ಸರಕಾರದಲ್ಲಿರುವುದು ಬ್ಲ್ಯಾಕ್ ಮೇಲರ್ ಗಳೆ?!

ರಾಜ್ಯ ರಾಜಕೀಯದಲ್ಲಿ ಈಗ ಸಿಡಿ ಮತ್ತು ಬ್ಲಾಕ್ ಮೇಲ್ ದ್ದೆ ಚರ್ಚೆ ನಡೆಯುತ್ತಿದೆ. ಬಹುಮತ ವಿದ್ದರೂ  ಯತ್ನಾಳ ರನ್ನು ನಿಯಂತ್ರಿಸಲು ಬಿಜೆಪಿ ಹೈ ಕಮಾಂಡ್ ಆಗುತ್ತಿಲ್ಲವಾ? ಅಥವಾ ಯತ್ನಾಳ ಸ್ಪೋಟಿಸುತ್ತಿರುವ ವಿಷಯಗಳು ನಿಜವೆ?  ಸರಕಾರದಲ್ಲಿರುವುದು ಬ್ಲಾಕ್ ಮೇಲರ್ ಗಳಾ ಎಂದು ಹಲವು ಪ್ರಶ್ನೆಗಳು ಈಗ ರಾಜಕೀಯ ರಂಗದಲ್ಲಿ ಉದ್ಭವವಾಗಿದೆ.

ಬಿಜೆಪಿ ಪಕ್ಷದೊಳಗೆ ಕಳೆದ ಕೆಲ ದಿನಗಳಿಂದ ಒಳಬೇಗುದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ, ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ವಿರುದ್ಧ ಮಾತನಾಡುವವರ ಸಂಖ್ಯೆಯೂ ಏರುತ್ತಲೇ ಇದೆ.  ಮಾಜಿ ಕೇಂದ್ರ ಸಚಿವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​, “ಕಣ್ಣಿನಿಂದ ನೋಡಲಾಗದಂತಹ ಸಿಡಿ ಇದೆ. ಈ ಸಿಡಿಯನ್ನು ಮುಂದಿಟ್ಟು ಯಡಿಯೂರಪ್ಪನವರನ್ನು ಬ್ಲ್ಯಾಕ್​ಮೇಲ್ ಮಾಡಿ ಹಲವರು ಸಚಿವರಾಗುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಸಿಡಿ ಕುರಿತು ಸಿಬಿಐ ತನಿಖೆ ಆಗಲಿ ಎಂದು ಬಸನಗೌಡ ಪಾಟೀಲ್ ಬೇಡಿಕನ್ನುಇಟ್ಟಿದ್ದಾರೆ. ಸಧ್ಯದಲ್ಲೆ ಸಿಡಿಯನ್ನು ಬಿಡುಗಡೆ ಮಾಡುವುದಾಗಿ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಎಚ್ಚರಿಕೆಯನ್ನು ನೀಡಿದ್ದಾರೆ.  ಇನ್ನೂ ಸಿಡಿ ವಿಚಾರವನ್ನು  ಪಕ್ಷದ  ಎಲ್ಲಾ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಬಾರದು. ಹೇಳಿಕೆ ನೀಡಿದರೆ ಸೂಕ್ತ ಶಿಸ್ತುಕ್ರಮ ಜರುಗಿಸಲಾಗುತ್ತದೆ”  ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್  ಎಚ್ಚರಿಕೆ ನೀಡಿದ್ದಾರೆ.

‘ಬಿಜೆಪಿ ಎಂದರೆ ಬ್ಲಾಕ್ ಮೇಲರ್ಸ್ ಜನತಾ ಪಕ್ಷ ಹಾಗೆಂದು ಆ ಪಕ್ಷದ ನಾಯಕರೇ ಹೇಳಿಕೊಂಡಿದ್ದಾರೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಬ್ಲಾಕ್ ಮೇಲ್, ಲಂಚದ ಆರೋಪ ಕೇಳಿ ಬಂದಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರು ನೈತಿಕ ಹೊಣೆ ಹೊರಬೇಕಿದೆ. ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಮಕ್ಕಳನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಡುವ ಬ್ಲಾಕ್ ಮೇಲರ್ ಗಳನ್ನು ನಾವು ನೋಡಿದ್ದೇವೆ. ಈಗ ಆ ಸಾಲಿಗೆ ರಾಜಕಾರಣಿಗಳು ಸೇರ್ಪಡೆಗೊಳ್ಳುತ್ತಿದ್ದಾರೆ. ಸಚಿವ ಸ್ಥಾನಕ್ಕಾಗಿ  ಬ್ಲಾಕ್ ಮೇಲಿ ಮಾಡಿದರು ಎಂಬ  ಆರೋಪಗಳನ್ನು ಈಗ ರಾಜ್ಯದ ಜನತೆ ಕೇಳಬೇಕಾಗಿ ಬಂದಿದೆ. ರಾಜ್ಯದಲ್ಲಿ ಸರಕಾರ ಇದೆಯಾ ಎಂದು  ರಾಜಕೀಯ ವಿಶ್ಲೇಷಕರಾದ ನಿತ್ಯಾನಂದಸ್ವಾಮಿಯವರು ಆರೋಪಿಸಿದ್ದಾರೆ.

