ತಟ್ಟೆ, ಲೋಟ ಬಾರಿಸಿ ವಿನೂತನವಾಗಿ ಪ್ರತಿಭಟಿಸಿದ ಸಾರಿಗೆ ನೌಕರರು

ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ಹೋರಾಟ ತೀವ್ರಗೊಳಿಸಿದ್ದಾರೆ. ಸೋಮವಾರ ತಟ್ಟೆ, ಲೋಟ ಚಳವಳಿ ನಡೆಸಿದ ನೌಕರರು ಹಾಗೂ ಅವರ ಕುಟುಂಬಸ್ಥರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಾರಿಗೆ ಮುಷ್ಕರದ ನಡುವೆಯೂ ಸೋಮವಾರ 1979 ಸರ್ಕಾರಿ ಬಸ್‌ಗಳ ಸಂಚಾರ ಮಾಡಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ ಹಾಗೂ ಸಿಐಟಿಯು ಸೇರಿದಂತೆ ಅನೇಕ ಕಾರ್ಮಿಕ ಸಂಘಟನೆಗಳು ಇಂದು ಸಾರಿಗೆ ನೌಕರರ ಹೋರಾಟಕ್ಕೆ ಸಾಥ್‌ ನೀಡಿದ್ದವು.  ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್, ಮಾದಾವರ ಪೀಣ್ಯ, ನೆಲಮಂಗಲ ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಲ್ಲೂ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದರು. ಕೋವಿಡ್‌ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲದ ಕಾರಣ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು.

ಕಾರ್ಪೊರೇಷನ್ ಸರ್ಕಲ್ ಬಳಿ ಪ್ರತಿಭಟನೆಗೆ ಮುಂದಾದ ನೌಕರರು ಹಾಗೂ ಅವರ ಕುಟುಂಬಸ್ಥರನ್ನು,  ಮಕ್ಕಳನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆ ಮಾಡಿದ್ದಾರೆ.  ಉಳಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಇದಕ್ಕೆ ಅವರ ಕುಟುಂಬಸ್ಥರು ಬೆಂಬಲವನ್ನು ಸೂಚಿಸಿ ರಸ್ತೆಗಿಳಿದು ತಟ್ಟೆ, ಲೋಟ ಬಡಿಯುವ ಮೂಲಕ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದರು.

ದಾವಣಗೆರೆ: ಯುಗಾದಿ ಹಬ್ಬವನ್ನು ಮರೆತು ಇಂದು ಸಾರಿಗೆ ನೌಕರರು ಕುಟುಂಬಸ್ಥರ ಸಮೇತ ಪ್ರತಿಭಟನೆ ನಡೆಸಿದರು. ಯಡಿಯೂರಪ್ಪನವರು ಒಂದೇ ದಿನ ಬಂದು ಬಸ್ ಓಡಿಸಲಿ, ಎಸಿ ಕಾರಿನಲ್ಲಿ ಡ್ರೈವರ್‍ನನ್ನು ಇಟ್ಟುಕೊಂಡು ಹೋಗುವುದಲ್ಲ. ನಮ್ಮ ಗಂಡಂದಿರ ತರ ಗಾಡಿ ಓಡಿಸಲಿ ಗೊತ್ತಾಗುತ್ತೆ. ಹಬ್ಬ ಇದೆ ಮಕ್ಕಳಿಗೆ ಬಟ್ಟೆ ಇಲ್ಲ, ಮನೆಯಲ್ಲಿ ರೇಷನ್ ಇಲ್ಲ ಹೇಗೆ ಹಬ್ಬ ಮಾಡುವುದು. ಕೂಡಲೇ ನಮ್ಮ ಬೇಡಿಕೆ ಈಡೇರಿಸಲು ಒತ್ತಾಯಿಸುತ್ತೇವೆ. ಬೇಡಿಕೆ ಈಡೇರಿದರೆ ಆಗ ನಮಗೆ ನಿಜವಾದ ಯುಗಾದಿ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದಸಿರು.

ಚಿಕ್ಕಮಗಳೂರು: ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರು ಕುಟುಂಬ ಸಮೇತ ಬಂದು ರಸ್ತೆ ಮಧ್ಯೆ ತಟ್ಟೆ-ಲೋಟ ಬಡಿದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು. ಸುಮಾರು 300 ಕ್ಕೂ ಅಧಿಕ ಮಂದಿ ನಗರದ ಆಜಾದ್ ಪಾರ್ಕ್‍ನಲ್ಲಿ ಜಮಾಯಿಸಿ ಸರ್ಕಾರ ಹಾಗೂ ಸಾರಿಗೆ ಸಚಿವರ ವಿರುದ್ಧ ಕಿಡಿ ಕಾರಿದರು. ನಿಮ್ಮಿಂದ ಇಂದು ನಾವು ಬೀದಿಗೆ ಬಂದಿದ್ದೇವೆ. ಮಾರ್ಚ್ ತಿಂಗಳ ಸಂಬಳ ನೀಡಿಲ್ಲ. ತಿನ್ನೋಕೆ ಅನ್ನ ಇಲ್ಲ. ನಾವು ಇಂದು ಇಲ್ಲಿ ಕೂತಿದ್ದೇವೆ ಅಂದರೆ ಅದಕ್ಕೆ ನೀವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ನಮ್ಮ ಬೇಡಿಕೆಗಳನ್ನ ಈಡೇರಿಸದೆ ನೌಕರರ ಹೋರಾಟವನ್ನ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದರೆ, ನಾವು ನಿಮ್ಮ ಬೆದರಿಕೆಗಳಿಗೆ ಬಗ್ಗುವುದಿಲ್ಲ. ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು, ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ನೀವೇ ಕೊಟ್ಟಂತ ಮಾತನ್ನ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದೀರಾ. ಕೊಟ್ಟ ಮಾತನ್ನ ಉಳಿಸಿಕೊಳ್ಳುವಂತೆ ಸರ್ಕಾರ ಹಾಗೂ ಸಾರಿಗೆ ಸಚಿವರಿಗೆ ಆಗ್ರಹಿಸಿದ್ದಾರೆ.

