಮಾಹಿತಿ ಲಭ್ಯವಾಗಿದೆ.
2014ರಲ್ಲಿ ಕರ್ನಾಟಕದ ವಿಶೇಷ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ಜಾನ್ ಮೈಕೇಲ್ ಕುನ್ಹಾ ಅವರು ನೀಡಿದ್ದ ತೀರ್ಪಿನಲ್ಲಿ ಅಕ್ರಮ ಆಸ್ತಿ ಗಳಿಕೆಯಲ್ಲಿ ಜಯಲಲಿತಾ, ಆಕೆ ಆಪ್ತ ಸಹಾಯಕಿ ಶಶಿಕಲಾ, ಸಂಬಂಧಿಗಳಾದ ಇಳವರಸಿ, ಸುಧಾಕರನ್ ಗೆ ಸೇರಿರುವ 11 ಆಸ್ತಿಗಳನ್ನು ಪಟ್ಟಿ ಮಾಡಿದ್ದರು.
1990ರಲ್ಲಿ ಈ ಆಸ್ತಿಯನ್ನು ಖರೀದಿಸಿದ ವೇಳೆ ಇದರ ಮೌಲ್ಯ ಅಂದಾಜು 20 ಲಕ್ಷ ಇದ್ದಿರಬಹುದು, ಆದರೆ ಪ್ರಸಕ್ತ ಈ ಆಸ್ತಿಯ ಮೌಲ್ಯ ಸುಮಾರು 100 ಕೋಟಿ ರೂಪಾಯಿಯದ್ದಾಗಿದೆ ಎಂದು ವರದಿ ತಿಳಿಸಿದೆ. 2014ರಲ್ಲಿ ನ್ಯಾಯಾಲಯ ನೀಡಿರುವ ತೀರ್ಪಿನ ಪ್ರಕಾರ, ಆದಾಯ ತೆರಿಗೆ ಇಲಾಖೆ ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆಯಡಿ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ಹೇಳಿದೆ.
67 ವರ್ಷದ ಶಶಿಕಲಾ ಭ್ರಷ್ಟಾಚಾರ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ನಂತರ ಈ ವರ್ಷದ ಆರಂಭದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು. ತಮಿಳುನಾಡಿಗೆ ವಾಪಸ್ ಹೋಗಿದ್ದ ಸಂದರ್ಭದಲ್ಲಿ ಅವರ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿಕೊಂಡಿದ್ದರು. ಈಗ ಐಟಿ ಸಂಕಷ್ಟ ಎದುರಾಗಿದ್ದು ಕಾರ್ಯಕರ್ತರ ಉತ್ಸಾಹ ಕುಗ್ಗಿದ್ದಂತಾಗಿದೆ.