ಸಂಪುಟ ವಿಸ್ತರಣೆಯಿಂದ ಸಮಸ್ಯೆಗಳು ಪರಿಹಾರವಾಗಬಹುದು ಎಂದು ಯಡಿಯೂರಪ್ಪನವರು ಲೆಕ್ಕ ಹಾಕಿದ್ದರು, ಆದರೆ ಅದು  ಹಾಗಾಗಲಿಲ್ಲ. ಇನ್ನಷ್ಟು  ಸಮಸ್ಯೆಯನ್ನು ಸೃಷ್ಟಿಸಿದೆ. ಅಸಮಾಧಾನವನ್ನು ಹೊರಹಾಕಬಾರದು ಎಂದು ಕಳೆದ ವಾರ ಎರಡು ದಿನಗಳ ಕಾಲ ಪ್ರದೇಶವಾರು ಶಾಸಕರ ಸಭೆಯನ್ನು ನಡೆಸಿದ್ದರು. ನಿಮ್ಮ ಸಮಸ್ಯೆ ಏನೇ ಇದ್ದರೂ ಇಲ್ಲೆ ಹೇಳಿ ಎಂದು ಸಮಸ್ಯೆಗಳನ್ನು ಕೇಳಿ ಅವರನ್ನು ಸಮಾಧಾನ ಮಾಡಿ ಕಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕೂ ಕಾರಣ  ಇದೆ ಏನು ಅಂದರೆ ಇಡೀ ಸರಕಾರವನ್ನು ನಿಯಂತ್ರಿಸುತ್ತಿರುವುದು ಎರಡು ಜಿಲ್ಲೆ ಮಾತ್ತು ಎರಡು ಜಾತಿಗಳು ಎಂದು ಬಿಜೆಪಿ ಶಾಸಕರೆ ಮಾತನಾಡಿಕೊಳ್ಳುತ್ತಿದ್ದಾರೆ.

ಯಡಿಯೂರಪ್ಪ ಸಚಿವ ಸಂಪುಟದಲ್ಲಿರುವ 33 ಜನ ಸಚಿವರಲ್ಲಿ ಬೆಂಗಳೂರಿನಿಂದ 8 ಜನ, ಬೆಳಗಾವಿಯಿಂದ 5 ಜನ, ಹಾವೇರಿಯಿಂದ 3 ಜನ ಸಚಿವರಿದ್ದಾರೆ. 12 ಜನ ಕಾಂಗ್ರೆಸ್, ಜೆಡಿಎಸ್ ತೊರದು ಬಂದು ಸಚಿವರಾಗಿದ್ದಾರೆ. ನಾಲ್ವರು ವಿಧಾನಪರಿಷತ್ ಸಚಿವರಾಗಿದ್ದಾರೆ. ಸಂಪುಟದಲ್ಲಿ ಅಸಮತೋಲನವನ್ನು ಈ ಅಂಕಿ ಅಂಶಗಳು ತೋರಿಸುತ್ತಿವೆ. ಈ ಬೆಳವಣಿಗೆಗಳು ಮೂಲ ಬಿಜೆಪಿ ಶಾಸಕರಿಗೆ ಕಸಿವಿಸಿಯನ್ನುಂಟು ಮಾಡುತ್ತಿವೆ.

ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಬಿಜೆಪಿ ಕೈಗೆ ಬಂದ ಮೇಲೆ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಲಿದೆ ಎಂದು ಬಿಜೆಪಿ ನಾಯಕರು ಬಿಂಬಿಸಿದ್ದರು. ಆದರೆ ಹಾಗೆ ಆಗಲಿಲ್ಲ. ಬಿಜೆಪಿ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತದೆ ಎಂಬ ಭಾವನೆ ಜನರಲ್ಲಿ ಈಗ ಉಳಿದುಕೊಂಡಂತೆ ಕಾಣುತ್ತಿಲ್ಲ. ಬಿಜೆಪಿ ಸರ್ಕಾರಕ್ಕೆ ಸರಳ ಬಹುಮತ ದಕ್ಕಿಸಿಕೊಳ್ಳಲು ಉಪಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು. ಇದರ ಪರಿಣಾಮವಾಗಿ ಅಭಿವೃದ್ಧಿ ಕಾರ್ಯಗಳು ಕಡಗಣನೆಗೆ ಒಳಗಾದವು.

ಇದಕ್ಕೂ ಮೊದಲು ಕೊರೋನಾ ತಂದಿಟ್ಟ ಅಡೆತಡೆಗಳು ಅಭಿವೃದ್ಧಿಗೆ ತೊಡಕಾಗಿದ್ದವು. ಈ ನಡುವೆ ಆಡಳಿತ ಪಕ್ಷದೊಳಗಿನ ಗೊಂದಲ, ಪದೇ ಪದೇ ಮುನ್ನಲೆಗೆ ಬಂದ ನಾಯಕತ್ವ ಬದಲಾವಣೆಯ ಪ್ರಶ್ನೆ, ಸಚಿವ ಸಂಪುಟ ವಿಸ್ತರಣೆಯ ಗೊಂದಲಗಳು ಆಡಳಿತ ಯಂತ್ರವನ್ನೇ ಸ್ತಬ್ಧಗೊಳಿಸುವಂತಾಯಿತು. ಉಪಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು ಮತ್ತು ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂಬ ಸ್ವಯಂ ಘೋಷಣೆಯನ್ನು ಮಾಡಿಕೊಂಡಿದ್ದಾರೆ.