 ಬಳ್ಳಾರಿ: ಸಾರಿಗೆ ನೌಕರರ ಪತ್ನಿಯರು ತಮಟೆ ಮತ್ತು ಗಂಟೆ ಬಾರಿಸುವ ಹೋರಾಟಕ್ಕೆ ಬಳ್ಳಾರಿ ಜಿಲ್ಲಾಡಳಿತ ಅವಕಾಶ ನೀಡದ ಹಿನ್ನೆಲೆಯಲ್ಲಿ, ಬೀದಿಯಲ್ಲಿ ನಿಂತು ರಸ್ತೆ ಮಧ್ಯೆ ಬಸ್ ತಡೆದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿಢೀರನೆ ನಡೆದ ಪ್ರತಿಭಟನೆಯಿಂದ ಕೆಲ ಕಾಲ ಗೊಂದಲ ಮತ್ತು ಗಲಾಟೆ ವಾತಾವರಣ ಸೃಷ್ಟಿಯಾಯಿತು, ದಾರಿಯಲ್ಲಿ ಬಂದ ಸಾರಿಗೆ ಬಸ್ ತಡೆದು ಬಸ್ ಚಾಲಕನನ್ನು ತರಾಟೆ ತೆಗೆದುಕೊಂಡು ಕುಟುಂಬಸ್ಥರು ಬಸ್ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಚಿಕ್ಕಬಳ್ಳಾಪುರದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಿಂದ ಶಿಡ್ಲಘಟ್ಟ ಮಾರ್ಗದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಅಂಬೇಡ್ಕರ್ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿದ ಸಾರಿಗೆ ನೌಕರರ ಕುಟುಂಬಸ್ಥರು, ತಟ್ಟೆ ಲೋಟ ಬಡಿಯುವ ಚಳುವಳು ನಡೆಸಿದರು. ಪ್ರತಿಭಟನೆಯಲ್ಲಿ ಸಾರಿಗೆ ನೌಕರರು ತಂದೆ ತಾಯಿ, ಪತ್ನಿ , ಅಣ್ಣ, ತಮ್ಮ, ಮಕ್ಕಳು ಎಲ್ಲರೂ ಭಾಗಿಯಾಗಿದ್ದರು. ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನ ಈಡೇರಿಸಬೇಕು ಅಂತ ಆಗ್ರಹಿಸಿದರು.

ಗದಗ  : 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಮುಷ್ಕರ ಇದೀಗ 6ನೇ ದಿನಕ್ಕೆ ಕಾಲಿಟಿದ್ದು ಸಾರಿಗೆ ನೌಕರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕುಟುಂಬ ವರ್ಗದವರು ಬೀದಿಗೀಳಿದು ತಟ್ಟೆ ಲೋಟ ಬಾರಿಸಿ ಮುಷ್ಕರಕ್ಕೆ ಮುಂದಾದರು.

ಸಿಐಟಿಯು ಸಂಘಟನೆ ಹಾಗೂ ಸಾರಿಗೆ ನೌಕರರ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ತಹಶಿಲ್ದಾರರ ಕಚೇರಿಗೆ ಆಗಮಿಸಿ ತಹಶಿಲ್ದಾರರ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಪ್ರತಿಭಟನೆ ನಿರತ ಮಹಿಳೆಯರು, ರಾತ್ರಿ ಹಗಲು ದುಡಿಯುವ ನೌಕರರು ಬೇಡಿಕೆ ಈಡೇರಿಕೆಗೆ ಸರ್ಕಾರ ಹಿಂದೇಟು ಹಾಕುತ್ತಿದ್ದು ನಾಚೀಕೆಗೇಡಿನ ಸಂಗತಿಯಾಗಿದೆ. ಯಡಿಯೂರಪ್ಪನವರು ಸರ್ಕಾರ ಬಂಡ ಸರ್ಕಾರವಾಗಿದೆ ಎಂದು ಮಹಿಳೆಯರು ಗ ಆಕ್ರೋಶ ವ್ಯಕ್ತಪಡಿಸಿದರು.

ಸಾರಿಗೆ ನೌಕರರು ಹಾಸನ, ಮಂಡ್ಯ, ಮೈಸೂರು, ಕೊಪ್ಪಳ, ಹಾವೇರಿ, ಚಿತ್ರದುರ್ಗ, ರಾಯಚೂರು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ಸೇರಿದಂತೆ ಎಲ್ಲಾ‌ ಕಡೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *