ಬೆಳಗಾವಿಯ ಗಾಲ್ಫ್ ಕ್ಲಬ್ ಮೈದಾನ ಬಳಿ ಚಿರತೆ ಕಾಣಿಸಿಕೊಂಡು ಬರೋಬ್ಬರಿ 20 ದಿನಗಳು ಕಳೆದಿದ್ದು ಇನ್ನೂ ಪತ್ತೆಯಾಗಿ ಸೆರೆಸಿಗದಿರುವುದು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಭಾರೀ ಸಮಸ್ಯೆ ಮತ್ತು ಸವಾಲಾಗಿದೆ. ಈ ಮಧ್ಯೆ ಚಿರತೆ ಇನ್ನೂ ಸೆರೆಸಿಗದಿರುವ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೀಮ್ಸ್ ಗಳು, ಟ್ರೋಲ್ ಗಳು ಹರಿದಾಡುತ್ತಿವೆ. ಬೆಳಗಾವಿ ಬಿಟ್ ಹೋಗಲ್ಲ, ಯಾರಪ್ಪಂದ್ ಬೆಳಗಾವಿ ನಂದೈತಿ, ಗಣೇಶ ಹಬ್ಬ ಮುಗಿಸ್ಕೊಂಡ್ ಹೋಗ್ತೀನಿ, ಚಿರತೆಯ ಚಿತ್ರ ಹಾಕಿ ಆಧಾರ್ ಕಾರ್ಡು ಮಾಡಿಸಿರುವಂತಹ ಫೋಟೋಗಳು ಸಾಕಷ್ಟು ಹರಿದಾಡುತ್ತಿವೆ.
ಬೆಳಗಾವಿ : ಜಿಲ್ಲೆಯ ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆ, 22 ದಿನ ಕಳೆದರು ಸಿಗದ ಚಿರತೆ ಕುರಿತು ವಿಭಿನ್ನ ರೀತಿಯಲ್ಲಿ ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಮಾಡಲಾಗುತ್ತಿದೆ. ಚಿರತೆ ಪೋಟೊ ಹಾಕಿ ಚಿರತೆ ಹೆಸರಲ್ಲಿ ಆಧಾರ ಕಾರ್ಡ್ ರೆಡಿ ಮಾಡಿ ತಮಾಷೆ ಮಾಡಲಾಗಿದೆ. ಬಿಬತ್ಯಾ ಬೇಲ್ಗಾಂವ್‌ಕರ್ ಅಂತಾ ಚಿರತೆಗೆ ಹೆಸರು ಹಾಕಿ ಆಧಾರ್ ಕಾರ್ಡ್ ವೈರಲ್ ಮಾಡಲಾಗಿದೆ. ಎಷ್ಟು ಬೇಕಾದಷ್ಟು ಪ್ರಯತ್ನ ಮಾಡಿ ನಾನು ಗಣಪತಿ ಹಬ್ಬ ಮುಗಿಸಿಕೊಂಡು ಹೋಗುತ್ತೇನೆ. ಯಾರಪ್ಪಂದೇನ್ ಐತಿ ಬೆಳಗಾವಿ ನಂದೈತಿ ಬೆಳಗಾವಿ ಬಿಟ್ಟು ಹೋಗಲ್ಲ. ನಾನೇ ಆತಂಕವಾದಿನಾ ನನ್ನ ಹಿಡಿಯಲು ಆನೆ, ನಾಯಿ, ಪೊಲೀಸರು ಬಂದಿದ್ದೀರಿ, ಹೀಗೆ ಹಲವು ರೀತಿಯಲ್ಲಿ ಚಿರತೆ ಪೋಟೊ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೈರಲ್ ಮಾಡಲಾಗುತ್ತಿದೆ.