ಇಷ್ಟೆಲ್ಲ ಅವರದ್ದೆ  ಬಹುಮತ,  ಆರ್ಭಟ ಇರುವಾಗ ನಿಜಕ್ಕೂ ಬ್ಲಾಕ್ ಮೇಲರ್ ಗಳು ಸರಕಾರದಲ್ಲಿ ಇದ್ದಾರಾ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.  ಬ್ಲಾಕ್ ಮೇಲ್ ಎನ್ನುವುದೆ ಅಪರಾಧ ಹೀಗಿರುವಾಗ ಬ್ಲಾಕ್‍ ಮೇಲ್ ಮಾಡಿ ಸಚಿವರಾಗಿದ್ದಾರೆ ಎಂಬ  ಆರೋಪಗಳನ್ನು ಅದೇ ಪಕ್ಷದ ಶಾಸಕರೆ ಮಾಡುತ್ತಾರೆ ಎಂದರೆ ಇದನ್ನು ಗಂಭಿರವಾಗಿ ಪರಿಗಣಿಸಬೇಕಿದೆ. ವಿರೊಧ ಪಕ್ಷದವರು ಮಾಡುತ್ತಾರೆ ಎಂದರೆ ಅದಕ್ಕೆ ಬೇರೆಯದ್ದೆ ರಿತಿ ಇರುತ್ತದೆ. ಆದರೆ ಈ ರೀತೀಯ ಆರೋಪಗಳು ಕೇಳಿ ಬರುತ್ತಿರುವುದು ಸ್ವಪಕ್ಷೀಯ ಶಾಸಕರಿಂದ. ಯತ್ನಾಳ, ವಿಶ್ವನಾಥ್, ರೇಣುಕಾಚಾರ್ಯ ರವರು ಮಾಡುತ್ತಿರುವ ಆರೋಪಗಳು  ನಿಜವಾ? ನಿಜ ಅಲ್ಲ ಎನ್ನುವುದಾದರೆ ಯಾಕೆ ಹೈಕಮಾಂಡ್ ಇವರ ಮಾತಿಗೆ ಬ್ರೆಕ್ ಹಾಕೋದಕ್ಕೆ ಸಾಧ್ಯವಾಗಿಲ್ಲ? ಅಥವಾ ಹೈಕಮಾಂಡ್ ಮಾತಿಗೆ ಇವರು ಕಿವಿಗೊಡದಿರುವಷ್ಟು ಸ್ವಪಕ್ಷೀಯರ ಬೆಂಬಲ ಇವರಿಗೆ ಇರಬಹುದು ಎನ್ನುವ ಅನುಮಾನಗಳು ಹುಟ್ಟುತ್ತವೆ.

ಬ್ಲಾಕ್ ಮೇಲ್ ಮೂಲಕ ಸಚಿವರಾಗಿದ್ದು ನಿಜವೇ ಆಗಿದ್ದರೆ, ಅಥವಾ ಬಸನಗೌಡ ಪಾಟೀಲ್ ಯತ್ನಾಳ, ರೇಣುಕಾಚಾರ್ಯ, ವಿಶ್ವನಾಥ್ ಸಚಿವರಾಗುವುದಕ್ಕೆ ಬ್ಲಾಕ್ ಮೇಲ್ ಮಾಡುತ್ತಿದ್ದಾರಾ? ತನಿಖೆಯಿಂದಲೆ ಉತ್ತರ ಗೊತ್ತಾಗಬೇಕಿದೆ. ಒಟ್ಟಿನಲ್ಲಿ ಏನೇ ಆದರೂ ರಾಜ್ಯದಲ್ಲಿ ಬ್ಲಾಕ್ ಮೇಕರ್ ಗಳು ಸರಕಾರದ ಭಾಗವಾಗುತ್ತಿರುವುದು ಪ್ರಜಾಪ್ರಭುತ್ವಕ್ಕೆ, ಸಂವಿಧಾನದ ಆಶಯಕ್ಕೆ ತರುತ್ತಿರುವ ಧಕ್ಕೆಯಾಗಿದೆ. ಸಿಡಿ ಮತ್ತು ಬ್ಲಾಕ್ ಮೇಲ್ ಪ್ರಕರಣ  ಎಲ್ಲಿಗೆ ಹೋಗಿ ತಲುಪುತ್ತೋ ಕಾದು ನೋಡಬೇಕಿದೆ?

ಸರಕಾರದಲ್ಲಿರುವುದು ಬ್ಲ್ಯಾಕ್ ಮೇಲರ್ ಗಳೆ?!

 

Donate Janashakthi Media

Leave a Reply

Your email address will not be published. Required fields are marked *