ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಪುರುಷ ಸವಾರರಿಗೆ ಅವಕಾಶ ಇಲ್ಲ ಎಂದು ಆದೇಶವನ್ನು ಹೊರಡಿಸಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆದೇಶವನ್ನು ಕೆಲವೇ ಗಂಟೆಗಳ ನಂತರ, ಪೊಲೀಸರು ಹಿಂಪಡೆದಿದ್ದಾರೆ.
ಇಂದು(ಆಗಸ್ಟ್ 04) ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಪೊಲೀಸ್ ಉಪಮಹಾನಿರ್ದೇಶಕ ಅಲೋಕ್ ಕುಮಾರ್ ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಪುರುಷ ಸವಾರರಿಗೆ ಅವಕಾಶ ಇಲ್ಲ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ ಎಂದು ತಿಳಿಸಿದ್ದರು.
ಪತ್ರಿಕಾಗೋಷ್ಠಿಗೂ ಮುಂಚಿತವಾಗಿ ಮಂಗಳೂರಿನ ಕಮಿಷನರ್ ಕಚೇರಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಪೊಲೀಸ್ ಹಾಗೂ ನಗರ ಕಮಿಷನರ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.
ಬೆಳಿಗ್ಗೆ ಹೊರಡಿಸಿದ ನಿಯಮದಲ್ಲಿ 18 ವರ್ಷದ ಕೆಳಗಿನ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಓಡಾಡಬಹುದು. ಇಬ್ಬರು ಪುರುಷ ಸವಾರರ ಬದಲಾಗಿ ಒಬ್ಬರು ಮಾತ್ರ ಪ್ರಯಾಣಿಸಬೇಕೆಂದು ನಿರ್ಬಂಧ ವಿಧಿಸಿರುವ ಬಗ್ಗೆ ಅಲೋಕ್ ಕುಮಾರ್ ತಿಳಿಸಿದ್ದರು. ಇದೀಗ ಈ ನಿಯಮವನ್ನು ರದ್ದು ಮಾಡಲಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಅವಧಿ ಇಳಿಕೆ ಮಾಡಿ ಜಿಲ್ಲಾಡಳಿತ ಅದೇಶಿಸಿದೆ. ಸಂಜೆ 6 ಬದಲು ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆ ವರೆಗೆ ನೈಟ್ ಕರ್ಫ್ಯೂ ಮುಂದುವರಿಕೆಯಾಗಲಿದೆ. ಮಂಗಳೂರಿನಲ್ಲಿ ಸರಣಿ ಕೊಲೆಯ ಬಳಿಕ ಈ ನಿಯಮ ಜಾರಿಗೆ ಬಂದಿತ್ತು.