ಗಜೇಂದ್ರಗಡ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರು ನಡೆಸುತ್ತಿರುವ ಮುಷ್ಕರ ಹಾಗೂ ಅವರ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ ವಹಿಸಲು ರಾಜ್ಯ ಬಿಜೆಪಿ ಸರ್ಕಾರವು ಮುಂದಾಗಬೇಕೆಂದು ಸಿಪಿಐಎಂ ಪಕ್ಷದ ಸದಸ್ಯರು ಒತ್ತಾಯಿಸಿದ್ದಾರೆ.
ಸ್ಥಳೀಯ ಕೆ.ಎಸ್.ಆರ್.ಟಿ ಸಿ ನೌಕರರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐಎಂ ಪಕ್ಷದಿಂದ ಬೆಂಬಲ ಸೂಚಿಸಿದ್ದಾರೆ.
ಈ ವೇಳೆ ಸಿಪಿಐಎಂ ಪಕ್ಷದ ಮುಖಂಡ ಎಂ.ಎಸ್.ಹಡಪದ ಮಾತನಾಡಿ ಸಾರಿಗೆ ನೌಕರರು ನಿರಂತರವಾಗಿ ತಮ್ಮ ಬೇಡಿಕೆಗಳಿಗಾಗಿ ಒತ್ತಾಯಿಸುತ್ತಾ ಬರುತ್ತಿದ್ದಾರೆ. ಆದರೆ ಸರ್ಕಾರಗಳು ಮಾತ್ರ ಅವರ ಬೇಡಿಕೆಗಳ ಪರಿಹಾರಕ್ಕೆ ಅಗತ್ಯ ಕ್ರಮವಹಿಸದೆ ಇರುವುದೇ ಸದ್ಯದ ದಿಢೀರ್ ಮುಷ್ಕರಕ್ಕೆ ಕಾರಣವಾಗಿದೆ. ಕೂಡಲೇ ಸಾರಿಗೆ ನೌಕರರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಕೆಗೆ ಅಗತ್ಯ ಕ್ರಮವನ್ನು ಹೊಣೆಗಾರಿಕೆಯಿಂದ ನಿರ್ವಹಿಸಬೇಕೆಂದು ಸಿಪಿಐ(ಎಂ) ಪಕ್ಷವು ಒತ್ತಾಯಿಸುತ್ತದೆ ಎಂದರು.
ಸಾರಿಗೆ ನೌಕರರು ನಡೆಸಿದ ಪಾದಯಾತ್ರೆ ಸ್ಥಳಕ್ಕೆ ರಾಜ್ಯ ಸರ್ಕಾರದ ಸಾರಿಗೆ ಸಚಿವರು ಅಥವಾ ಪ್ರತಿನಿಧಿಗಳು ಹೋಗಿ ಮನವಿ ಪತ್ರ ಸ್ವೀಕರಿಸಿ ಬೇಡಿಕೆ ಪರಿಶೀಲನೆಗೆ ಕ್ರಮವಹಿಸುವ ಬದಲು ಸಾರಿಗೆ ನೌಕರರನ್ನು ಬಂಧಿಸಿ ಹೋರಾಟದ ಧ್ವನಿಯನ್ನು ಅಡಗಿಸಲು ಮುಂದಾದ ಬಿಜೆಪಿ ಸರ್ಕಾರದ ಹೊಣೆಗೇಡಿ ಕ್ರಮವೇ ಇಂತಹ ಮುಷ್ಕರಕ್ಕೆ ನೇರ ಕಾರಣವಾಗಿದೆ ಎಂದು ದೂರಿದ್ದಾರೆ.
ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಬಾಲ ರಾಠೋಡ ಮಾತನಾಡಿ ರಾಜ್ಯ ಬಿಜೆಪಿ ಸರ್ಕಾರವು ತನ್ನ ರಾಜಕೀಯ ಹಿತಾಸಕ್ತಿಗಾಗಿ ಶಾಸನ ರೂಪಿಸುವಲ್ಲಿ ಮತ್ತು ಕಾರ್ಪೊರೇಟ್ ಬಂಡವಾಳಗಾರರ ಹಿತ ಕಾಯುವಲ್ಲಿ ತಲ್ಲೀನವಾಗಿದ್ದು ಜನತೆಯ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಪೂರ್ಣವಾಗಿ ವಿಫಲವಾಗಿದೆ. ಅದರ ಭಾಗವಾಗಿ ಸಾರಿಗೆ ನೌಕರರ ಹೋರಾಟವನ್ನು ನಿರ್ಲಕ್ಷಿಸಿ ಮನವಿ ಸ್ವೀಕರಿಸದೆ ಉದ್ಧಟತನ ತೋರಿದ ಬೇಜವಾಬ್ದಾರಿ ಕ್ರಮದಿಂದಾಗಿ ಪ್ರಸ್ತುತ ಸಾರಿಗೆ ನೌಕರರ ಮುಷ್ಕರದ ಬಿಸಿಯನ್ನು ರಾಜ್ಯದ ಜನತೆ ಅನುಭವಿಸುವಂತಾಗಿದೆ ಎಂದರು.
ಬಿಜೆಪಿ ಸರ್ಕಾರದ ಜನದ್ರೋಹಿ ವಂಚಕ ಕ್ರಮಗಳಿಂದಾಗಿ ನಿರಂತರವಾಗಿ ರೈತರು, ಕಾರ್ಮಿಕರು ಇದೀಗ ಸಾರಿಗೆ ನೌಕರರು ಹೋರಾಟ, ಮುಷ್ಕರ ನಿರತರಾಗಬೇಕಾಗಿ ಬಂದಿದೆ. ಜನತೆಯ ಸಂಕಷ್ಟವನ್ನು ಮನಗಾಣುವಲ್ಲಿ ಪೂರ್ಣವಾಗಿ ವಿಫಲವಾಗಿದೆ. ಕೋವಿಡ್-19 ಲಾಕ್ಡೌನ್ ಸಂದರ್ಭದಲ್ಲಿ ಮತ್ತು ಮುಂದುವರಿದ ಕಾಲಾವಧಿಯಲ್ಲಿ ಸರ್ಕಾರವು ನಡೆದುಕೊಂಡು ಬಂದ ರೀತಿಯು ಜನತೆಯಲ್ಲಿ ಅಪಾರ ಪ್ರಮಾಣದ ಅಸಂತೃಪ್ತಿಯನ್ನು ಉಂಟುಮಾಡಿದೆ. ಅದು ಆಕ್ರೋಶವಾಗಿ ಇದೀಗ ಹೊರಹೊಮ್ಮಲು ಮುಂದಾಗಿದೆ. ಕೂಡಲೇ ಸರ್ಕಾರ ನೌಕರರ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಫಯಾಜ್ ತೋಟದ, ಮೆಹಬೂಬ್ ಹವಾಲ್ದಾರ್, ಎನ್.ಕೆ.ಘೋರ್ಪಡೆ, ಪಿ.ಬಿ.ರಾಯಬಾಗಿ, ಎ.ವಿ.ಬಾಂಡಗೆ, ಎ.ಬಿ.ತಹಶಿಲ್ದಾರ, ಎನ್.ಆರ್.ರಂಗ್ರೇಜಿ, ಎಸ್.ಎಲ್.ಪಾಟೀಲ್, ಸೇರಿದಂತೆ ಇತರರು ಭಾಗವಹಿಸಿದ್ದರು.