‘ಸರ್ವರಿಗೂ ಸಂವಿಧಾನ’ ತಲುಪಿಸುವ ಬಹುತ್ವ ಭಾರತ ಕಥನ

ಬರಹ ಹಾಗೂ ಚಿತ್ರಗಳು ಐವನ್‌ ಡಿಸಿಲ್ವ

ಕೇಂದ್ರ ಸರ್ಕಾರದ ‘ಸರ್ವರಿಗೂ ಸಂವಿಧಾನ’ ಯೋಜನೆಯ ಅಡಿಯಲ್ಲಿ ರಾಜ್ಯದ ರಂಗಾಯಣ ಮೈಸೂರು, ರಂಗಾಯಣ ಶಿವಮೊಗ್ಗ, ಮತ್ತು ರಂಗಾಯಣ ಕಲಬುರ್ಗಿ ಸಂಸ್ಥೆಗಳು ಭಾರತದ ಸಂವಿಧಾನದ ಕುರಿತು ನಾಟಕ ಯೋಜನೆಯನ್ನು ಕೈಗೆತ್ತಿಕೊಂಡಿದ್ದವು.

ಪ್ರಥಮವಾಗಿ ಕಲಬುರ್ಗಿ ರಂಗಾಯಣವು ಕಳೆದ ವರ್ಷದಲ್ಲೇ  ‘ಬಹುತ್ವ ಭಾರತ ಕಥನ’  ನಾಟಕದ ತಯಾರಿಯಲ್ಲಿ ತೊಡಗಿತ್ತು. ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಅಪ್ಪಗೆರೆ ಸೋಮಶೇಖರ್ ರಚಿಸಿದ ನಾಟಕ ಕೃತಿಯನ್ನುನಿರ್ದೇಶಕ  ಅನಿಲ್ ರೇವೂರ್ ಅದ್ಭುತ ರಂಗಕೃತಿಯನ್ನಾಗಿ ಮಾರ್ಪಡಿಸಿ ರಂಗದ ಮೇಲೆ ತಂದಿದ್ದರು. ಪ್ರಥಮ ಪ್ರದರ್ಶನಕ್ಕೆ ವಿದ್ವಾಂಸರಿಂದಲೂ ವಿಮರ್ಶಕರಿಂದಲೂ ತುಂಬಾ ಒಳ್ಳೆಯ ಪ್ರತಿಕ್ರಿಯೆಗಳು, ಪ್ರಶಂಸೆಗಳು ಬಂದಿದ್ದವು.

ಆದರೆ ಕೋವಿಡ್ ಎರಡನೆಯ ಅಲೆಯ ಅಬ್ಬರದಲ್ಲಿ ಮುಂದಿನ ಪ್ರದರ್ಶನಗಳನ್ನು ರದ್ದುಗೊಳಿಸಬೇಕಾಯಿತು. ಒಂದು ವರ್ಷದ ಬಳಿಕ ಕೊರೊನಾ ಅಲೆಯು ಕಡಿಮೆಯಾದ ಮೇಲೆ ಈ ನಾಟಕವನ್ನು ಪುನಃ ಕಟ್ಟುವ ಕೆಲಸ ಪ್ರಾರಂಭವಾದಾಗ ಅನೇಕ ಅಡ್ಡಿಗಳು ಎದುರಾದುವು. ತರಬೇತಾದ ಬಹುತೇಕ ನಾಟಕದ ಕಲಾವಿದರು ಹೊಟ್ಟೆಪಾಡಿಗಾಗಿ ಬೇರೆ ಬೇರೆ ಕಡೆಗಳಿಗೆ ವಲಸೆ ಹೋಗಿದ್ದರಿಂದ ಹೊಸನಟರಿಂದ ನಾಟಕ ಕಟ್ಟ ಬೇಕಾಯಿತು. ಆದರೆ ನಿರ್ದೇಶಕರಾದ ಅನೀಲ್ ರೇವೂರ್ ಈ ಅಡ್ಡಿ ಆತಂಕಗಳನ್ನು ಸಮರ್ಥವಾಗಿ ನಿಭಾಯಿಸಿ ಬರೀ ಹದಿನೈದು ದಿನಗಳಲ್ಲಿ ಹೊಸ ನಟ ನಟಿಯರಿಂದ ಲವಲವಕೆಯ ರಂಗಕೃತಿಯನ್ನುಕಟ್ಟಿದ್ದಾರೆ.

