ಗುರುರಾಜ ದೇಸಾಯಿ
ಬಳ್ಳಾರಿ ಜಿಲ್ಲೆ ಎಂದಾಕ್ಷಣ ನಮಗೆ ಥಟ್ಟನೆ ನೆನಪಾಗುವುದು ಗಣಿ ಮಾಫೀಯಾ, ಭೂ ಮಾಪೀಯಾ, ಹೌದು, ಮಾಫೀಯಾಗಳನ್ನೆ ಹೊದ್ದು ಮಲಗಿರುವ ಬಳ್ಳಾರಿ ಜಿಲ್ಲೆಗೆ ಇಂತಹದ್ದೊಂದು ಕೆಟ್ಟ ಹೆಸರು ಬಂದಿದ್ದು ರಾಜಕಾರಣಗಳಿಂದ. ಅದರಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರ ಕೊಡುಗೆ ಬೃಹದಾಕಾರವಾಗಿದೆ.
ಬಳ್ಳಾರಿಯಲ್ಲಿ ರೆಡ್ಡಿ ಮತ್ತು ಲಾಡ್ ಕುಟಂಬದ ಅಕ್ರಮಗಳು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. “ಇವರ ತಂಟೆಗೆ ಯಾರೂ ಹೊಗಂಗಿಲ್ಲ, ಹೋದವರು ಉಳಿಯುವುದು ಇಲ್ಲ” ಎಂಬ ಕಾರಣಕ್ಕೆ ಬಾಯಿಗೆ ಬೀಗಹಾಕಿಕೊಂಡು ಕಡತಕ್ಕೆ ಸಹಿಮಾಡಿದ್ದ ಅಧಿಕಾರಿಗಳೆ ಹೆಚ್ಚು. ಆದರೆ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಶಾಸಕರಿಗೆ ಅವಮಾನ ಮಾಡಿದರು ಎಂದು ಸಂಡೂರು ತಾಲ್ಲೂಕ ತಹಶೀಲ್ದಾರ್ ವಿರುದ್ದ ಹಕ್ಕುಚ್ಯುತಿ ಮಂಡಿಸಲಾಯಿತು. ಅದಕ್ಕೆ ಅಲ್ಲಿದ್ದ ಘಟಾನುಘಟಿಗಳು ಹೌದೌದು ಎಂದು ಹಕ್ಕುಚ್ಯುತಿಗೆ ಒಪ್ಪಿಗೆ ನೀಡದರು. ಆದರೆ ಅಸಲಿ ಕಥೆ ಬೇರೆಯೇ ಇದೆ.
ಮಾಜಿ ಸಚಿವ ಸಂತೋಷ್ ಲಾಡ್ ವಿರುದ್ದ ಅಕ್ರಮ ಭೂಕಬಳಿಕೆ ಆರೋಪ ಕೇಳಿಬಂದಿದೆ. ಇದರ ತನಿಖೆಗೆ ತಹಶೀಲ್ದಾರ ಮುಂದಾಗಿದ್ದು ಶಾಸಕರಿಗೆ ಹಕ್ಕುಚ್ಯುತಿಯಾಗಿ ಕಂಡಿದೆ. ಹಾಗಾಗಿ ಅಲ್ಲಿನ ತಹಶೀಲ್ದಾರ ನಡೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರ ಕಣ್ಣನ್ನು ಕೆಂಪಾಗಿಸಿತ್ತು. ಅಕ್ರಮ ಭೂಕಬಳಿಕೆಯ ತನಿಖೆಯನ್ನು ನಿಲ್ಲಿಸಲು ಈ ತಂತ್ರವನ್ನು ಹೂಡಿದ್ದು ಎಂಬುದು ಪ್ರಮುಖ ವಿಷಯ.
