ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತನ್ನ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಪ್ರಸಕ್ತ ಆಸ್ಟ್ರೇಲಿಯಾ ಓಪನ್ ನಲ್ಲಿ ಆಡುತ್ತಿರುವ 35 ವರ್ಷದ ಸಾನಿಯಾ ಮಿರ್ಜಾ ಅವರು ಇದು ನನ್ನ ಕೊನೆಯ ಸೀಸನ್ ಎಂದು ಘೋಷಿಸಿದ್ದಾರೆ.
ಸಾನಿಯಾ ಅವರು ಆಸ್ಟ್ರೇಲಿಯನ್ ಓಪನ್ 2022 ರ ಮಹಿಳೆಯರ ಡಬಲ್ಸ್‌ನಲ್ಲಿ ಒಂದು ಗಂಟೆ 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿಉಕ್ರೇನಿಯನ್ ಜೊತೆಗಾರ ನಾಡಿಯಾ ಕಿಚೆನೊಕ್ ಜತೆ ತಮಾರಾ ಜಿಡಾನ್ಸೆಕ್ ಮತ್ತು ಕಾಜಾ ಜುವಾನ್ ವಿರುದ್ಧ 4-6, 6-7 ರಿಂದ ಸೋತರು.
ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮಹಿಳಾ ಡಬಲ್ಸ್ ಮೊದಲ ಸುತ್ತಿನಲ್ಲಿ ಜೊತೆಗಾರ್ತಿ ನಾಡಿಯಾ ಕಿಚೆನೊಕ್ ಅವರೊಂದಿಗೆ ಸೋತ ನಂತರ ನಿವೃತ್ತಿ ಕುರಿತಾಗಿ ಮಾತನಾಡಿದ ಅವರು ಇದು ನನ್ನ ಕೊನೆಯ ಆವೃತ್ತಿ ಎಂದು ನಿರ್ಧರಿಸಿದ್ದೇನೆ. ನಾನು ಈ ಆವೃತ್ತಿಯನ್ನು ಹೇಗೆ ಕೊನೆಗೊಳಿಸುತ್ತೇನೆ ಎಂಬುದು ಗೊತ್ತಿಲ್ಲ. ಜತೆಗೆ ಪ್ರತಿ ಬಾರಿಯು ಸ್ಪೂರ್ತಿಯಿಂದ ಕಣಕ್ಕಿಳಿಯಲು ಸಾಧ್ಯವಾಗುತ್ತಿಲ್ಲ. ನನ್ನ ದೇಹ ನನಗೆ ಸಹಕರಿಸುತ್ತಿಲ್ಲ. ದಿನದಿಂದ ದಿನಕ್ಕೆ ದೇಹವು ಕ್ಷೀಣಿಸುತ್ತಿದೆ. ನನ್ನ ಮೊಣಕಾಲಿನ ನೋವು ಜಾಸ್ತಿಯಾಗುತ್ತಿದೆ. ಇದರಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದೇನೆ. ಹೀಗಾಗಿ ಇಲ್ಲಿಗೆ ನನ್ನ ವೃತ್ತಿ ಬದುಕು ಅಂತ್ಯಗೊಳಿಸುವುದು ಉತ್ತಮ ಎಂಬ ಯೋಚನೆ ಬಂದಿದೆ ಎಂದು ಹೇಳಿದ್ದಾರೆ.
‘ನಿವೃತ್ತಿ ಘೋಷಿಸಲು ಕಾರಣಗಳು ಅನೇಕ ಇವೆ. ಇನ್ನು ಮುಂದೆ ನಾನು ಆಡುವುದಿಲ್ಲ ಎಂದು ಏಕಾಏಕಿ ಹೇಳುತ್ತಿಲ್ಲ. ಚೇತರಿಸಿಕೊಳ್ಳಲು ತುಂಬಾ ಸಮಯ ಹಿಡಿಯುತ್ತದೆ. ಮಗನಿಗೆ ಈಗ ಕೇವಲ ಮೂರು ವರ್ಷ. ಆತನೊಂದಿಗೆ ಬಹಳ ದೂರ ಪ್ರಯಾಣ ಮಾಡುವುದರ ಮೂಲಕ ಸಮಸ್ಯೆಗಳನ್ನು ತೊಂದೊಡ್ಡುತ್ತಿದ್ದೇನೆಯೋ ಎಂಬ ಆತಂಕ ಕಾಡುತ್ತಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಾನಿಯಾ ಮಿರ್ಜಾ 2013ರಲ್ಲಿ ಸಿಂಗಲ್ಸ್ ಆಡುವುದರಿಂದ ಹಿಂದೆ ಸರಿದಿದ್ದರು. ಅಂದಿನಿಂದ ಅವರು ಡಬಲ್ಸ್ ನಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದರು. ಸಾನಿಯಾ ಮಿರ್ಜಾ ಮೊದಲ ಮಗುವಿಗೆ ಜನ್ಮ ನೀಡಿದ ನಂತರ ಸುದೀರ್ಘ ಕಾಲ ಅಂಗಣದಿಂದ ಹೊರಗೆ ಉಳಿದಿದ್ದರು. 2019ರ ಮಾರ್ಚ್‌ನಲ್ಲಿ ಮತ್ತೆ ಆಡಲು ಇಳಿದಿದ್ದರು. ನಂತರ ಉಕ್ರೇನಿನ ನಾಡಿಯಾ ಕಿಚೆನೊಕ್ ಅವರೊಂದಿಗೆ ಹೋಬರ್ಟ್ ಇಂಟರ್ ನ್ಯಾಷನಲ್ ನಲ್ಲಿ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು.
ಸಾನಿಯಾ ಮಿರ್ಜಾ ಸುಮಾರು 91 ವಾರಗಳ ಕಾಲ ಡಬಲ್ಸ್ ನಲ್ಲಿ ನಂಬರ್ ಒನ್ ಆಗಿ ಉಳಿದಿದ್ದರು. 2015ರಲ್ಲಿ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಸಾನಿಯಾ ಸತತ 44 ಪಂದ್ಯಗಳನ್ನು ಗೆದ್ದಿದ್ದರು.
ಸಾನಿಯಾ ಮಿರ್ಜಾ ಇದುವರೆಗೂ ಒಟ್ಟು 6 ಗ್ರ್ಯಾನ್ ಸ್ಲಾಂಗಳನ್ನು ಜಯಿಸಿದ್ದಾರೆ. ಈ ಪೈಕಿ ಮೂರು ಗ್ರ್ಯಾನ್ ಸ್ಲಾಂಗಳು ಮಹಿಳಾ ಡಬಲ್ಸ್ ವಿಭಾಗದಲ್ಲಿ ಜಯಿಸಿದ್ದರೆ, ಮತ್ತೆ ಮೂರು ಗ್ರ್ಯಾನ್ ಸ್ಲಾಂಗಳು ಮಿಶ್ರ ಡಬಲ್ಸ್ ವಿಭಾಗದಲ್ಲಿ ಜಯಿಸಿದ್ದಾರೆ.
1986ರ ನವೆಂಬರ್ 15ರಂದು ಮುಂಬೈನಲ್ಲಿ ಜನಿಸಿದ ಸಾನಿಯಾ 2010ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು.