ಸರ್ದಾರ್ ಪಟೇಲ್ ಹೆಸರಲ್ಲಿದ್ದ ಕ್ರೀಡಾಂಗಣಕ್ಕೆ ಈಗ ಮೋದಿ ಹೆಸರು!?

ಅಹ್ಮದಾಬಾದ್: ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಮೈದಾನವೆಂದೇ ಖ್ಯಾತಿ ಪಡೆದಿರುವ ಅಹ್ಮದಾಬಾದ್ ಮೊಟೆರಾದಲ್ಲಿ ನವೀಕರಿಸಿದ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಲೋಕಾರ್ಪಣೆ ಮಾಡಿದರು.

ಈ ಹಿಂದೆ ಸರ್ದಾರ್ ಪಟೇಲ್ ಎಂದು ಕರೆಯಲಾಗುತ್ತಿದ್ದ ಕ್ರೀಡಾಂಗಣವನ್ನು ನವೀಕರಿಸಲಾಗಿದ್ದು ಇದೇ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಡಲಾಗಿದೆ. ಇದು ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಮೈದಾನ ಎಂಬ ಕೀರ್ತಿಗೆ ಭಾಜನವಾಗಿದ್ದು, ಇದೇ ಮೈದಾನವನ್ನು ರಾಮನಾಥ್ ಕೋವಿಂದ್ ಅವರು ಲೋಕಾರ್ಪಣೆ ಮಾಡಿದ್ದಾರೆ. ಅಂತೆಯೇ ಇಂದು ರಾಷ್ಟ್ರಪತಿಗಳು ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಭೂಮಿ ಪೂಜೆ ಮಾಡಿದರು. ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್‌ ಶಾ, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಕ್ರೀಡಾ ಸಚಿವ ಕಿರಣ್‌ ರಿಜಿಜು ಹಾಗೂ ಇನ್ನಿತರ ಪ್ರಮುಖ ವ್ಯಕ್ತಿಗಳು ಉಪಸ್ಥಿತರಿದ್ದರು.

ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಂ ಎಂಬ ಖ್ಯಾತಿಗೆ ಪಾತ್ರವಾಗಿರುವ ಅಹ್ಮದಾಬಾದ್‌ ನ ಮೊಟೇರಾ ಸ್ಟೇಡಿಯಂ ಬರೊಬ್ಬರಿ 1,32,000 ಪ್ರೇಕ್ಷಕರ ಆಸನ ಸಾಮರ್ಥ್ಯವನ್ನು ಹೊಂದಿದೆ. ಇದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನವನ್ನು ಮೀರಿಸಿದ್ದು, ಮೆಲ್ಬೋರ್ನ್ ಮೈದಾನದಲ್ಲಿ 90,000 ಆಸನ ವ್ಯವಸ್ಥೆ ಇದೆ. 63 ಎಕರೆ ಪ್ರದೇಶದಲ್ಲಿ ಹರಡಿರುವ ಈ ಕ್ರೀಡಾಂಗಣವನ್ನು ಅಂದಾಜು 800 ಕೋಟಿ ರೂ.ಗಳ ವೆಚ್ಚದಲ್ಲಿ ನವೀಕರಿಸಲಾಗಿದೆ. ಈ ಮೈದಾನ 32 ಒಲಿಂಪಿಕ್ ಸಾಕರ್ ಮೈದಾನಗಳಷ್ಚು ವಿಸ್ತೀರ್ಣ ಹೊಂದಿದೆ.

 

ಗುಜರಾತ್ ಸರಕಾರದ ಕ್ರಮಕ್ಕೆ ವಿರೋಧ : ಕ್ರೀಡಾಂಗಣಕ್ಕೆ ಹೆಸರು ಬದಲಾವಣೆ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸರ್ದಾರ್ ಪಟೇಲ್ ಹೆಸರಿನ ಕ್ರೀಡಾಂಗಣವನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡುವ ಮೂಲಕ  “ಸಂಘ ಪರಿವಾರವನ್ನು ನಿಷೇಧ ಮಾಡಿದ್ದಕ್ಕೆ 73 ವರ್ಷಗಳ ನಂತರ ಸೇಡು ತೀರಿಸಿಕೊಳ್ಳಲಾಗಿದೆ ಎಂದು  ಮೈತ್ರಿ ರೇಣುಕಾ ಸಿಂಗೆ ಎನ್ನುವವರು ಫೆಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸರ್ದಾರ್ ವಲ್ಲಭಬಾಯಿ ಪಟೇಲ್ ಕ್ರೀಡಾಂಗಣ ಈಗ ನರೇಂದ್ರ ಮೋದಿ ಎಂದು ಮರು ನಾಮಕರಣ..!! ಪಟೇಲ್ ಸಾಕಾಯ್ತ..?? ಕಾನೂನು ವಿದ್ಯಾರ್ಥಿ ಪ್ರವೀಣ ಸಂಗಳದ ಶೆಟ್ಟರ್ ಫೆಸ್ಬುಕ್ ನಲ್ಲಿ ಪ್ರಶ್ನಿಸಿದ್ದಾರೆ.

 

ಇದನ್ನೂ ಓದಿ : ಏಕತಾ ಪ್ರತಿಮೆ ವೀಕ್ಷಣೆ ಟಿಕೆಟ್‌ ಮಾರಾಟದ 5 ಕೋಟಿ ರೂ. ಮಾಯ: ಎಫ್‌ಐಆರ್‌ ದಾಖಲು

ಪಟೇಲ್ ಹೆಸರಲ್ಲಿ ಸಾಕಷ್ಟು ರಾಜಕೀಯ ಲಾಭ ಪಡೆದಿದ್ದ ನರೇಂದ್ರ ಮೋದಿ, ಹೆಸರು ಬದಲಾವಣೆ ಮಾಡುವುದು ಬೇಡ ೆಂದು ಹೇಳಬಹುದಿತ್ತು. ಆದರೆ ಆ ರೀತಿ ಮಾಡದೆ ಕ್ರೀಡಾಂಗಣದ ಹೆಸರನ್ನು ಬದಲಾಯಿಸಿ,  ಆಟದ ಮಳಿಗೆಗಳಿಗೆ ಮಾತ್ರ ಸರ್ದಾರ್ ಪಟೇಲ್ ಹೆಸರು ಇಡುತ್ತಿರುವುದು ಪಟೇಲ್ ರಿಗೆ ಮಾಡಿದ ಅವಮಾನ ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿ ಕಾರ್ಯಕರ್ತನ ಪ್ರತಿಕ್ರೀಯೆಯಾಗಿದೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

Donate Janashakthi Media

Leave a Reply

Your email address will not be published. Required fields are marked *