ಚಿಕ್ಕಬಳ್ಳಾಪುರ: ಸಿಪಿಐ(ಎಂ) ಪಕ್ಷದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಜನ ಚಳುವಳಿಗಾರ ಜಿ ವಿ ಶ್ರೀರಾಮರೆಡ್ಡಿ ಅವರ ಅಂತ್ಯಕ್ರಿಯೆಯು ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಬೈರಾಬಂಡಾ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಜಿ ವಿ ಶ್ರೀರಾಮರೆಡ್ಡಿ ಅವರು ನೆನ್ನೆ(ಏಪ್ರಿಲ್ 15) ಬೆಳಗಿನ ಜಾವ 4 ಗಂಟೆಗೆ ತೀವ್ರ ಹೃದಯಘಾತವಾಗಿತ್ತು. ತಕ್ಷಣವೇ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬೆಳಗ್ಗೆ 7.28ಕ್ಕೆ ನಿಧನ ಹೊಂದಿದರು.
ಬಾಗೇಪಲ್ಲಿಯ ಬಾಲಕಿಯರ ಮಹಿಳಾ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನ ಏರ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬಂದಿತು. ರಾಜಕಾರಣಿಗಳು, ಹೋರಾಟಗಾರರು, ಕ್ಷೇತ್ರದ ಜನತೆ, ಹಲವು ಮಂದಿ ಆಗಮಿಸಿ ತಮ್ಮ ಗೌರವ ನಮನವನ್ನು ಸಲ್ಲಿಸಿದರು.