ಬಿಟ್ಟಿ ಚಾಕರಿ ಬೇಡ, ಸಮಾನ ವೇತನ ಕೊಡಿ – ಸಂಜೀವಿನಿ ನೌಕರರ ಆಕ್ರೋಶ

ಬೆಂಗಳೂರು :  ಸಂಜೀವಿನಿ ನೌಕರರಿಗೆ ಸೇವಾ ಭದ್ರತೆ ಒದಗಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಹಾಗೂ ಫಲಾನುಭವಿಗಳ ಸಂಘದ ಸದಸ್ಯರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ಬಿಟ್ಟಿ 

ಪ್ರತಿಭಟನೆಯನ್ನುದ್ದೇಶಿಸಿ ಸಂಘಟನೆಯ ರಾಜ್ಯ ಸಂಚಾಲಕ ಜಿ.ನಾಗರಾಜ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಗ್ರಾಮ ಪಂಚಾಯತಿ, ವಾರ್ಡ್ ಮಟ್ಟಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹಿಳಾ ಸಬಲೀಕರಣದ ಸಂಜೀವಿನಿ ಯೋಜನೆಯ ಜಾರಿಗಾಗಿ ಸಂಜೀವಿನಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಪುಸ್ತಕ ಬರಹಗಾರರು, ಸಂಪನ್ಮೂಲ ವ್ಯಕ್ತಿ ಸಹಾಯಕರು, ಕೃಷಿ ಸಖಿ, ಪಶು ಸಖಿ, ಕೃಷಿ ಉದ್ಯೋಗ ಸಖಿ, ಬ್ಯಾಂಕ್ ಸಖಿ, ಎಫ್‌ಎಲ್‌ಸಿಆರ್‌ಪಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಇವರಿಗೆ ಯಾವುದೇ ವೇತನ ನೀಡದೆ, ಗೌರವಧನವೆಂಬ ಅಣಕದ ವೇತನ ನೀಡಿ ದುಡಿಸಿಕೊಳ್ಳಲಾಗುತ್ತಿದೆ” ಎಂದು ಆರೋಪಿಸಿದರು.

ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ ಮಾತನಾಡಿ, ನಾಲ್ಕು ಗೋಡೆಯೊಳಗೆ ದುಡಿಯುವ ಬಿಟ್ಡಿ ಚಾಕರಿಯ ಬಂಧನದಿಂದ ಹೊರಬಂದು ಮುಖ್ಯವಾಹಿನಿಯ ದುಡಿಮೆಯಲ್ಲಿ ತೊಡಗಿಸಿಕೊಂಡರೂ, ಸರಕಾರವೇ ಗೌರವ ವೇತನವೆಂದು ನವ ನಾಮಕರಣ ಮಾಡಿ, ಬಿಟ್ಟಿ ಚಾಕರಿಯಲ್ಲಿ ತೊಡಗಿಸಿರುವುದು ವಿಷಾಧನೀಯವಾಗಿದೆ. ಅದೇ ರೀತಿ ಮೇಲ್ ವಿಚಾರಣೆಗಾಗಿ ಹೊರ ಗುತ್ತಿಗೆ ಮತ್ತು ಒಳಗುತ್ತಿಗೆ ಆದಾರದಲ್ಲಿ ದುಡಿಯುವ ನೌಕರರ ಗುತ್ತಿಗೆ ಹಾಗೂ ಬಿಟ್ಟಿ ಚಾಕರಿಯನ್ನ ಈ ಕೂಡಲೇ ತಡೆದು, ನಮ್ಮಗಳಿಗೆ ವೇತನವನ್ನು ನಿಗದಿಸುವಂತೆ ಮತ್ತು ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಉದ್ಯೋಗಳನ್ನು ಖಾಯಂಗೊಳಿಸಬೇಕಿದೆ.  ಪುರುಷ ಪ್ರಧಾನ ಸಮಾಜದಂತೆಯೇ ಸರಕಾರವು ಈಗಲೂ ಬಹುತೇಕ ಮಹಿಳೆಯರಾದ ಇವರನ್ನು ನಡೆಸಿಕೊಳ್ಳುತ್ತಿರುವುದು ಖಂಡನೀಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಹಿಳಾ ಸಬಲೀಕರಣದ ನೀತಿಯೂ ಕೂಡಾ, ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಆರ್ಥಿಕ ನೀತಿಗಳನ್ನು ಬಲವಾಗಿ ಜಾರಿಗೊಳಿಸುತ್ತಿರುವ ಸಂದರ್ಭದಲ್ಲಿ, ಅದು ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗದೇ, ಮಹಿಳೆಯರ ಮೇಲೆ ಮತ್ತಷ್ಟು ಹೊರೆ ಹಾಗೂ ದೌರ್ಜನ್ಯಗಳನ್ನು ಹೆಚ್ಚಾಗುತ್ತಿವೆ ಎಂದರು.

