ಸರಕಾರದ ಜೊತೆಗಿನ ಮಾತುಕತೆ ಸಫಲ : ಮುಷ್ಕರ ಕೈ ಬಿಟ್ಟ ಸಾರಿಗೆ ನೌಕರರು

ರಾತ್ರಿಯಿಂದಲೆ ರಸ್ತೆಗಿಳಿಯಲಿವೆ ಬಿಎಂಟಿಸಿ, ಕೆ.ಎಸ್. ಆರ್.ಟಿ.ಸಿ ಬಸ್ ಗಳು 

ಬೆಂಗಳೂರು : ಸಾರಿಗೆ ನೌಕರರ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಮಣಿದಿದ್ದು, ಮೂರು ದಿನಗಳ ಬಳಿಕ ಸಾರಿಗೆ ನೌಕರರ ಮುಷ್ಕರಕ್ಕೆ ಬ್ರೇಕ್​ ಬಿದ್ದಿದೆ.

ತಮ್ಮನ್ನೂ ಸರ್ಕಾರಿ ಸಿಬ್ಬಂದಿಯನ್ನಾಗಿ ಪರಿಗಣಿಸಬೇಕು ಎಂಬುದರ ಜತೆಗೆ ಹಲವು ಬೇಡಿಕೆ ಈಡೇರಿಸುವಂತೆ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಭಾನುವಾರ ಸಂಜೆ ನಡೆದ ಸಂಧಾನ ಸಭೆ ಸಕ್ಸಸ್​ ಆಗಿದ್ದು, ಮುಷ್ಕರವನ್ನು ಅಂತ್ಯಗೊಳಿಸಿ ರಾತ್ರಿಯಿಂದ ಸಂಚಾರ ಆರಂಭಿಸುವುದಾಗಿ ಸಾರಿಗೆ ನೌಕರರು ತಿಳಿಸಿದ್ದಾರೆ.

ವಿಕಾಸ ಸೌಧದಲ್ಲಿ  ಸವದಿ ಸುದ್ದಿಗೋಷ್ಠಿ : ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಕಾಸ ಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿದರು. ಸಾರಿಗೆ ನಿಗಮಗಳ ನೌಕರರ ಮುಖಂಡರ ಜೊತೆ ಚರ್ಚಿಸಲಾಗಿದೆ. ಮುಖಂಡರ ನೇತೃತ್ವದಲ್ಲಿ ಸಮಿತಿ ರಚಿಸಿ ಬೇಡಿಕೆ ಈಡೇರಿಸಲಾಗುವುದು ಎಂದರು.

ನಿಗಮದ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮಾಡಲಾಗುವುದು. ಕೊವಿಡ್​ನಿಂದ ಮೃತ ನೌಕರರ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಲಾಗುವುದು. ಓಟಿ, ಭತ್ಯೆ ಮತ್ತೆ ಜನವರಿ ನಂತರ ಪ್ರಾರಂಭಿಸುತ್ತೇವೆ. ಜೊತೆಗೆ, ನೌಕರರಿಗೆ ಕಿರುಕುಳ ತಡೆಯಲು ಸಮಿತಿ ರಚಿಸುತ್ತೇವೆ. 2020ರ ಜನವರಿಯಿಂದ ವೇತನ ಪರಿಷ್ಕರಣೆ ಆಗದ ಹಿನ್ನೆಲೆಯಲ್ಲಿ 6ನೇ ವೇತನ ಆಯೋಗ ಜಾರಿ ಬಗ್ಗೆಯೂ ಮನವಿ ಮಾಡಿದ್ದಾರೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾದ ಬಳಿಕ ಪರಿಷ್ಕರಣೆ ಮಾಡುತ್ತೇವೆ. ಸರಕಾರಿ ನೌಕರರನ್ನಾಗಿ ಪರಿಗಣಿಸಿ ಎಂಬ ಬೇಡಿಕೆ ಸುಲಭವಾಗಿ ಈಡೇರಿಸುವ ಬೇಡಿಕೆಯಲ್ಲ. ಅದರ ಬಗ್ಗೆ ಈ ಕೂಡಲೇ ಏನು ಹೇಳುವುದು ಸಾಧ್ಯವಿಲ್ಲ ಎಂದು ಸವದಿ ಹೇಳಿದರು.

 

ಟಾರ್ಚ್ ಹಾಕಿ ಸಂಭ್ರಮ : ಕೆಲ ಬೇಡಿಕೆಗಳ ಈಡೇರಿಕೆಗೆ ಸರಕಾರ ಒಪ್ಪಿದ ಹಿನ್ನಲೆಯಲ್ಲಿ ಸಾರಿಗೆ ನೌಕರರು ಫ್ರೀಡಂ ಪಾರ್ಕ್ ನಲ್ಲಿ ಮೊಬೈಲ್ ಟಾರ್ಚ್ ಹಾಕಿ ಸಂಭ್ರಮ ಪಟ್ಟಿದ್ದಾರೆ. ರಾತ್ರಿಯಿಂದ ರಸ್ತೆಗಳಿಗೆ ಬಸ್ ಗಳನ್ನು ಇಳಿಸುವ ಸೂಚನೆಯನ್ನು ನೌಕರರು ನೀಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *