“ಕಾನೂನು ಮಂತ್ರಿ ಹುದ್ದೆಯ ಸಾರ್ವಜನಿಕ ಘನತೆಯನ್ನು ಕಾಯ್ದುಕೊಳ್ಳಬೇಕು”
ಸರ್ಕಾರವನ್ನು ಟೀಕಿಸಿದ್ದಾರೆ ಎಂದ ಮಾತ್ರಕ್ಕೇ ಯಾವುದೇ ವ್ಯಕ್ತಿಯ ದೇಶಪ್ರೇಮಕ್ಕೆ ಮಸಿ ಬಳೆಯುವ ಅಧಿಕಾರವನ್ನು ಸರಕಾರದ ಉನ್ನತ ಕಾರ್ಯನಿರ್ವಾಹಕರಿಗೆ ನೀಡಲಾಗಿಲ್ಲ, ಕೆಲವು ನಿವೃತ್ತ ಹಿರಿಯ ನ್ಯಾಯಾಧೀಶರ ಬಗ್ಗೆ ಕೇಂದ್ರ ಕಾನೂನು ಮಂತ್ರಿಗಳ ಟೀಕೆಯನ್ನು ಸಾರ್ವಜನಿಕವಾಗಿ ಹಿಂತೆಗೆದುಕೊಳ್ಳಬೇಕು ಎಂದು ದೇಶದ ಹಿರಿಯ ನ್ಯಾಯವಾದಿಗಳು ಆಗ್ರಹಿಸಿದ್ದಾರೆ.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಸರಕಾರವನ್ನು ಟೀಕಿಸುವ ಕೆಲವು ನಿವೃತ್ತ ನ್ಯಾಯಮೂರ್ತಿಗಳು ಭಾರತ ವಿರೋಧಿಗಳು ಎಂದು ಹೇಳಿರುವುದನ್ನು, ದೇಶದ 300ಕ್ಕೂ ಹೆಚ್ಚು ಹಿರಿಯ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ವಕೀಲರು ಖಂಡಿಸಿದ್ದಾರೆ. “ಸರಕಾರದ ಬಗ್ಗೆ ಟೀಕೆ ರಾಷ್ಟ್ರದ ವಿರುದ್ಧವೂ ಅಲ್ಲ, ದೇಶಪ್ರೇಮವಿಲ್ಲದ್ದೂ ಅಲ್ಲ, ‘ಭಾರತ ವಿರೋಧಿ’ಯೂ ಅಲ್ಲ”ಎಂದು ಅವರು ಒಂದು ಜಂಟಿ ಹೇಳಿಕೆಯಲ್ಲಿ ಕಾನೂನು ಸಚಿವರಿಗೆ ನೆನಪಿಸಿದ್ದಾರೆ.
ಇತ್ತೀಚೆಗೆ ಒಂದು ಮಾಧ್ಯಮ ಸಮಾವೇಶದಲ್ಲಿ ಸಚಿವರು ಕೆಲವು ನಿವೃತ್ತ ‘ಸಕ್ರಿಯ’ ನ್ಯಾಯಾಧೀಶರು “ವಿರೋಧ ಪಕ್ಷದ ಪಾತ್ರವನ್ನು ನಿರ್ವಹಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಈ ಹಿರಿಯ ನ್ಯಾಯವಾದಿಗಳು “ವಿಮರ್ಶೆ ಮಾಡುವವರನ್ನು, ಅವರ ಹೆಸರು ನಮೂದಿಸದೆ, ಎಲ್ಲರೂ ನ್ಯಾಯಾಂಗ ಪ್ರತಿಪಕ್ಷಗಳ ಪಾತ್ರ ವಹಿಸಬೇಕು ಎನ್ನುವ ಭಾರತ-ವಿರೋಧಿ ಗ್ಯಾಂಗ್” ಎನ್ನುವ ಮೂಲಕ ಮತ್ತು “ದೇಶದ ವಿರುದ್ಧ ಕೆಲಸ ಮಾಡುವವರು ಬೆಲೆ ತೆರುತ್ತಾರೆ” ಎಂದು ಈ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ತೀವ್ರ ಬೆದರಿಕೆಯನ್ನೂ ಹಾಕುವ ಮೂಲಕ ಸಚಿವರು ಸಂವಿಧಾನಾತ್ಮಕ ಔಚಿತ್ಯದ ಎಲ್ಲ ಮಿತಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಸಚಿವರ ಹೇಳಿಕೆಯನ್ನು ಖಂಡಿಸುತ್ತ “ಪ್ರಸಕ್ತ ಸರ್ಕಾರವು ರಾಷ್ಟ್ರವಲ್ಲ ಮತ್ತು ರಾಷ್ಟ್ರವು ಸರ್ಕಾರವಲ್ಲ” ಎಂದು ನ್ಯಾಯವಾದಿಗಳ ಈ ಹೇಳಿಕೆ ಅಭಿಪ್ರಾಯ ಪಟ್ಟಿದೆ ಎಂದು ‘ಲೈವ್ ಲಾ’ ವರದಿ ಹೇಳಿದೆ.