ರಾಜ್ಯ ಸಹ ಸಂಚಾಲಕಿ ಬಿ ಮಾಳಮ್ಮ ಮಾತನಾಡಿ, ನಮ್ಮಿಂದ ಬಿಟ್ಟಿ ಜಾಕರಿ ಮಾಡಿಕೊಳ್ಳಲಾಗುತ್ತಿದೆ. ಕಡಿಮೆ ವೇತನ ನೀಡುತ್ತಿದ್ದು, ಘನತೆಯ ಬದುಕು ಇಲ್ಲದಂತಾಗಿದೆ. ಬಿಟ್ಟಿ ಚಾಕರಿ ತೊಲಗಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ಒದಗಿಸಬೇಕು. ಹಾಗೂ ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು ಎಂದು  ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಗೌಸ್ ಬಾಸ್ ನಧಾಫ್, ವಿನಿತ, ರೇಖಾ, ಗೌರಮ್ಮ, ಗಿರಿಜಮ್ಮ, ಲತಾ, ಸುಕನ್ಯ, ಮಮತ, ರೇಷ್ಮಾ, ಉಮಾ, ಬಿ ಸುನೀತಾ, ನಂದಾದೇವಿ, ಭಾರ್ಗವಿ, ಮಹಾದೇವಿ ಬಾಲ್ಕಿ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿತಿಂಗಳ ಪಗಾರ ತುಂಬಾ ಕಡಿಮೆ-ಅದೂ ಸರಿಯಾಗಿ ಬರಲ್ಲ: ಸಂಜೀವಿನಿ ನೌಕರರು

ಪ್ರತಿಭಟನೆಕಾರರ ಬೇಡಿಕೆಗಳು ಇಂತಿವೆ

1) ಈ ಕೂಡಲೇ ಸಂಜೀವಿನಿ ನೌಕರರಿಗೆ ನೇಮಕಾತಿಯ ಆದೇಶವನ್ನು ಕೂಡಬೇಕು. ಇಲಾಖೆಯಲ್ಲಿ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಖಾಯಂಮಾತಿ ಇಲ್ಲವೆ ಸೇವಾ ಭದ್ರತೆಯನ್ನ ನೀಡಬೇಕು.

2) ಕಳೆದ ಹಲವಾರು ವರ್ಷಗಳಿಂದ ಪುಸ್ತಕ ಬರಹಗಾರರು, ಸ್ಥಳೀಯ ಸಂಪನ್ಮೂಲ ಸಹಾಯಕರು, ವಿವಿಧ ಸಖಿ ಕಾರ್ಯಕರ್ತರ, ಉಳಿಸಿಕೊಂಡಿರುವ ಬಾಕಿವೇತನ ಹಾಗೂ ತಾಲ್ಲೂಕಾ ಮಟ್ಟದಲ್ಲಿ ಕಾರ್ಯನಿರ್ವಹಿಸುವ ವಲಯ ಮೇಲ್ವಿಚಾರಕರ/ ಕ್ಲಸ್ಟರ್ ಸೂಪರ್ ವೈಸರ್‌ಗಳ ಬಾಕಿ ಉಳಿಸಿಕೊಂಡಿರುವ ಇಸಿಐ ಮತ್ತು ಪಿಎಫ್ ಹಣವನ್ನು ನೌಕರರ ಖಾತೆಗೆ ಜಮಾ ಮಾಡಬೇಕು.

3) ಅದಾಗಲೇ ಮೂರು ನಾಲ್ಕು ಬಾರಿ ಒಂದು ವಾರ ಕಾಲ, ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿ ನಾವುಗಳು ಗಣತಿ ಕಾರ್ಯದಲ್ಲಿ ತೊಡಗಿದ್ದರೂ ಯಾವುದೇ ಭತ್ಯೆಯನ್ನು ನೀಡಿರುವುದಿಲ್ಲ. ಕಾರಣವೂ ತಿಳಿದಿಲ್ಲ. ದಿನ ಭತ್ಯೆ 500 ರೂ. ಗಳಂತೆ ಗಣತಿ ಕಾರ್ಯದ ಎಲ್ಲಾ ದಿನಗಳಿಗೆ ತಕ್ಷಣವೇ ಹಣವನ್ನ ಬಿಡುಗಡೆ ಮಾಡಬೇಕು. ಬಿಡುಗಡೆಯಾಗಿದ್ದರೂ ನೀಡದಿರುವ ಸಂಬAದಿಸಿದವರ ಮೇಲೆ ಕ್ರಮವಹಿಸಬೇಕು.

4) ರಾಜ್ಯದಾದ್ಯಂತ, ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ ಶೌಚಾಲಯ ಹಾಗೂ ಪೀಠೋಪಕರಣ ಹಾಗೂ ಗಣಕಯಂತ್ರಗಳ ಸಹಿತ ಕಛೇರಿಗಳನ್ನು ಒದಗಿಸಬೇಕು.

5) ತಕ್ಷಣದಿಂದಲೇ ಜಾರಿಗೆ ಬರುವಂತೆ ಪುಸ್ತಕ ಬರಹಗಾರರ ವೇತನ 15,000 ರೂ.ಗಳಿಗೆ ಮತ್ತು ಸಂಪನ್ಮೂಲ ಸಹಾಯಕರಿಗೆ ಕನಿಷ್ಠ 13,000 ರೂ., ವಿವಿಧ ಸಖಿ ಕಾರ್ಯಕರ್ತರಿಗೆ 8,000 ವೇತನವನ್ನು ಹೆಚ್ಚಿಸಬೇಕು.

6) ಪ್ರಯಾಣ ಹಾಗೂ ದಿನ ಭತ್ಯೆಗಳನ್ನು ಮತ್ತು ಮೊಬೈಲ್ ಗಳು ಹಾಗೂ ಅವುಗಳಿಗೆ ಅಗತ್ಯವಾದ ಉಚಿತ ಕರೆನ್ಸಿ ಒದಗಿಸಬೇಕು. ಅದೇ ರೀತಿ ಭವಿಷ್ಯ ನಿಧಿ ಯೋಜನೆಯನ್ನು ಹಾಗು ಇಎಎಸ್‌ಐ ಸೌಲಭ್ಯ ಜಾರಿಗೊಳಿಸಬೇಕು. ಉಚಿತ ವಿಮಾ ಸೌಲಭ್ಯ ಒದಗಿಸಬೇಕು.