47.63 ಎಕರೆ ಸರಕಾರಿ ಭೂಮಿ ಸಂತೋಷ್ ಕೈಯಲ್ಲಿ : ತೋರಣಗಲ್ಲು ಹೋಬಳಿ ವ್ಯಾಪ್ತಿಯ ಮಾಳಾಪುರ ಗ್ರಾಮದ ಸರ್ವೆ ನಂ 123, ರಲ್ಲಿ 47.63 ಎಕರೆ ಸರ್ಕಾರಿ ಭೂಮಿಯನ್ನು ಮಾಜಿ ಸಚಿವ ಸಂತೋಷ್ ಲಾಡ್ ಮತ್ತು ಅವರ ಕುಟುಂಬ ಅಕ್ರಮವಾಗಿ ಕಬಳಿಕೆ ಮಾಡಿದೆ. ಪಹಣಿಯಲ್ಲಿ ಅಕ್ರಮ ತಿದ್ದುಪಡಿ ಮೂಲಕ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ತಿದ್ದುಪಡಿ ಮಾಡಿರುವುದನ್ನು ಸಂಡೂರಿನ ತಹಶೀಲ್ದಾರ ಆಗಿದ್ದ ರಶ್ಮಿ ಸರಕಾರಕ್ಕೆ ಹಾಗೂ ತಾಲ್ಲೂಕ, ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ. ತಾಲೂಕು ಮ್ಯಾಜಿಸ್ಟ್ರೇಟ್ ರವರು ದಾಖಲೆ ಪರಿಶೀಲಿಸಿ ಮೊಟೇಶನ್ ಮಾಡದೇ ನೋಂದಣಿ ಮಾಡಲಾಗಿದೆ ಎಂದು ಲಿಖಿತವಾಗಿ ಸ್ಪಷ್ಟನೆ ನೀಡಿದ್ದಾರೆ.
ಆದರೆ ಬುದ್ದಿವಂತ ಲಾಡ್ ಕುಟುಂಬ ನಕಲಿ ಸರ್ಕಾರದ ದಾಖಲೆಗಳನ್ನು ಸೃಷ್ಟಿಸಿ ನೊಂದಾವಣೆ ಮಾಡಿಕೊಂಡಿದೆ. ತಮ್ಮ ಸಹಚರನಿಂದ ದಾವೆ ಹೂಡಿಸಿ ನ್ಯಾಯಾಲಯಕ್ಕೂ ನಕಲಿ ದಾಖಲೆ ನೀಡುವ ಮೂಲಕ ಕ್ರಮಬದ್ಧ ಮಾಡಿ ಕೊಳ್ಳಲು ನ್ಯಾಯಾಲಯಕ್ಕೆ ವಂಚಿಸುವ ಕೆಲಸ ಮಾಡಿದ್ದಾರೆ. ಇದು ಭೂಗಳ್ಳರು ಸರ್ಕಾರದ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವ ಮತ್ತೊಂದು ಕುಟಿಲ ತಂತ್ರ ಎಂಬುದು ಪ್ರಮುಖ ಸಂಗತಿ.
ದಾಖಲೆ ಏನು ಹೇಳುತ್ತವೆ? : ಬಳ್ಳಾರಿಯಲ್ಲಿ ಭೂಗಳ್ಳರ ಹಾವಳಿ ಹೆಚ್ಚಳವಾಗುತ್ತಿದೆ ಎಂಬುದಕ್ಕೆ ಜೀವಂತ ಉದಾಹರಣೆ ಈ ಮಾಳಪುರ ಭೂ ಹಗರಣವಾಗಿದೆ. 1996 ರವರಿಗೆ ಸರ್ಕಾರಿ AW ಭೂಮಿ ಎಂದು ಇದ್ದಿದ್ದನ್ನು 1996, 1997 ರಲ್ಲಿ ಹನುಮನ ಮಗ ಹೊನ್ನೂರ ಎಂದು ಪಹಣಿ ಪತ್ರದಲ್ಲಿ ಅಸ್ಪಷ್ಟವಾಗಿ ಬರವಣಿಗೆಯ ಮೂಲಕ ಅಮಾಯಕ ವ್ಯಕ್ತಿ ಹೆಸರಿನಲ್ಲಿ ತಿದ್ದುಪಡಿ ಮಾಡಿ ನಮೂದಿಸಲಾಗಿದೆ. ನಂತರ ಲಾಡ್ ಕುಟುಂಬ 13.10.1996 ನಿಂದ 1998 ರಲ್ಲಿ ರೂ. 96000ಕ್ಕೆ ಪ್ರಯಾ ಮಾಡಿಕೊಂಡಿದೆ. ಸರ್ಕಾರಿ AW ಭೂಮಿಯನ್ನು ಸಾಗುವಳಿದಾರನಲ್ಲದ ಒಬ್ಬ ಅಮಾಯಕ ವ್ಯಕ್ತಿಗೆ ಕಾನೂನು ಬಾಹಿರವಾಗಿ 47.63 ಎಕರೆ ಮಂಜೂರು ಮಾಡಿ ಲಾಡ್ ಕುಟುಂಬ ವರ್ಗಾಯಿಸಿಕೊಂಡಿರುವುದು ‘ಆಡಳಿತ’ ಅವರ ಕಾಲಲ್ಲಿ ಬಿದ್ದಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ.