ನಾಡನ್ನು ಪ್ರತಿನಿತ್ಯ ನಿರಂತರವಾಗಿ ಸ್ವಚ್ಚಗೊಳಿಸುವ ಪೌರಕಾರ್ಮಿಕರ ತಂಡದಿಂದ ಇಡೀ ಒಂದೂಮುಕ್ಕಾಲು ಗಂಟೆ ಅವಧಿಯ ನಾಟಕವನ್ನು ಅತ್ಯಂತ ಲವಲವಿಕೆಯಿಂದ ರಂಗದ ಮೇಲೆ ಪ್ರದರ್ಶಿಸಿದ್ದಾರೆ. ಸಂವಿಧಾನ ರಚನೆಯ ಅನೇಕ ಮಗ್ಗುಲುಗಳನ್ನು, ಅದು ಹೇಗೆ ಸಂವಿಧಾನ ಸಮಿತಿಯ ಸದಸ್ಯರುಗಳ ನಿಷ್ಕ್ರಿಯತೆಯಿಂದ ಸಂವಿಧಾನ ರಚನೆಯ ಸಂಪೂರ್ಣ ಭಾರ ಡಾ. ಬಿ ಆರ್ ಅಂಬೇಡ್ಕರ್ ರವರ ಹೆಗಲ ಮೇಲೆ ಬಿತ್ತು, ಸಂವಿಧಾನ ಅಂಗೀಕಾರದ  ವೇಳೆಯಲ್ಲಿ ನಡೆದ ಬಿಸಿಬಿಸಿ ಚರ್ಚೆಗಳು, ಸಂವಿಧಾನದ ಮೂಲ ಆಶಯಗಳು, ಮೀಸಲಾತಿಯ ಕುರಿತು ಸಮಾಜದಲ್ಲಿ ಬಿತ್ತಲಾಗುತ್ತಿರುವ ತಪ್ಪು ಕಲ್ಪನೆಗಳು, ಮಹಿಳಾ ಸಮಾನತೆಗೆ ಸಂವಿಧಾನ ನೀಡಿದ ಪ್ರಾಧಾನ್ಯತೆ. ಇತ್ಯಾದಿಗಳನ್ನು ನಟನೆಯ ಮೂಲಕ, ಸ್ಲೈಡ್ ಶೊ ಮೂಲಕ ಹಾಡು ಮತ್ತು ಸಂಭಾಷನೆಗಳ ಮೂಲಕ ಅತ್ಯಂತ ಸರಳವಾಗಿ ಅತೀ ಸಾಮಾನ್ಯ ಜನರೂ ಅರ್ಥಮಾಡಿಕೊಳ್ಳುವಂತೆ ವಿವರಿಸಲಾಗಿದೆ.

ಸಂವಿಧಾನದ ಉದಾತ್ತ ಹಾಗೂ ಕ್ರಾಂತಿಕಾರಿ ಆಶಯಗಳಿದ್ದರೂ ಹೇಗೆ ಸಂವಿಧಾನ ಅಂಗೀಕಾರವಾದ ಇಷ್ಟು ದಶಕಗಳ ಬಳಿಕವೂ ಮನುಷ್ಯನ ಮಲದ ಸ್ವಚ್ಚತೆಗಾಗಿ ಮಲದ ಗುಂಡಿಯ ನಿರ್ವಹಣೆಗಾಗಿ ದಾರುಣವಾಗಿ ಜೀವ ತೆರುವ ಪೌರಕಾರ್ಮಿಕರ ಶೋಚನೀಯ ಸ್ಥಿತಿಯನ್ನು, ಸಂವಿಧಾನ ಅನುಷ್ಠಾನದ ಮೊದಲಿನ ಕಾಲದಲ್ಲಿ ದಲಿತ ಶೂದ್ರ ಮಹಿಳೆಯರಿಗೆ ತಮ್ಮ ಸ್ತನಗಳನ್ನು ಬಟ್ಟೆಯಿಂದ ಮುಚ್ಚುವ ಸ್ವಾತಂತ್ರ್ಯವನ್ನೂ ನೀಡದ ಸಮಾಜದ ವಿರುದ್ಧ ಬಂಡೆದ್ದು ಸಾವಿನಪ್ಪಿದ ವೀರ ಮಹಿಳೆ ನಂಗೇಲಿಯ ಕಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸಲಾಗಿದೆ.

