ಸಂಕಷ್ಟದ ಸಮಯದಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳುವ ಬಿಜೆಪಿ: ಕುಮಾರಸ್ವಾಮಿ

ಬೆಂಗಳೂರು: ಕೋವಿಡ್‌ ಸಂಕಷ್ಟದಲ್ಲೂ ʻನಗುಮುಖದ ಪ್ರಧಾನಿʼಯ ಜಾಹೀರಾತಿಗೆ ಕೋಟ್ಯಾಂತರ ಹಣವನ್ನು ಸರಕಾರದಿಂದ ವ್ಯಯಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿ(ಎಸ್‌) ಶಾಸಕಾಂಗ ಪಕ್ಷದ ನಾಯಕ ಹೆಚ್‌.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

ಇದನ್ನು ಓದಿ: ಪಿಎಂ ಕೇರ್ಸ್ ವೆಂಟಿಲೇಟರ್ ಗಳು ನಕಲಿ ವೆಂಟಿಲೇಟರ್ ಗಳು

ಇಂದಿನ ದಿನಪತ್ರಿಕೆಗಳಲ್ಲಿ ಮೆಟ್ರೋ 2ನೇ ಹಂತದ ಯೋಜನೆಗೆ ಕೇಂದ್ರ ಅನುದಾನ ನೀಡಿದ್ದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುವ ಸರಕಾರ ಜನರ ದುಡ್ಡಿನಲ್ಲಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಚಾಳಿ ಬಿಜೆಪಿಯವರಿಗೆ ಹಿಂದಿನಿಂದಲೂ ಇದೆ ಎಂದು ಟ್ವೀಟ್‌ ಮಾಡಿದ್ದಾರೆ.

ʻʻಕೊರೊನಾ ವೈರಸ್‌ ಹೊಡೆತಕ್ಕೆ ರಾಷ್ಟ್ರವೇ ತತ್ತರಿಸಿದೆ. ಜನ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಇಂಥ ಸೂತಕದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಣ ಖರ್ಚು ಮಾಡಿದೆ. ಈ ಮೂಲಕ ಜನರ ನೋವನ್ನು ಗೇಲಿ ಮಾಡಿದೆ. ಇದು ನಿಜಕ್ಕೂ ಆತ್ಮಸಾಕ್ಷಿಯ ನಡೆಯಲ್ಲ!

ರಾಜ್ಯಕ್ಕೆ ಕೇಂದ್ರ ನೀಡುವ ಅನುದಾನವೇನು ಭಿಕ್ಷೆಯಲ್ಲ. ಅದು ನಮ್ಮ ಹಕ್ಕು. ಅದರಲ್ಲಿ ಪ್ರಚಾರ ಪಡೆಯುವ, ಜಾಹೀರಾತು ನೀಡುವ ತುರ್ತು ಏನಿದೆ ಎಂದು ಪರಾಮರ್ಶೆ ಮಾಡಬೇಕಿತ್ತು ಎಂದರು.

ಇದನ್ನು ಓದಿ: ಹೊಸ ಮಾರ್ಗಸೂಚಿಗಳಿಂದ ಕೋವಿಡ್‌ ಚೈನ್‌ ಕಟ್ಟಾಗುವ ವಿಶ್ವಾಸವಿದೆ – ಡಾ. ಸುಧಾಕರ್

ಸಮಾಜವೇ ಗಂಡಾಂತರದಲ್ಲಿ ಸಿಲುಕಿರುವಾಗ ಈ ಪ್ರಚಾರ ಪ್ರಿಯತೆ ಏಕೆ? ಜಾಹೀರಾತುಗಳಲ್ಲಿ ನೀವು ಬೀರುವ ನಗು ನೋವಿನಲ್ಲಿರುವವರನ್ನು ಅಣಕಿಸುತ್ತದೆ ಎಂಬ ಸೂಕ್ಷ್ಮತೆ ಇಲ್ಲವೇ? ಜಾಹೀರಾತುಗಳಿಗೆ ನೀಡುವ ಹಣವನ್ನು ವೈದ್ಯಕೀಯ ವ್ಯವಸ್ಥೆಗೆ ಬಳಸಿಕೊಂಡಿದ್ದಿದ್ದರೆ ಯಾರಾದರೂ ಬೇಡವೆನ್ನುತ್ತಿದ್ದರೆ? ಸರ್ಕಾರದ ಪ್ರಚಾರದ ಈ ಹುಚ್ಚು ನಾಚಿಕೆಗೇಡಿನದ್ದು ಎಂದು ಟೀಕಿಸಿದ್ದಾರೆ.

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಸರ್ಕಾರ ನೈತಿಕತೆ ಪ್ರಶ್ನೆ ಎದುರಿಸಬಾರದು ಎಂಬ ಕಾರಣಕ್ಕೆ ನಾವೆಲ್ಲರೂ ಸುಮ್ಮನಿದ್ದೆವು. ಆದರೆ, ಕಣ್ಣ ಮುಂದಿನ ಇಂಥ ಬೇಜವಾಬ್ದಾರಿತನ, ಪ್ರಚಾರಪ್ರಿಯತೆಯನ್ನು ಸಹಿಸಲಾಗದು.

ಈ ದುರಿತ ಕಾಲದಲ್ಲಿ ಸರ್ಕಾರ ಜನರ ಪ್ರಾಣ ರಕ್ಷಣೆಗಾಗಿ ಪಣತೊಡಬೇಕೆ ಹೊರತು, ಪ್ರಚಾರದಲ್ಲಿ ತೊಡಗಬಾರದಿತ್ತು. ಬಿಜೆಪಿಯ ಪ್ರಚಾರ ಪ್ರಿಯತೆ ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ, ಈ ಸನ್ನಿವೇಶದಲ್ಲಾದರೂ ಅದನ್ನು ನಿಲ್ಲಿಸಿ ಮಾದರಿ ನಡೆ ಅನುಸರಿಸಬೇಕಿತ್ತು. ಜನರ ವಿಶ್ವಾಸ ಗೆಲ್ಲಿ, ಇಲ್ಲದೇ ಹೋದರೆ, ನಿಮ್ಮ ಪ್ರಚಾರಗಳೆಲ್ಲವೂ ಋಣವಾಗುತ್ತದೆ.

ಕೋವಿಡ್‌ ಸಂದರ್ಭದಲ್ಲಿಯೂ ಜನರ ಬೊಕ್ಕಸವನ್ನು ಖಾಲಿ ಮಾಡುತ್ತಿರುವ ಬಿಜೆಪಿ ಸರಕಾರದ ನಡೆಯ ವಿರುದ್ಧ ಕುಮಾರಸ್ವಾಮಿ ಅವರು ಸರಣಿ ಟ್ವೀಟ್‌ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *