ಸರ್ವೋಚ್ಚ ನ್ಯಾಯಾಲಯದಲ್ಲಿ ನಿರ್ಧಾರವಾಗುವವರೆಗೂ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ

ಶಿರಸಿ: ಅರಣ್ಯ ವಾಸಿಗಳ ಹಕ್ಕಿನ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಸರ್ಕಾರ ತನ್ನ ವರದಿಯನ್ನು ಸಲ್ಲಿಸಿದ್ದು, ಮತ್ತೊಂದು ವರದಿಯನ್ನು ಸಹ ಸಲ್ಲಿಸುತ್ತೇವೆ. ನಮ್ಮ ಸರಕಾರ ಯಾವುದೇ ಕಾರಣಕ್ಕೂ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ಕೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ನಿರ್ಣಯ ಆಗುವವರೆಗೂ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು. ಪ್ರವಾಹ ಬಂದಾಗ ಅರಣ್ಯ ವಾಸಿಗಳಿಗೆ ಸಮಸ್ಯೆಯಾಗುತ್ತಿದೆ. ಪರಿಹಾರ ನೀಡಲು ಕಾನೂನು ಸಮಸ್ಯೆಗಳಿದ್ದರೂ ಪರಿಹಾರ ಕೊಟ್ಡಿದ್ದೇವೆ. ಅರಣ್ಯ ವಾಸಿಗಳಿಗೆ ಮನೆ, ಜಮೀನು ಕೊಡುವ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಅರಣ್ಯ ವಾಸಿಗಳಿಗೆ ಮೂರು ತಲೆಮಾರು ಬದಲು ಒಂದು ತಲೆಮಾರು ಎಂದು ಪರಿಗಣಿಸಿ ಜಮೀನು ಮಂಜೂರು ಮಾಡಲಾಗುವುದು ಎಂಬ ಭರವಸೆ ನೀಡಿದರು.

ಇದನ್ನು ಓದಿ: ಅರಣ್ಯ ಇಲಾಖೆ ಕಿರುಕುಳ ಖಂಡಿಸಿ-ಬಗರ್‌ ಹುಕುಂ ಸಾಗುವಳಿ ಭೂಮಿ ಹಕ್ಕುಪತ್ರಕ್ಕೆ ಆಗ್ರಹಿಸಿ ಕೆಪಿಆರ್‌ಎಸ್‌ ಪ್ರತಿಭಟನೆ

ಶಿರಸಿಯಲ್ಲಿರುವ ತೋಟಗಾರಿಕೆ ಹಾಗೂ ಅರಣ್ಯ ಕಾಲೇಜುಗಳನ್ನು ಸಮೀಕರಿಸಿ ಪರಿಸರ ಮತ್ತು ಇತರ ಅಧ್ಯಯನಕ್ಕೆ ಅನುಕೂಲವಾಗುವ ರೀತಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು. ಮುಂದಿನ ಆಯವ್ಯಯದಲ್ಲಿ ಈ ಭಾಗದ ಜನರಿಗಾಗಿ ಘೋಷಣೆ ಮಾಡಲಾಗುವುದು ಎಂದು ಹೇಳಿದರು.

ಶಿರಸಿ ಜಿಲ್ಲೆ ಮಾಡಬೇಕೆಂಬ ಬೇಡಿಕೆ ಬಗ್ಗೆ ಹಲವು ಕಡೆಗಳಿಂದಲೂ ಇದೆ. ಅದರ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಬಹುಮುಖ ಪ್ರತಿಭೆಯುಳ್ಳವರಗಿದ್ದು, ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕಕ್ಕೆ ಲೋಕಾಯುಕ್ತ ತಂದಿದ್ದಾರೆ. ಯಾವ ವಿಚಾರದ ಮೇಲೆ ಅವರ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಚರ್ಚೆಯೂ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕ್ಷೇತ್ರದಲ್ಲಿ 250 ಕೋಟಿಗಿಂತ ಹೆಚ್ಚು ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇನೆ. ಆಸ್ಪತ್ರೆ ನಿರ್ಮಾಣ, ಸರ್ಕಾರಿ ಶಾಲೆ, ಉನ್ನತ ಶಿಕ್ಷಣ, ಲೋಕೊಪಯೊಗಿ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಂದ ಅನುದಾನ ವಿನಿಯೋಗವಾಗಿದೆ ಎಂದು ಹೇಳಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಶಿವರಾಮ್‌ ಹೆಬ್ಬಾರ್‌, ಸಿಸಿ ಪಾಟೀಲ, ಆರ್.ವಿ.ದೇಶಪಾಂಡೆ ಮೊದಲಾದವರು ಇದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *