ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ರವೀಂದ್ರ ಕಲಾಕ್ಷೇತ್ರ ಸೇರಿದಂತೆ ಸರಕಾರದ ರಂಗಮಂದಿರಗಳ ಬಾಡಿಗೆ ಹೆಚ್ಚಿಸಿರುವುದನ್ನು ಕಲಾವಿದರು, ಸಾಹಿತಿಗಳು, ರಂಗಕರ್ಮಿಗಳು, ನಟರು, ಸಂಘ-ಸಂಸ್ಥೆಗಳು, ಗಾಯಕರೂ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹಾಗೂ ಇತರೆ ಸರಕಾರಿ ರಂಗಮಂದಿರಗಳ ಬಾಡಿಗೆ ಹೆಚ್ಚಳ ಖಂಡನೀಯ. ಹೆಚ್ಚಿಸಿರುವ ಬಾಡಿಗೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಸಾಂಸ್ಕೃತಿಕ ಕ್ಷೇತ್ರದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಲಾಭ ಮಾಡುವ ಉದ್ದೇಶ ಹೊಂದುವುದು ಎಷ್ಟು ಸರಿ? ಪೂರ್ತಿ ಉಚಿತವಾಗಿ ಕೊಡಿ ಎಂದು ನಾವು ಕೇಳುವುದಿಲ್ಲ. ಆದರೆ, ಸಣ್ಣ ಪುಟ್ಟ ನಿರ್ವಹಣೆಗೆ ಸ್ವಲ್ಪ ಮಟ್ಟಿಗೆ ಹಣ ಪಡೆಯಲಿ. ಅದು ಬಿಟ್ಟು ಹತ್ತು ಸಾವಿರ, ಇಪ್ಪತ್ತು ಸಾವಿರ ರೂ. ಬಾಡಿಗೆ ವಿಧಿಸುವುದು ಯಾವ ನ್ಯಾಯ? ಎಂದು ರಂಗಭೂಮಿ ಕಲಾವಿದ, ಹಿರಿಯ ನಟ, ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯು ಕೆರೆ, ಕಟ್ಟೆಗಳನ್ನು ನಿರ್ಮಿಸುತ್ತದೆ. ಅದರಿಂದ ಹಣ ವಾಪಸ್ ಬರುತ್ತದೆ ಎಂಬ ಉದ್ದೇಶವನ್ನು ಇಟ್ಟುಕೊಂಡು ಮಾಡುತ್ತದೆಯಾ? ನಮಗೆ ಸೌಲಭ್ಯಗಳನ್ನು ಕಲ್ಪಿಸಬೇಕಾದದ್ದು ಸರಕಾರದ ಜವಾಬ್ದಾರಿ ಎಂದು ಅವರು ಆಗ್ರಹಿಸಿದ್ದಾರೆ.