Another one that is doing the rounds 🙂 pic.twitter.com/hhD2zGMOPB
— Amit Upadhye (@Amitsen_TNIE) August 26, 2022
ಪ್ರತಿದಿನವು ಸುಮಾರು 3ಲಕ್ಷ ರೂ. ಖರ್ಚು: ಕಳೆದ 22 ದಿನಗಳಿಂದ ಆಪರೇಷನ್ ಚಿರತೆ ಕಾರ್ಯಾಚರಣೆ ನಡೆಯುತ್ತಿದ್ದು, ಐದು ದಿನಗಳಿಂದ 160 ಸಿಬ್ಬಂದಿ, ಆನೆ, ಜೆಸಿಬಿಗಳಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ಕಳೆದ 5 ದಿನಗಳಿಂದ ಪ್ರತಿದಿನವು ಸುಮಾರು 3ಲಕ್ಷದವರೆಗೂ ಖರ್ಚು ಮಾಡಲಾಗುತ್ತಿದ್ದು, ಅರಣ್ಯ ಇಲಾಖೆ ಈವರೆಗೂ ಸುಮಾರು 30 ರಿಂದ 40 ಲಕ್ಷ ಹಣ ಖರ್ಚು ಮಾಡಿದೆ. ನಿತ್ಯವೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುತ್ತಿದ್ದರು ಚಿರತೆ ಸಿಗುತ್ತಿಲ್ಲ. ಸಿಬ್ಬಂದಿಗೆ ಊಟದ ವ್ಯವಸ್ಥೆ, ಆನೆಗೆ ಆಹಾರದ ವ್ಯವಸ್ಥೆ ಮಾಡಲು ಕೂಡ ಇಲಾಖೆ ಖರ್ಚು ಭರಿಸುತ್ತಿದೆ.
ಗಿಡಗಂಟೆಗಳು ಬೆಳೆದಿರುವುದರಿಂದ ಚಿರತೆ ತಪ್ಪಿಸಿಕೊಳ್ಳುತ್ತಿದೆ – ಡಿಎಫ್ಒ ಅಂಥೋನಿ : ಈ ಕುರಿತಾಗಿ ಟಿವಿ9ಗೆ ಬೆಳಗಾವಿ ಡಿಎಫ್ಒ ಅಂಥೋನಿ ಹೇಳಿಕೆ ನೀಡಿದ್ದು, 6 ಜೆಸಿಬಿ, 2 ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ಮಾಡಲಾಗುತ್ತಿದೆ. ಗಾಲ್ಫ್ ಮೈದಾನದಲ್ಲಿ ಸಾಕಷ್ಟು ಗಿಡಗಂಟೆಗಳು ಬೆಳೆದಿವೆ. ಚಿರತೆ ಸುಲಭವಾಗಿ ತಪ್ಪಿಸಿಕೊಳ್ಳಲು ಅನುಕೂಲ ಆಗುತ್ತಿದೆ. ಮೊದಲು ಜೆಸಿಬಿಗಳಿಂದ ಗಿಡಗಂಟೆ ತೆರವು ಮಾಡುತ್ತೇವೆ. ನಾಳೆಯಿಂದ ಇನ್ನಷ್ಟು ಸಿಬ್ಬಂದಿ ಬಳಸಿಕೊಂಡು ಕೂಂಬಿಂಗ್ ಮಾಡಲಾಗುವುದು ಎಂದು ಹೇಳಿದರು
ಚಿರತೆ ಕಾಣಿಸಿಕೊಂಡ ಕಾರಣಕ್ಕೆ ಗಾಲ್ಪ್ ಕ್ಲಬ್ ಸುತ್ತಲಿನ ಪ್ರದೇಶಗಳ 22 ಶಾಲೆಗಳು ಬಂದ್ ಆಗಿ ಸಾವಿರಕ್ಕೂ ಹೆಚ್ಚು ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. 20 ದಿನವಾದರೂ ಸೆರೆಹಿಡಿಯಲಾಗದೆ ಇನ್ನೆಷ್ಟು ದಿನ ಈ ಆತಂಕ ಎಂಬ ಅಸಮಾಧಾನ ಜನರಿಂದ ವ್ಯಕ್ತವಾಗುತ್ತಿದೆ.