ಇನ್ನೂ ಅವರೇ ಹೇಳುವಂತೆ ಅದು ಹೊನ್ನೂರನಿಗೆ ಸರಕಾರ ಮಂಜೂರು ಮಾಡಿದ್ದ ಭೂಮಿಯೆ ಅಂತಾ ಅಂದು ಕೊಂಡರು, ಮೂಂಜೂರಾದ ಸರ್ಕಾರಿ ಭೂಮಿ 15 ವರ್ಷ ಮಾರಾಟ ಮಾಡಲು ಬರುವುದಿಲ್ಲ. ಆದರೆ ಅದೇ ವರ್ಷ ಖರೀದಿ ಮಾಡಿದ್ದು ಹೇಗೆ? ಹಾಗದರೆ ಇದು ನಕಲಿ ದಾಖಲೆ ಸೃಷ್ಟಿಸಿದ್ದು ಎಂಬುದು ಸ್ಪಷ್ಟ.
ತೋರಣಗಲ್ಲು ನಾಡ ಕಚೇರಿ ಉಪ ತಹಶೀಲ್ದಾರ ದಿನಾಂಕ 17.07.2019 ರಂದು ತಹಶೀಲ್ದಾರ ಸಂಡೂರು ದಿನಾಂಕ 29.07.2019 ಹಿಂಬರಹ ನೀಡಿ ಹೊನ್ನುರನ ಹೆಸರಿನಲ್ಲಿ ಅಥವಾ ಲಾಡ್ ಕುಟುಂಬದ ಮೊಟೇಶನ್ ದಾಖಲೆ ಇಲ್ಲದಿರುವ ಕುರಿತು ನೋಟಿಸ್ ನೀಡಲಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಪಡೆದಿದ್ದು, ಅವುಗಳ ಉಲ್ಲೇಖದ ಪ್ರಕಾರ “ಕಚೇರಿಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ” ಅದೇ ವರ್ಷ 1998 ಭೂಮಿಯನ್ನು ಲಾಡ್ ಕುಟುಂಬ ನೊಂದಾವಣೆ ಮಾಡಿಕೊಂಡಿದೆ.
ಯಾರು ಈ ಹೊನ್ನೂರ? : ಹೊನ್ನೂರ ಯಾರು ಎಂಬುದೆ ಇಲ್ಲಿರುವ ರೋಚಕ ಕಥೆ. ಮೂಲತ: ಹುಬ್ಬಳಿಯವನಾದ ಹೊನ್ನೂರನಿಗೆ ಬಳ್ಳಾರಿಯಲ್ಲಿ ಸರಕಾರಿ ಭೂಮಿಹೇಗೆ ಸಿಕ್ಕಿತು ಅನ್ನೋದು ಇನ್ನೊಂದು ಟ್ವಿಸ್ಟ್ ಪ್ರಶ್ನೆಯಾಗಿದೆ.
