ಬೆಂಗಳೂರು: 7ನೇ ವೇತನ ಆಯೋಗ ಹಾಗೂ ಹಳೇ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಇಂದು ಹೋರಾಟಕ್ಕೆ ಮುಂದಾಗಿದ್ದು, ರಾಜ್ಯ ನೌಕರರ ವೇತನ ಶೇ 17ರಷ್ಟು ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರ ಮಧ್ಯಂತರ ಪರಿಹಾರ ಘೋಷಣೆ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟ, ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರಕ್ಕೆ ಮಣಿಸಿದ ಸರ್ಕಾರ ಮಧ್ಯಂತರ ಪರಿಹಾರ ಆದೇಶ ಘೋಷಿಸಿದೆ.
ಇದನ್ನು ಓದಿ: 7ನೇ ವೇತನ ಆಯೋಗಕ್ಕಾಗಿ ʻಕರ್ತವ್ಯಕ್ಕೆ ಗೈರಾಗಿʼ ಸರಕಾರಿ ನೌಕರರಿಂದ ಮುಷ್ಕರ
ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೌಕರರ ಜೊತೆ ಚರ್ಚೆ ಆದ ಬಳಿಕ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೂ ಮಾತಾಡಿದೆ, ಈ ವೇಳೆ ಒಂದು ಒಪ್ಪಂದಕ್ಕೆ ಬಂದಿದ್ದೇವೆ. ಶೇ 17ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಇದು ಮಧ್ಯಂತರ ಪರಿಹಾರ ರೂಪದಲ್ಲಿ ಇರಲಿದೆ. ಆಯೋಗದ ವರದಿ ಬಂದ ಬಳಿಕ ಶೇಕಡವಾರು ಪ್ರಮಾಣದಲ್ಲಿ ಬದಲಾವಣೆ ಆಗಬಹುದು. ಸರ್ಕಾರಿ ನೌಕಕರು ಮುಷ್ಕರ ಕೈಬಿಡುವ ವಿಶ್ವಾಸವಿದೆ ಎಂದು ತಿಳಿಸಿದರು.
ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್) ರದ್ದು ಮಾಡುವ ಬೇಡಿಕೆ ಕುರಿತು ಪರಾಮರ್ಶೆ ಮಾಡಲಿದ್ದೇವೆ. ಎನ್‌ಪಿಎಸ್ ರದ್ದತಿ ಬಗ್ಗೆ ಸಮಿತಿ ರಚನೆ ಬಳಿಕ ಸರ್ಕಾರದಿಂದ ನಿರ್ಣಯ ಕೈಗೊಳ್ಳಲಾಗುವುದು. ಎಸಿಎಸ್ ನೇತೃತ್ವದಲ್ಲಿ ಸಮಿತಿ ರಚಿಸುತ್ತೇವೆ. ಬೇರೆ ರಾಜ್ಯಗಳಲ್ಲಿ ಯಾವ ರೀತಿ ಪರಿಸ್ಥಿತಿ ಇದೆಯೆಂದು ಅಧ್ಯಯನ ನಡೆಸಿ ವರದಿ ಕೊಡಲು ಸೂಚಿಸುತ್ತೇವೆ ಎಂದರು.
ಸರ್ಕಾರದ ಆದೇಶದಲ್ಲಿ 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲಾಗಿದೆ. 1ನೇ ಏಪ್ರಿಲ್ 2023ರಿಂದ ಜಾರಿಗೆ ಬರುವಂತೆ ಮೂಲ ವೇತನದೊಂದಿಗೆ ಶೇಕಡಾ 17ರಷ್ಟು ಹೆಚ್ಚುವರಿ ಮಧ್ಯಂತರ ಪರಿಹಾರ ಪಡೆಯಲಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