ರಾಮನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಪರಸ್ಪರ ಏಕವಚನದಲ್ಲೇ ವಾಗ್ವಾದ ನಡೆಸಿ, ಆರೋಪ-ಪ್ರತ್ಯಾರೋಪ ಮಾಡಿಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ನಡೆದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಅಶ್ವತ್ಥ್ ನಾರಾಯಣ, ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಂದ ಕ್ರೇನ್ ಮೂಲಕ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಕಾರ್ಯಕ್ರಮ ಆಯೋಜಕರು ಸಂಸದ ಡಿ.ಕೆ ಸುರೇಶ್ ಹೆಸರು ಹೇಳುವುದನ್ನು ಮರೆತಿದ್ದಾರೆ ಎನ್ನಲಾಗಿದೆ. ಹೀಗಾಗಿ ತೀವ್ರವಾಗಿ ಕೋಪಗೊಂಡ ಬೆಂಬಲಿಗರು ಪ್ರತಿಮೆ ಅನಾವರಣ ವೇಳೆ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಗೆ ಜೈಕಾರ ಕೂಗಿದ್ದಾರೆ. ವೇದಿಕೆ ಮುಂಭಾಗದಲ್ಲಿ ಕುಳಿತ ಬೆಂಬಲಿಗರಿಂದ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಪರ ಘೋಷಣೆ ಕೇಳಿ ಬಂದಿದೆ.
ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಚಿವ ಅಶ್ವತ್ಥನಾರಾಯಣ ‘ ಇವತ್ತು ಏನು ತಪ್ಪಾಗಿದೆ ಎಂದು ನಾಲ್ಕು ಜನರನ್ನು ಸೇರಿಸಿ ಘೋಷಣೆ ಕೂಗುತ್ತೀರಿ. ನಾನೇನು ಯಾರ ಜಮೀನಿಗೂ ಕೈ ಹಾಕಿಲ್ಲ. ಯಾವನೋ ಅವನು ಗಂಡಸು ಅನ್ನೋನು’ ಎಂದು ಪ್ರಚೋದಿಸಿದರು.
ಇದರಿಂದ ಕುಪಿತಗೊಂಡ ಸುರೇಶ್ ‘ ನನ್ನ ಗಂಡಸ್ಥನ ಬಗ್ಗೆ ಪ್ರಶ್ನೆ ಮಾಡ್ತೀಯಾ’ ಎಂದು ಅಶ್ವತ್ಥನಾರಾಯಣರತ್ತ ನುಗ್ಗಿದರು. ಇದರಿಂದ ಗಲಾಟೆ ಜೋರಾಯಿತು. ಬಳಿಕ ಸುರೇಶ್ ವೇದಿಕೆಯಲ್ಲೇ ಧರಣಿ ಕುಳಿತರು. ಘಟನೆ ಬಳಿಕ ವೇದಿಕೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್, ”ವೇದಿಕೆಯಲ್ಲಿ ನಡೆದ ಘಟನೆಗೆ ಸಿಎಂ ಬಳಿ ವೈಯಕ್ತಿಕವಾಗಿ ಕ್ಷಮೆಯಾಚಿಸುವೆ. ಆದರೆ, ಸಿಎಂ ಅವರಲ್ಲಿ ಮಾತ್ರ ಕ್ಷಮೆಯಾಚಿಸುವೆ” ಎಂದು ಹೇಳಿದ್ದಾರೆ.
ಪೊಲೀಸರು ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿದರು. ”ರಾಮನಗರ ಜಿಲ್ಲೆಯವರಿಗೆ ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ. ನಾವು ಯಾರಿಗೂ ಹೆದರಿಕೊಳ್ಳುವ ಜನರಲ್ಲ” ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.
ಈ ಘಟನೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಖಂಡಿಸಿದ್ದಾರೆ. ಪ್ರಚೋದನಕಾರಿ ಭಾಷಣ ಮಾಡಿದ ಅಶ್ವಥ್ ನಾರಾಯಣ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.