ಮೈಸೂರು: ಕಳೆದ ಎರಡು ವರ್ಷಗಳಲ್ಲಿ ಸರ್ಕಾರಿ ಇಂಜಿನಿಯರಿಂಗ್ ಶುಲ್ಕ ರೂ.15,000 ಹೆಚ್ಚಳ ಮಾಡಿರುವುದನ್ನು ಖಂಡಿಸಿ ಇಂದು(ಡಿಸೆಂಬರ್ 20) ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಅರ್ಗನೈಜೇಶನ್(ಎಐಡಿಎಸ್‌ಒ) ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಸುಭಾಷ್, ರಾಜ್ಯ ಸರ್ಕಾರವು ಕಳೆದ ವರ್ಷ ರೂ.10,000 ಮತ್ತು ಪ್ರಸ್ತುತ ಶೈಕ್ಷಣಿಕ ವರ್ಷ ಸರ್ಕಾರಿ ಇಂಜಿನಿಯರಿಂಗ್ ಶುಲ್ಕವನ್ನು ಏಕಾಏಕಿ 5 – 6 ಸಾವಿರದಷ್ಟು ಹೆಚ್ಚಳ ಮಾಡಿದೆ. ಅಂದರೆ, ಎರಡು ವರ್ಷಗಳಲ್ಲಿ 15,000 ರೂಪಾಯಿ ಹೆಚ್ಚಳವಾಗಿದೆ. ಇದು ಸರ್ಕಾರದ ವ್ಯಾಪಾರಿ ಮನೋಭಾವವನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಪ್ರತಿ ವರ್ಷವೂ ನಿರಂತರವಾಗಿ ಸರ್ಕಾರಿ ಇಂಜಿನಿಯರಿಂಗ್ ಶುಲ್ಕವನ್ನು ಏರಿಕೆ ಮಾಡುವುದು ಶಿಕ್ಷಣ ವಿರೋಧಿ ನೀತಿಯಾಗಿದೆ. ಅಲ್ಲದೆ, ಈ ಬಾರಿ ಶುಲ್ಕ ಏರಿಕೆ ಮಾಡಲಾಗಿರುವ ಕುರಿತು ಸರ್ಕಾರ ಯಾವುದೇ ಸೂಚನೆ ನೀಡದೆಯೆ, ತೆರೆ ಮರೆಯಲ್ಲಿ ನಡೆಸಿದೆ. ವಿದ್ಯಾರ್ಥಿಗಳು ಶುಲ್ಕ ಪಾವತಿಸುವಾಗ ಏರಿಕೆಯಾಗಿರುವ ಸತ್ಯಾಂಶ ತಿಳಿದುಬಂದಿದೆ. ಇದು ಅತ್ಯಂತ ವಿದ್ಯಾರ್ಥಿ ವಿರೋಧಿ ಹಾಗೂ ಶಿಕ್ಷಣ ವಿರೋಧಿ ನಿಲುವು ಎಂದು ಆರೋಪಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ಜೊತೆಗೆ, ವೃತ್ತಿಪರ ಪದವಿ, ಪದವಿ ಮತ್ತು ಇನ್ನಿತರ ತರಗತಿಗಳ ಶುಲ್ಕಗಳು ಹೆಚ್ಚಾಗುತ್ತಿರುವುದರಿಂದ, ಉನ್ನತ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗಿರುವಾಗ, ಸರ್ಕಾರಿ ಇಂಜಿನಿಯರಿಂಗ್ ಶುಲ್ಕ ನಿರಂತರ ಏರಿಕೆ ಆಗುತ್ತಿದ್ದರೆ, ಲಕ್ಷಾಂತರ ಬಡ ಕುಟುಂಬದ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕನಸನ್ನೇ ಕೈಬಿಡುವಂತಾಗುತ್ತದೆ. ಈ ಕೂಡಲೇ ರಾಜ್ಯ ಸರ್ಕಾರ ಶುಲ್ಕ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಮುಂದೆಯೂ ಶುಲ್ಕ ಏರಿಕೆಯ ಪ್ರಸ್ತಾವನೆಯನ್ನೂ ಮಾಡಬಾರದು, ಶುಲ್ಕ ಏರಿಕೆಯನ್ನು ಹಿಂಪಡೆಯದೆ ಇದ್ದಲ್ಲಿ ಪ್ರಬಲವಾದ ಹೋರಾಟವನ್ನು ಕೈಗೊಳ್ಳಲು ವಿದ್ಯಾರ್ಥಿಗಳು ಅಣಿಯಾಗಬೇಕು, ಅಂತೆಯೇ ಯಾವುದೇ ರೀತಿಯ ಶುಲ್ಕ ಏರಿಕೆಯನ್ನು ವಿರೋಧಿಸುವ ಹೋರಾಟಕ್ಕೆ ಮುಂದಾಗಬೇಕು ಎಂದು ರಾಜ್ಯದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರತಿಭಟನೆ ನಂತರ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ಉಪಾಧ್ಯಕ್ಷೆ ಆಸಿಯಾ ಬೇಗಂ, ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯರುಗಳಾದ, ನಿತಿನ್, ಸ್ವಾತಿ, ಹೇಮಾ, ಚಂದನ, ಚಂದ್ರಿಕಾ, ಬಸವ, ಪ್ರಜ್ವಲ್ ಇನ್ನಿತರರು ಉಪಸ್ಥಿತರಿದ್ದರು.