ಸರಕಾರಿ ಶಾಲೆಗೆ ಪ್ರವೇಶ ಪಡೆದರೆ ಬೆಳ್ಳಿ ನಾಣ್ಯ – ಶಾಲೆ ಬಲಪಡಿಸಲು ವಿಶೇಷ ಪ್ರಯೋಗ

ಮೇಲುಕೋಟೆ: ಇದೀಗ ಶಾಲೆಗಳು ಪ್ರಾರಂಭವಾಗಿದ್ದು, ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಶತಮಾನದ ಇತಿಹಾಸವಿರುವ ಮೇಲು ಕೋಟೆ ಸರ್ಕಾರಿ ಬಾಲಕರ ಶಾಲೆಯ ಪ್ರವೇಶ ಪ್ರಕಟಣೆ ಎಲ್ಲರ ಗಮನ ಸೆಳೆಯುತ್ತಿದೆ. ಆ ಶಾಲೆಯ ಸಿಬ್ಬಂದಿ ಹೊರಡಿಸಿರುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೇಲುಕೋಟೆಯ ಶತಮಾನದ ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮಕ್ಕೆ ಪ್ರವೇಶ ಪಡೆಯುವ ಒಂದನೇ ತರಗತಿ ಮಕ್ಕಳಿಗೆ ಬೆಳ್ಳಿಯ ನಾಣ್ಯ ಕೊಡುವ ಜತೆಗೆ ಹಲವು ಕೊಡುಗೆಗಳನ್ನು ಘೋಷಿಸಿದೆ. ಎಲ್ಲ ಮಕ್ಕಳಿಗೂ ವರ್ಷಕ್ಕೆ ಆಗುವಷ್ಟು ಉಚಿತ ನೋಟ್​ ಪುಸ್ತಕಗಳು, ಶಾಲಾಬ್ಯಾಗ್​, ಲೇಖನ ಸಾಮಗ್ರಿ, ಜಾಮೆಟ್ರಿ, ಐಡೆಂಟಿಟಿ ಕಾರ್ಡ್​, ಬೆಲ್ಟ್, ಹಾಗೂ 5, 6, 7ನೇ ತರಗತಿಯವರಿಗೆ ಉಚಿತ ಶೈಕ್ಷಣಿಕ ಪ್ರವಾಸ, ಸುತ್ತಮುತ್ತಲ ಹಳ್ಳಿಗಳಿಂದ ಬರುವ ಮಕ್ಕಳಿಗೆ ಉಚಿತ ವಾಹನ ವ್ಯವಸ್ಥೆ ನೀಡಲಾಗುತ್ತಿದೆ ಎಂದು ಪೋಸ್ಟರ್​ನಲ್ಲಿ ತಿಳಿಸಲಾಗಿದೆ.

ಶಾಲೆಯಲ್ಲಿ ಶಿಕ್ಷಕರ ಕೊರೆತೆಯ ಕಾರಣವನ್ನೊಡ್ಡಿ ಪೋಷಕರು ಮಕ್ಕಳ ಪ್ರವೇಶಾತಿಗೆ ಹಿಂದೇಟು ಹಾಕಬಾರದೆಂದು ಇಬ್ಬರು ಸ್ವಯಂ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಹಿರಿಯ ವಿದ್ಯಾರ್ಥಿಗಳು, ಗ್ರಾಮದ ಜನರ ಸಹಕಾರದಿಂದ ಅವರಿಗೆ ವೇತನವನ್ನು ನೀಡುತ್ತಿರುವುದು ವಿಶೇಷ.

2012ರಲ್ಲಿ 32 ಮಕ್ಕಳೊಂದಿಗೆ ಮುಚ್ಚುವ ಹಂತದಲ್ಲಿತ್ತು. ಶಾಲೆ ಮುಚ್ಚಿದರೆ ಮಕ್ಕಳಿಗೆ ಶಿಕ್ಷಣ ಇಲ್ಲದಂತಾಗಿ ಬಿಡುತ್ತದೆ ಎಂದು ಆಲೋಚಿಸಿ, ಸಿಬ್ಬಂದಿಯ ಜೊತೆ ಸೇರಿ ಈ ಯೋಜನೆ ಮಾಡಲಾಯಿತು ಎಂದು ಹೇಳುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಸಂತಾನರಾಮನ್‌. ಇದೀಗ 150 ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಇನ್ನಷ್ಟು ಬಲಪಡಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.

ಶಾಲೆಗೆ ಮಂಜೂರಾದ ಅಮೃತ ಶಾಲಾ ಸೌಲಭ್ಯ ಯೋಜನೆಯಡಿ ಎಲ್‌ಇಡಿ ಪ್ಯಾನೆಲ್‌ ಬಂದಿದ್ದು, ಈ ಶೈಕ್ಷಣಿಕ ವರ್ಷದಿಂದ ಸ್ಮಾರ್ಟ್‌ ಕ್ಲಾಸ್‌ ಮತ್ತು ಕಂಪ್ಯೂಟರ್‌ ತರಗತಿ ಆರಂಭವಾಗಲಿದೆ. ಇಬ್ಬರು ಆಂಗ್ಲವಿಷಯ ತಜ್ಞರು ಶಾಲೆಗೆ ಆಗಮಿಸಿ ಮಕ್ಕಳಿಗೆ ನ್ಪೋಕನ್‌ ಇಂಗ್ಲಿಷ್‌ ತರಬೇತಿ ನೀಡಲಿದ್ದಾರೆ, ಹಾಗಾಗಿ ಹೆಚ್ಚೆಚ್ಚು ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಎಸ್‌ಡಿಎಂಸಿ ಅಧ್ಯಕ್ಷ ದೇವರಾಜು ಮನವಿ ಮಾಡಿದ್ದಾರೆ.

ಸರಕಾರದ ನಿರ್ಲಕ್ಷ್ಯದ ನಡುವೆಯೂ ಗ್ರಾಮದವರ ಸಹಕಾರ ಹಾಗೂ ಶಿಕ್ಷಕರ ಮುತುವರ್ಜಿಯಿಂದ ಈ ಶಾಲೆಯನ್ನು ಬಲಪಡಿಸುತ್ತಿರುವುದು ಉತ್ತಮ ಬೆಳವಣಿಗೆ. ಸರಕಾರ ಸೌಲಭ್ಯಗಳನ್ನು ನೀಡಿದರೆ ಸರಕಾರಿ ಶಾಲೆಗಳು ಬಲಗೊಳ್ಳುತ್ತವೆ. ಸರಕಾರ ತನ್ನ ಜವಬ್ದಾರಿಯನ್ನು ಮರೆಯಬಾರದು ಎಂದು ಪೋಷಕರು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *