ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದು 6ನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಕೂಡ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣ ಬೆಳಗ್ಗೆ ಖಾಲಿ ಖಾಲಿಯಾಗಿ ಕಾಣುತ್ತಿತ್ತು. ಖಾಸಗಿ ಬಸ್ಸುಗಳ ಸಂಖ್ಯೆ ಕೂಡ ಕಡಿಮೆಯಾಗಿದ್ದು, ಪ್ರಯಾಣಿಕರು ಆಟೋಗಳ ಮೊರೆ ಹೋಗುತ್ತಿದ್ದಾರೆ. ಇನ್ನು ಕೆಲ ಪ್ರಯಾಣಿಕರು ಮೆಟ್ರೋ ರೈಲುಗಳಲ್ಲಿ ಪ್ರಯಾಣ ಮಾಡ್ತಿದ್ದಾರೆ. ಈ ಮಧ್ಯೆ ಮೆಜೆಸ್ಟಿಕ್ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಮೆಟ್ರೋ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ.
ಮುಷ್ಕರ ನಡೆಸುತ್ತಾ, ಕೆಲಸಕ್ಕೆ ಹಾಜರಾಗದ ಸಿಬ್ಬಂದಿ ವಿರುದ್ಧ ಬಿಎಂಟಿಸಿ ಕಠಿಣ ಕ್ರಮ ಮುಂದುವರೆಸಿದೆ. ಇಂದು ಮತ್ತೆ 122 ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿ ಆದೇಶ ಹೊರಡಿಸಲಾಗಿದೆ.
ನೋಟಿಸ್ ನೀಡಿದ್ದರೂ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ 62 ಮಂದಿ ತರಬೇತಿ ನೌಕರರು 60 ಮಂದಿ ಪ್ರೊಬೆಷನರಿ ನೌಕರರನ್ನ ವಜಾ ಮಾಡಲಾಗಿದೆ. ಇಂದು ಮಾತ್ರ ಈ ಆದೇಶ ಮಾಡಲಾಗಿಲ್ಲ, ಬದಲಾಗಿ ನಿನ್ನೆ, ಹಾಗೂ ಮೊನ್ನೆ ಒಟ್ಟು 334 ಮಂದಿಯನ್ನು ವಜಾ ಮಾಡಲಾಗಿತ್ತು. ಇಂದಿನ ಸಂಖ್ಯೆಯನ್ನೂ ಸೇರಿಸಿ ಒಟ್ಟು 456 ಮಂದಿಯನ್ನ ವಜಾ ಮಾಡಲಾಗಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಇಂದು ವಿನೂತನ ಪ್ರತಿಭಟನೆಗೆ ಮುಂದಾಗಿದ್ದು, ತಟ್ಟೆ ಲೋಟ ಬಡಿಯುವುದರ ಮೂಲಕ ಸರ್ಕಾರದ ಗಮನ ಸೆಳೆಯಲಿದ್ದಾರೆ. ಪ್ರತಿಭಟನಾನಿರತ ಸಾರಿಗೆ ಸಂಸ್ಥೆ ನೌಕರರ ಕುಟುಂಬಸ್ಥರು ಸಹ ಇದರಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಸಾರಿಗೆ ಸಂಸ್ಥೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾದರೂ ಸಹ ಅದನ್ನು ಲೆಕ್ಕಿಸದೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಆರನೇ ವೇತನ ಜಾರಿಯಾಗುವವರೆಗೂ ಮುಷ್ಕರ ಮುಂದುವರೆಸಲು ತೀರ್ಮಾನಿಸಲಾಗಿದೆ.