ಬೆಳಗಾವಿ: ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ನಸುಕಿನ ಜಾವ ಕೆಲವರು ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿರೂಪಗೊಳಿಸಿರುವ ಘಟನೆ ನಡೆದಿದೆ. ಜನರ ಓಡಾಟ ಇಲ್ಲದ ಸಮಯದಲ್ಲಿ ದುಷ್ಕರ್ಮಿಗಳು ಆಗಮಿಸಿ ಪುತ್ಥಳಿ ಬೀಳಿಸಿ ವಿರೂಪಗೊಳಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಪುತ್ಥಳಿ ಹಾನಿಗೊಳಿಸಿ ಖಡ್ಗ, ಗುರಾಣಿ ಬೇರೆ ಬೇರೆ ಕಡೆ ಎಸೆದಿದ್ದಾರೆ.
ಪುತ್ಥಳಿ ವಿರೂಪಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾನೂನು ಸುವ್ಯವಸ್ಥೆಗೆ ಯಾರೇ ಧಕ್ಕೆ ತಂದರೂ ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಈಗಾಗಲೇ ಗೃಹ ಸಚಿವರಿಗೆ ಸೂಚನೆ ನೀಡಿದ್ದು, ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 27 ಆರೋಪಿಗಳ ಬಂಧನವಾಗಿದೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ತರಹದ ಘಟನೆಗಳು ಕಲ್ಲು ತೂರಾಟ ನಡೆಸುವುದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯನ್ನುಂಟುಮಾಡುವುದು, ಸರ್ಕಾರದ ವಾಹನಗಳನ್ನು ಧ್ವಂಸ ಮಾಡುವುದು ಕಾನೂನುಬಾಹಿರ ಚಟುವಟಿಕೆ. ಘಟನೆಗಳು ಪುನರಾವರ್ತಿಸದಂತೆ ಕ್ರಮಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.
ಈ ರೀತಿಯ ದುಷ್ಕೃತ್ಯ ನಡೆಸುವುದಕ್ಕೆ ಹಲವಾರು ಕಾರಣಗಳಿವೆ. ಅಧಿವೇಶನ ಸಮಯದಲ್ಲಿ ಹೀಗೆ ಆಗುತ್ತಿದೆ. ಅವುಗಳನ್ನು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪುತ್ಥಳಿ ವಿಕೃತಿಗೊಳಿಸದ ನಂತರ ಸ್ಥಳದಲ್ಲಿ ತೀವ್ರ ಗಲಾಟೆ, ಗದ್ದಲ ನಡೆದಿದೆ. ಕರ್ನಾಟಕ ಸರ್ಕಾರದ, ಪೊಲೀಸ್ ಇಲಾಖೆಯ ವಾಹನಗಳನ್ನು ಗುರಿಯಾಗಿಟ್ಟು ಕಲ್ಲು ತೂರಾಟ ನಡೆದಿದೆ. ದುರ್ಘಟನೆಯಲ್ಲಿ ಅನೇಕ ಕಾರುಗಳು ಪುಡಿಯಾಗಿವೆ. ಈ ಘಟನೆಯ ನಂತರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ನಗರದಲ್ಲಿ ಎಂಇಎಸ್ ನವರ ಅಟ್ಟಹಾಸ ಅಧಿಕಗೊಂಡಿದ್ದು, ನಗರದ ಮೂರು ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆ, ಖಡೇಬಜಾರ್ ಪೊಲೀಸ್ ಠಾಣೆ ಮತ್ತು ಮಾರ್ಕೆಟ್ ಠಾಣೆಯಲ್ಲಿ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ.
ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿರೂಪಗೊಳಿಸಿದ್ದಕ್ಕೆ ಬೆಳಗಾವಿಯ ಮೂರು ವಿವಿಧ ಪೊಲೀಸ್ ಠಾಣೆಗಳಲ್ಲಿ ಘಟನೆಗೆ ಸಂಬಂಧಿಸಿ 27 ಮಂದಿ ಬಂಧಿಸಲಾಗಿದೆ. ಸರ್ಕಾರದ ಮತ್ತು ಬೆಳಗಾವಿಯ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಸುಮಾರು 26 ವಾಹನಗಳನ್ನು ಪುಂಡರು ಧ್ವಂಸಗೊಳಿಸಿದ್ದರು ಎಂದು ಬೆಳಗಾವಿ ಪೊಲೀಸ್ ಆಯುಕ್ತ ಡಾ ಕೆ ತ್ಯಾಗರಾಜನ್ ತಿಳಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಇಂದು ಬೆಳಗ್ಗೆ 8 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೂ ಬೆಳಗಾವಿ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಸಹ ಆಯುಕ್ತರು ತಿಳಿಸಿದ್ದಾರೆ.
ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಾನೂನು ಸುವ್ಯವಸ್ಥೆ ಹಾಳು ಮಾಡುವುದು, ಭಾಷಾ ವೈಷಮ್ಯ ಮೂಡಿಸುವುದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ನೂರಾರು ಎಂಇಎಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.