ನಾಟಕಕ್ಕೆ ಸಂಗಿತ ನೀಡಿದ ಪಿಚ್ಚಳ್ಳಿ ಶ್ರೀನಿವಾಸ್ ತಮ್ಮ ಹಳೆಯ ಕಸುವನ್ನು ಇನ್ನು ಕಳೆದುಕೊಂಡಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ನಾಟಕದ ಹೈಲೈಟ್ಸ್ ಗಳೆಂದರೆ ಸಂಗೀತ ಹಾಗೂ ಅಮೋಘ ಸೆಟ್ಟಿಂಗ್ ಗಳು. ಸೆಟ್ಟಿಂಗ್ ನ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನಿರ್ವಹಿಸಿದ ನಿರ್ದೇಶಕ ಅನಿಲ್ ರೇವೂರ್ ತಮ್ಮ ಸಿಗ್ನೇಚರ್ ಮಾರ್ಕ್ (ವೈಯಕ್ತಿಕ ಛಾಪನ್ನು) ಮೂಡಿಸಲು ಯಶಸ್ವಿಯಾಗಿದ್ದಾರೆ. ನಟರುಗಳು ಬಹುತೇಕ ರಂಗಭೂಮಿಗೆ ಹೊಸಬರುಗಳೇ ಆಗಿರುವುದರಿಂದ ತಮ್ಮ ತಮ್ಮ ಪಾತ್ರಗಳಿಗೆ ಕೊರತೆಯನ್ನು ಮಾಡದೇ ನಟಿಸಿದ್ದಾರೆ. ನಟನೆಯ ವಿಭಾಗದಲ್ಲಿ ಮುಂದಿನ ಪ್ರದರ್ಶನಗಳಲ್ಲಿ ಇನ್ನೂ ಹೆಚ್ಚಿನ ಸುಧಾರಣೆಯನ್ನು ನಿರೀಕ್ಷಿಸಬಹುದಾಗಿದೆ.

ಸಂವಿಧಾನದ ಮೇಲೆ ಇತ್ತೀಚೆಗೆ ನಡೆಯುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ಭಾರತದ ಸಂವಿಧಾನವನ್ನು ಸರಳವಾಗಿ ಮನಮುಟ್ಟುವಂತೆ ನಾಟಕ ರಚಿಸಿದ ಡಾ ಅಪ್ಪಗೆರೆ ಸೋಮಶೆಖರ್, ನಿರ್ದೇಶಕ ಅನೀಲ್ ರೇವೂರ್, ಪಿಚ್ಚಳ್ಳಿ ಶ್ರೀನಿವಾಸ್. ಸಹ ನಿರ್ದೇಶಕ ಪ್ರದೀಪ್ ಗಜಿ ಮತ್ತು ಕಲಬುರ್ಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಷಿ ಹಾಗೂ ಆಡಳಿತಾಧಿಕಾರಿ ಜಗದೀಶ್ವರಿ ಅ. ನಾಸಿ ಇವರುಗಳು ಸ್ತುತ್ಯಾರ್ಹರು.  ಕಲಬುರ್ಗಿಯ ಸುತ್ತಮತ್ತ ಹಲವಾರು ಪ್ರದರ್ಶನಗಳು ಈಗಾಗಲೇ ಯೋಜಿತವಾಗಿದ್ದು ಕರ್ನಾಟಕದ ಬೆಂಗಳೂರು ಸೇರಿದಂತೆ ಮೈಸೂರು, ಕೋಲಾರ, ತುಮಕೂರು, ಚಾಮರಾಜ ನಗರ, ಹಾಸನ ಮಂಗಳೂರು ಜಿಲ್ಲೆಗಳಂದ ಬುತ್ವ ಭಾರತದ ಕಥನ ನಾಟಕ ಪ್ರದರ್ಶನಕ್ಕಾಗಿ ಬೇಡಿಕೆಗಳು ಬರುತ್ತವೆ. ಕಲಬುರ್ಗಿ ರಂಗಾಯಣವು ಇಂತಹ ಅಪರೂಪದ ನಾಟಕವನ್ನು ರಾಜ್ಯಾದಂತ ಪ್ರದರ್ಶನಪಡಿಸಿ ಬಾಬಾ ಸಾಹೇಬರು ರಚಿಸಿದ ಜಗತ್ತಿನ ಅತ್ಯುಕೃಷ್ಟ ಸಂವಿಧಾನವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತದೆ ಎಂದು ರಾಜ್ಯದ ರಂಗಾಸಕ್ತರ ಹಾಗೂ ಸಾಮಾನ್ಯ ಜನರ ಧೃಡ ನಂಬಿಕೆ.

 

Donate Janashakthi Media

Leave a Reply

Your email address will not be published. Required fields are marked *