7) ಮಹಿಳಾ ಸಬಲೀಕರಣಕ್ಕಾಗಿ ಪಂಚಾಯತ್ ಹಾಗೂ ವಾರ್ಡ ಮಟ್ಟಗಳ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುವ ಪುಸ್ತಕ ಬರಹಗಾರರು ಮತ್ತು ಮಹಿಳೆಯರ ನಡುವೆ ನೇರ ಕಾರ್ಯ ನಿರ್ವಹಿಸುವ ಸಂಪನ್ಮೂಲ ವ್ಯಕ್ತಿ ಸಹಾಯಕರನ್ನು ಸರಕಾರಿ ನೌಕರರೆಂದು ಪರಿಗಣಿಸಿ ವೇತನವನ್ನು ನಿಗದಿಸಬೇಕು. ಅಲ್ಲಿಯವರೆಗೆ ಕನಿಷ್ಠ ವೇತನ ಒದಗಿಸಬೇಕು.

8) ಮಹಿಳಾ ಒಕ್ಕೂಟದ ಹಾಗೂ ಸ್ವ ಸಹಾಯ ಗುಂಪುಗಳ ಪ್ರತಿನಿಧಿಗಳಿಗೆ ಮಾಸಿಕ ಪ್ರೋತ್ಸಾಹ ಧನವನ್ನು ತಲಾ 2,000 ರೂ. ನೀಡಬೇಕು.

9) ಸ್ವ ಸಹಾಯಗುಂಪುಗಳಿಗೆ ಅವಶ್ಯ ವಿರುವಷ್ಠು ಐದು ವರ್ಷಗಳ ಕಾಲ ಬಡ್ಡಿ ರಹಿತ ಸಾಲ ಒದಗಿಸಬೇಕು.

10) ಕಛೇರಿಗಳಲ್ಲಿ ಶೌಚಾಲಯ ಸೌಲಭ್ಯ ಹಾಗೂ ಅಗತ್ಯ ಪೀಠೋಪಕರಣಗಳು ಮತ್ತು ಗಣಕಯಂತ್ರಗಳನ್ನು ಒದಗಿಸಬೇಕು.

11) ಮಹಿಳೆಯರ ಜನ ಸಂಖ್ಯೆಗನುಗುಣವಾಗಿ ಬಜೆಟ್ ಅನುದಾನವನ್ನು ಮೀಸಲಿಡಬೇಕು. ಒಂಟಿ ಮಹಿಳೆಯರು, ಗಂಡ ಸತ್ತ ಮಹಿಳೆಯರು, ಪರಿತ್ಯಕ್ತ ಮಹಿಳೆಯರು, ಅಂಗವಿಕಲ ಮಹಿಳೆಯರುಗಳಿಗೆ ಕನಿಷ್ಟ ಮಾಸಿಕ 5,000 ರೂಗಳ ನೆರವು ನೀಡಬೇಕು. ಗಂಡ ಸತ್ತ ಹಾಗೂ ಅಂಗವಿಕಲ ಮತ್ತು ದೇವದಾಸಿ ಯುವ ಮಹಿಳೆಯರ ಮರು ಮದುವೆಗೆ ಪ್ರೋತ್ಸಾಹ ಧನವನ್ನು ಒದಗಿಸಬೇಕು

12) ಪ್ರತಿಯೊಬ್ಬರಿಗೂ ನಿವೇಶನ ಸಹಿತ ಉಚಿತ ಮನೆಯನ್ನು ಒದಗಿಸಬೇಕು.

13) ಸರಕಾರಿ ನೌಕರಿಗಳಲ್ಲಿ ಆಧ್ಯತೆ ಮೇರೆಗೆ ನೌಕರಿ ಒದಗಿಸಬೇಕು.‌

 

ವಿಡಿಯೋ ನೋಡಿ : ಬಿಟ್ಟಿ ಜಾಕರಿ ಬೇಡ, ಸಮಾನ ವೇತನ ಕೊಡಿ – ಸಂಜೀವಿನಿ ನೌಕರರ ಆಕ್ರೋಶ

 

Donate Janashakthi Media

Leave a Reply

Your email address will not be published. Required fields are marked *