ಬೆಂಗಳೂರು : ಯಾವುದೇ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿ ಸಾರ್ವಜನಿಕ ಸಂಸ್ಥೆಗಳ ಕಾರ್ಮಿಕರು ನೌಕರರು ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕೇಂದ್ರ ಸರ್ಕಾರವು ಅತ್ಯಂತ ಲಾಭದಾಯಕ ಸಾರ್ವಜನಿಕ ಸಂಸ್ಥೆಗಳಾದ ಬ್ಯಾಂಕ್, ವಿಮೆ, ರಕ್ಷಣೆ, ರೈಲ್ವೆ, ನವರತ್ನ, ಮಿನಿರತ್ನಗಳಾದ ಬಿಇಎಂಎಲ್, ಹೆಚ್‌ಎಎಲ್, ಬಿಇಎಲ್, ಬಿಹೆಚ್‌ಇಎಲ್, ವಿದ್ಯುತ್‌ಚ್ಛಕ್ತಿ, ಅನಿಲ, ಗ್ಯಾಸ್, ಬಂದರು, ವಿಮಾನ, ದೂರ ಸಂಪರ್ಕ, ವಿಎಸ್‌ಎನ್‌ಎಲ್ ರಾಜ್ಯದಲ್ಲಿರುವ ಮೈಶುಗರ್, ಜಲಮಂಡಲಿಗಳನ್ನು ಮತ್ತು ಇತರ ಲಾಭದಾಯಕವಾಗಿ ನೂರಾರು ಸಂಸ್ಥೆಗಳನ್ನು ಖಾಸಗೀಕರೀಸಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುದಂರಂ ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಣಗೊಳಿಸುವುದರಿಂದ ಖಾಸಗೀಯವರ ಕೈಯಲ್ಲಿ ಆರ್ಥಿಕ ಅಧಿಕಾರದ ಕೇಂದ್ರೀಕರಣವಾಗುತ್ತದೆ. ಇದರಿಂದ ಶ್ರೀಮಂತರ ಆಸ್ತಿ ಮತ್ತಷ್ಟು ಹೆಚ್ಚಾಗುತ್ತಿದೆ ಮತ್ತು ಆರ್ಥಿಕ ಶಕ್ತಿಗಳನ್ನು ಬಳಸಿ ಗ್ರಾಹಕರನ್ನು, ಕಾರ್ಮಿಕರನ್ನು ಶೋಷಿಸಲು ಇದು ಕಾರಣವಾಗುತ್ತದೆ. ಅಲ್ಲದೆ ಸಾರ್ವಜನಿಕ ಭೂಮಿಯ ಮಾರಾಟದ ಮೂಲಕ ಆರ್ಥಿಕತೆಯನ್ನು ಕಟ್ಟಲು ಸಾಧ್ಯವಿಲ್ಲ, ಆದಾಯ ಮತ್ತು ಸಂಪತ್ತಿನಲ್ಲಿ ಅಸಮಾನತೆಗಳು ಹೆಚ್ಚುತ್ತದೆ ಆದ್ದರಿಂದ ಅನೇಕ ರೀತಿಯ ತೊಂದರೆಗಳಿಗೆ ಈ ಖಾಸಗೀಕರಣ ಕಾರಣವಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಬಜೆಟ್ ಅಧಿವೇಶನದಲ್ಲಿ ರಾಜ್ಯ ಸರಕಾರವು ಖಾಸಗೀಕರಣದ ವಿರುದ್ದ ನಿರ್ಣಯ ತೆಗೆದುಕೊಳ್ಳುವ ತನಕ ನಿರಂತರವಾಗಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಪ್ರತಿಭಟನಾಕಾರರು ಆಗ್ರಹಿಸಿದರು. CITU ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ, ಬಿಎಸ್.ಎನ್.ಎಲ್, ಬೆಮೆಲ್, ಹೆಚ್ಎಎಲ್, ಬ್ಯಾಂಕ್ ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರಿದ್ದರು.