ಮೊಟೇಶನ್ ಮಾಡಿಕೊಳ್ಳಲು ಭೂ ದಾಖಲೆಯಲ್ಲಿ ಸರ್ಕಾರ ಹಾಗೂ ಸಾಗುವಳಿದಾರನಲ್ಲದ ಹೊನ್ನುರಗೆ ಭೂ ಮಂಜೂರು ದಾಖಲೆಗಳೇ ಇಲ್ಲ. ಸುಳ್ಳು ದಾಖಲೆ ಸೃಷ್ಟಿಸಲು ಮೂರನೇ ಅನಾಮೇದಯ ವ್ಯಕ್ತಿ ಹುಬ್ಬಳ್ಳಿಯ ಹೊನ್ನುರಪ್ಪ ಎಂಬುವರ ಮೂಲಕ ಕೂಡ್ಲಿಗಿ ಕೋರ್ಟ್ ನಲ್ಲಿ ಕೇಸ್ ಹಾಕಿ ತಮ್ಮ ಪರವಾಗಿ ಆಗಿದೆ ಎಂದು ಲಾಡ್ ಕುಟುಂಬ ಹೇಳುತ್ತಿದೆ.
ಶಾಸಕರ ಶ್ರೀರಕ್ಷೆ : ರಾಜಕಾರಣಿಗಳ ಅಕ್ರಮ ಭೂಕಬಳಿಕೆಗೆ ಶೀರಕ್ಷೆಯಾಗಿ ನಿಂತದ್ದು ಬೇರೆ ಯಾರೂ ಅಲ್ಲ, ಸಂಡೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಈ. ತುಕರಾಮ. ಬಡವರು, ದಲಿತರು ಉಳಿಮೆ ಮಾಡಬೇಕಿದ್ದ ಜಾಗ ಲಾಡ್, ರೆಡ್ಡಿ, ಹಾಗೂ ತುಕಾರಂ ರಂತವರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಭೂಮಿಯನ್ನು ನುಂಗುತ್ತಿರುವುದು ಸರಕಾರಕ್ಕೆ ಗೊತ್ತಲ್ಲ ಅಂತಾ ಅಲ್ಲ. ಅವರಿಗೂ ಗೊತ್ತಿದೆ. ತಲುಪಬೇಕಾದವರಿಗೆ ಕಮಿಷನ್ ತಲುಪುತ್ತಿರುವ ಕಾರಣ ಯಾರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಇವರ ವಿರುದ್ಧ ವರದಿ ಸಲ್ಲಿಸಿದ್ದ ರಶ್ಮಿಯವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿ ಸಂಡೂರಿನಿಂದ ಎತ್ತಂಗಡಿ ಮಾಡಿಸಿಯೇ ಬಿಟ್ಟರು.
ಅತಂತ್ರ ಸ್ಥಿಯಲ್ಲಿ ಭೂರಹಿತರು : ಭೂರಹಿತ ಬಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಹಿಂದುಳಿದ ದಲಿತ ಕುಟುಂಬಗಳಿಗೆ ಭೂಮಿಯನ್ನು ನೀಡಲು ಸಾಧ್ಯವಾಗುತ್ತಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964, ಕಲಂ 94 (ಎ) 4 ಅಡಿಯಲ್ಲಿ ಸರ್ಕಾರಿ ಭೂಮಿಯಲ್ಲಿ ಉಳುಮೆಗಾರರು ಫಾರಂ 57 ಅರ್ಜಿ ಸಲ್ಲಿಸಿ ಸಾಗುವಳಿ ಪತ್ರಕ್ಕಾಗಿ ಅನೇಕ ವರ್ಷಗಳಿಂದ ಕಾಯುತ್ತಿದ್ದಾರೆ. ಅನಾಧೀನ, ಬಗರಹುಕಂ, ಇತ್ಯಾದಿ ಹೆಸರಿನ ಸಾಗುವಳಿ ಭೂಮಿಯಲ್ಲಿನ 43,971 ಉಳುಮೆಗಾರರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 27,649 ಅರ್ಜಿ ಆನ್ ಲೈನ್ ನೋಂದಾವಣೆ ಆಗಿದ್ದು ಇನ್ನೂ 16,322 ಅರ್ಜಿ ಆನ್ ಲೈನ್ ನೊಂದಾವಣೆ ಬಾಕಿ ಉಳಿದಿದೆ. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ 5272 ಅರಣ್ಯ ಭೂಮಿ ಸಾಗುವಳಿದಾರರಲ್ಲಿ ಇದುವರೆಗೂ ಹಕ್ಕು ಪತ್ರ ನೀಡಿಲ್ಲ. ಸುಮಾರು 50 ಸಾವಿರ ಬಡ ದಲಿತ ಭೂರಹಿತ ಕುಟುಂಬಗಳು ತಲೆತಲಾಂತರಗಳಿಂದ ಸಾಗುವಳಿ ಮಾಡಿಕೊಂಡು ಬಂದ ಕುಟುಂಬಕ್ಕೆ ತುಂಡು ಭೂಮಿ ಪಟ್ಟ ನೀಡಲು ಸಾಧ್ಯವಾಗಿಲ್ಲ. ಸಂಡೂರು ತಾಲೂಕಿನ ಒಂದರಲ್ಲೇ 3689 ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸಂಡೂರು ತಾಲೂಕು, ತೋರಣಗಲ್ಲು ಹೋಬಳಿ ಮಾಳಾಪುರ ಗ್ರಾಮದ ಭೂರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ದಲಿತ 16 ಕುಟುಂಬಗಳು ಕಳೆದ ಏಳು ದಶಕಗಳಿಂದ ಸರ್ವೆ ನಂಬರ್ 123, ಸರ್ಕಾರಿ ಭೂಮಿ 47.63 ರಲ್ಲಿ ಸಾಗುವಳಿ ಮಾಡಿ ಕೊಂಡು ಬಂದಿದ್ದಾರೆ. ಸಾಗುವಳಿದಾರರ ಸ್ವಾದೀನದಲ್ಲಿ ಇದುವರೆಗೂ ಭೂಮಿ ಇದ್ದು ಸರ್ಕಾರದಿಂದ ಪಟ್ಟ ನಿರೀಕ್ಷೆಯಲ್ಲಿ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ.
ಭೂಮಿ ಸಾಗುವಳಿದಾರರ ಕಬ್ಬದಲ್ಲಿದ್ದರೂ ದಿನಾಂಕ 18.06.2021 ರಂದು ಸಿ. ವಿ. ನಾಗರಾಜ ಎಂಬ ವ್ಯಕ್ತಿ ಪೋಲಿಸ್ ರ ಬೆಂಗಾವಲಿನಿಂದ ಭೂಮಿ ನಮ್ಮ “ಸಂತೋಷ ಲಾಡ್ ಧಣಿಗಳದ್ದು” ಎಂದು ಹದ್ದುಬಸ್ತು ಹಾಕಲು ಬಂದಿದ್ದಾರೆ. ಉಳುಮೆಗಾರರ ದೌರ್ಜನ್ಯ ನಡೆಸುದನ್ನು ಪ್ರಶ್ನೆ ಮಾಡಿದರೆ ಜಿಲ್ಲಾ ಪಂಚಾಯಿತಿ ಸದಸ್ಯ ಅಕ್ಷಯ್ ಎ ಲಾಡ್ ಗಾಧಿಗನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಅಧಿಕಾರ ದುರೋಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಆ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಭೂರಹಿತರ ಆರೋಪವಾಗಿದೆ.