“ನಮ್ಮ ಸಾಂವಿಧಾನಿಕ ವ್ಯವಸ್ಥೆಯಲ್ಲಿ, ಸರ್ಕಾರವನ್ನು ಟೀಕಿಸುವ ಜಾಗವನ್ನು ಸಂಸತ್ತು ಅಥವಾ ಶಾಸಕಾಂಗಗಳಿಗೇ ಮೀಸಲಿಟ್ಟಿಲ್ಲ, ಅಥವಾ ಯಾವುದೇ ನಿರ್ದಿಷ್ಟ ವರ್ಗದ ವ್ಯಕ್ತಿಗಳಿಗೆ ಸೀಮಿತಗೊಳಿಸಿಲ್ಲ ಅಥವಾ ಬೇರೆ ಯಾರನ್ನೂ ಆಗಲಿ ವಿಮರ್ಶಿಸದಂತೆ ನಿರ್ಬಂಧಿಸಲಾಗಿಲ್ಲ. ಆದ್ದರಿಂದ, ಸರ್ಕಾರವನ್ನು ಟೀಕಿಸಿದ್ದಾರೆ ಎಂದ ಮಾತ್ರಕ್ಕೇ ಯಾವುದೇ ವ್ಯಕ್ತಿಯ ದೇಶಪ್ರೇಮಕ್ಕೆ ಮಸಿ ಬಳೆಯುವ ಅಧಿಕಾರವನ್ನು ಸರಕಾರದ ಉನ್ನತ ಕಾರ್ಯನಿರ್ವಾಹಕರಿಗೆ ನೀಡಲಾಗಿಲ್ಲ” ಎಂದು ಸಚಿವರಿಗೆ ನೆನಪಿಸಿರುವ ಈ ಹೇಳಿಕೆ, ಕಾನೂನು ಸಚಿವರು ತಮ್ಮ ಹೇಳಿಕೆಗಳನ್ನು ಸಾರ್ವಜನಿಕವಾಗಿ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದೆ.
ಸರಕಾರದ ಕಾನೂನು ಸಚಿವರು “ಪ್ರಭುತ್ವದ ಕಾರ್ಯಾಂಗ ಮತ್ತು ನ್ಯಾಯಾಂಗ ವಿಭಾಗಗಳ ನಡುವಿನ ಸೇತುವೆ” ಯಾಗಿರಬೇಕು, ಆದ್ದರಿಂದ ಅವರು ಸಾರ್ವಜನಿಕ ಸಂವಾದದಲ್ಲಿ ಒಂದು ಘನತೆಯನ್ನು ಕಾಯ್ದುಕೊಳ್ಳಬೇಕು ಎಂದು , ಹಿರಿಯ ನ್ಯಾಯವಾದಿಗಳಾದ ಇಕ್ಬಾಲ್ ಚಾಗ್ಲೆ, ರಾಜು ರಾಮಚಂದ್ರನ್, ಕಪಿಲ್ ಸಿಬಲ್, ದುಷ್ಯಂತ್ ದವೆ, ಚಂದರ್ ಉದಯ್ ಸಿಂಗ್, ಇಂದಿರಾ ಜೈಸಿಂಗ್, ರೆಬೆಕಾ ಜಾನ್, ನಿತ್ಯಾ ರಾಮಕೃಷ್ಣನ್ ಸೇರಿದಂತೆ 323 ಮಂದಿ ಸಹಿ ಹಾಕಿರುವ ಈ ಹೇಳಿಕೆ ರಿಜುಜು ಅವರಿಗೆ ಸಲಹೆ ಮಾಡಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