ಬೆಂಗಳೂರು: ರಾಜ್ಯದಲ್ಲಿ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರದ ವತಿಯಿಂದ ನೀಟ್ ತರಬೇತಿ ನೀಡಲಾಗುವ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ವಿಧಾನಸಭೆಯಲ್ಲಿನ ಕಲಾಪದ ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಪ್ರಶ್ನೆಗೆ ಉತ್ತರಿಸಿ ಸಚಿವರು, ನೀಟ್ ತರಬೇತಿ ಕೇಂದ್ರಗಳನ್ನು ತೆರೆಯುವುದರಿಂದ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ನೀಟ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಹೊಸ ನೀತಿ ಮಾಡಲು ಸಾಧ್ಯವಿಲ್ಲ. ನೀಟ್‌ನ ವ್ಯಾಪ್ತಿ ರಾಷ್ಟ್ರೀಯ ವೈದ್ಯಕೀಯ ಮಂಡಳಿ ಅಧೀನದಲ್ಲಿ ಬರುತ್ತದೆ. ಈಗಿರುವ ನೀತಿಯ ಪ್ರಕಾರ, ಪ್ರವೇಶಾತಿ ಪ್ರಕ್ರಿಯೆಯು ಶೇಕಡ 85 ರಷ್ಟು ರಾಜ್ಯದ ವಿದ್ಯಾರ್ಥಿಗಳಿಗೆ ಮತ್ತು ಶೇಕಡ 15 ರಷ್ಟು ಅಖಿಲ ಭಾರತ ಕೋಟಾದಡಿ ಹಂಚಿಕೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಉಕ್ರೇನಿನಲ್ಲಿ ಹಾವೇರಿ ಮೂಲದ ನವೀನ್ ಎಂಬ ವಿದ್ಯಾರ್ಥಿ ನಿಧನ ಹೊಂದಿದ್ದಾನೆ. ಇದೀಗ ಬಂದ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯದ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜೀವ್ ಗಾಂಧಿ ವಿವಿ ಜೊತೆಗೆ ಸರ್ಕಾರ ಚರ್ಚೆ ಮಾಡಿದರೆ ಪರಿಹಾರ ಸಾಧ್ಯವಿದೆ ಎಂದರು.
ಯುದ್ಧ ಪೀಡಿತ ಉಕ್ರೇನ್‌ನಿಂದ ಬಂದಿರುವ ವಿದ್ಯಾರ್ಥಿಗಳಿಗೆ ಇಲ್ಲಿಯೇ ವೈದ್ಯಕೀಯ ಶಿಕ್ಷಣ ಮುಂದುವರೆಸುವ ಸಾಧ್ಯತೆಗಳ ವಿಚಾರವಾಗಿ ಮುಖ್ಯಮಂತ್ರಿಗಳು ರಾಜೀವ್‌ಗಾಂಧಿ ವಿಶ್ವವಿದ್ಯಾಲಯ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಚಿವ ಡಾ. ಸುಧಾಕರ್ ತಿಳಿಸಿದರು.
ಯು.ಟಿ. ಖಾದರ್, ನೀಟ್ ವಿಚಾರವಾಗಿಯೂ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ ಎಂಬ ಭಾವನೆ ಇದೆ. ಇದನ್ನು ಸರ್ಕಾರ ವಿಮರ್ಶೆ ಮಾಡಬೇಕು. 1000 ರ‍್ಯಾಂಕ್‌ಗಳಲ್ಲಿ 50 ವಿದ್ಯಾರ್ಥಿಗಳು ಕೂಡಾ ನಮ್ಮ ರಾಜ್ಯದವರು ಇಲ್ಲ. ನಮ್ಮಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದರೂ ಯಾಕೆ ಪ್ರವೇಶಾತು ಸಿಗುತ್ತಿಲ್ಲ ಎಂದು ಪ್ರಶ್ನಿಸಿದರು.
ನೀಟ್‌ನಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ವೈದ್ಯಕೀಯ ಪ್ರವೇಶಕ್ಕೆ ನೀಟ್‌ನಿಂದ ಶೇಕಡ 50 ಮತ್ತು ಪಿಯುಸಿಯ ಶೇಕಡ 50 ರಷ್ಟು ಅಂಕವನ್ನು ಪರಿಗಣಿಸಬೇಕು. ಉಕ್ರೇನ್‌ನಿಂದ ಬಂದಿರುವ ವಿದ್ಯಾರ್ಥಿಗಳಿಗೆ ಇಲ್ಲೇ ವೈದ್ಯಕೀಯ ಶಿಕ್ಷಣ ಮುಂದುವರೆಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.