ಸಿಕ್ಕ ದಾಖಲೆಗಳಿಂದ ಲಾಡ್ ಕುಟುಂಬ ಸರಕಾರಿ ಭೂಮಿಯನ್ನು ಅಕ್ರಮವಾಗಿ ಪಡೆದದ್ದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇನ್ನೂ ಸಿಗದೆ ಇರುವ ದಾಖಲೆಗಳ ಪ್ರಕಾರ ಅದೆಷ್ಟು ಭೂಮಿಯನ್ನು ಪೀಕಿದ್ದಾರೋ ಅವರಿಗೆ ಗೊತ್ತು. ಜಿಲ್ಲಾಡಳಿತ ಸ್ವಯಂ ದೂರು ದಾಖಲಿಸಿಕೊಂಡು ಉನ್ನತ ಮಟ್ಟದ ತನಿಖೆ ನಡೆಸಿದಾಗ ಮಾತ್ರ ಇನ್ನಷ್ಟು ಹಗರಣ ಬಯಲಿಗೆ ಬರಬಹುದು.
ಲಾಡ್ ಕುಟುಂಬ ಈ ಭೂಮಿಯಲ್ಲಿ ಕಲ್ಲು ಗಣಿ ಪ್ರಾರಂಭ ಮಾಡಲು ಹೊಂಚು ಹಾಕಿದೆ. ಈಗಾಗಲೆ ರೆಡ್ಡಿಗಳ ಗಣಿ ಧೂಳಿನಿಂದ ನಲುಗಿ ಹೋಗಿರುವ ಬಳ್ಳಾರಿಯ ಜನ ಈಗ ಮತ್ತಷ್ಟು ಕಷ್ಟಗಳನ್ನು ಎದುರಿಸವ ಸ್ಥಿತಿ ನಿರ್ಮಾಣವಾಗಬಹುದು ಹಾಗಾಗಿ ಸರ್ಕಾರ ಕೂಡಲೇ ಅಕ್ರಮ ಪಹಣಿಯನ್ನು ರದ್ದು ಮಾಡಿ ಆ ಭೂಮಿ ಸಾಗುವಳಿ ಮಾಡುತ್ತಿರುವ ಭೂರಹಿತ ದಲಿತ ಕುಟುಂಬಗಳಿಗೆ ಪಟ್ಟ ನೀಡಲು ಮುಂದಾಗಬೇಕು – ವಿ.ಎಸ್ ಶಿವಶಂಕರ್ (ಕರ್ನಾಟಕ ಪ್ರಾಂತರೈತ ಸಂಘದ ಜಿಲ್ಲಾಧ್ಯಕ್ಷ)
ಸಂಪೂರ್ಣವಾಗಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಭೂಮಿಯನ್ನು ಕಬಳಿಕೆ ಮಾಡಿರುವ ಹಗರಣ ಇದಾಗಿದ್ದು, ಭೂಗಳ್ಳರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಎಲ್ಲಾ ಭೂಹಗರಣಗಳನ್ನು ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು – ಚನ್ನ ಬಸಯ್ಯ ಸ್ವಾಮಿ (ಭೂ ಸಂತ್ರಸ್ತರ ಹೋರಾಟ ಸಮಿತಿ ಮುಖಂಡ)
ಸರ್ಕಾರದ ನಿರ್ಲಕ್ಷ್ಯತೆಯಿಂದಾಗಿ ಜಿಲ್ಲೆಯಲ್ಲಿ ಹೇರಳವಾಗಿ ಭೂಹಗರಣಗಳು ನಡೆಯುತ್ತಿವೆ. ತಲೆ ತಲಾಂದರದಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಭೂರಹಿತ ಬಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಹಿಂದುಳಿದ ದಲಿತ
ಕುಟುಂಬಗಳಿಗೆ ಭೂಮಿಯನ್ನು ನೀಡಲು ಸಾಧ್ಯವಾಗುತ್ತಿಲ್ಲ. ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರದಿಂದ ಭೂ ಮಾಲೀಕರ, ಶ್ರೀಮಂತರ ಪಾಲಾಗುತ್ತಿದೆ. – ಎ ಸ್ವಾಮಿ – (ಜಿಲ್ಲಾಕಾರ್ಯದರ್ಶಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಬಳ್ಳಾರಿ.)