ಸಂಘಪರಿವಾರದ ರಾಜಕೀಯ ದಾಳ, ಕಾಂಗ್ರೆಸ್ ಪಕ್ಷದ ಮುಂದಾಳುಗಳು ಮೌನ

-ಮುನೀರ್‌ ಕಾಟಿಪಳ್ಳ

ಈದ್ ಮಿಲಾದ್ ಮೆರವಣಿಗೆಗಳು ಒಂದಿಷ್ಟು ಆತಂಕ, ಉದ್ವಿಗ್ನತೆಯ ನಡುವೆಯೂ ಶಾಂತಿಯುತವಾಗಿ ಮುಗಿಯಿತು. ಉದ್ರೇಕಕಾರಿ ಹೇಳಿಕೆ, ಮಾತುಗಳ ಮೂಲಕ ಉದ್ವಿಗ್ನತೆ, ಘರ್ಷಣೆ ಹುಟ್ಟು ಹಾಕಿ ಕರಾವಳಿ ಜಿಲ್ಲೆಗಳಲ್ಲಿ ಧಾರ್ಮಿಕ ಧ್ರುವೀಕರಣವನ್ನು ಅದೇ ಮಟ್ಟದಲ್ಲಿ ಕಾಪಿಟ್ಟುಕೊಳ್ಳುವ ಸಂಘಪರಿವಾರದ ಯೋಜನೆಗೆ ದೊಡ್ಡ ಯಶಸ್ಸು ಸಿಗದಿದ್ದರೂ, ಆಂತರಿಕವಾಗಿ ಸಮಾಧಾನಕರ ಯಶಸ್ಸು ದೊರಕಿರುವುದಂತೂ ಸತ್ಯ.‌ ಗಣೇಶೋತ್ಸವದ ಮೆರವಣಿಗೆಗೆ ಮುಸ್ಲಿಮರು ಸಿಹಿ ಹಂಚಬಾರದು ಎಂದು ಬಂಟ್ವಾಳದ ಯಾವುದೋ ಮೂಲೆಯ ಗಣೇಶೋತ್ಸವ ಸಮಿತಿ, ಸ್ಥಳೀಯ ಮಸೀದಿ ಆಡಳಿತಕ್ಕೆ ಪತ್ರ ಬರೆಯುವುದರೊಂದಿಗೆ ಆರಂಭವಾದ ಕಿಡಿ ಹಚ್ಚುವ ಯತ್ನ ದೂರದ ಮಂಡ್ಯ ಜಿಲ್ಲೆಯ ನಾಗಮಂಗಲದವರೆಗೂ ಸುತ್ತು ಹೊಡೆದು ಅದೇ ಬಂಟ್ವಾಳದ ಬಿ ಸಿ ರೋಡ್ ನಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಸಂಘಪರಿವಾರದ ಮುತ್ತಿಗೆ ಯತ್ನದ ಪ್ರಹಸನದೊಂದಿಗೆ ಕೊನೆಯಾಗಿದೆ.

ಇಲ್ಲಿಗೆ ಈ ಸುತ್ತಿನ ಪ್ರಯತ್ನಗಳು ಮುಗಿದಿದ್ದರೂ (ದಸರಾ ಹಬ್ಬದ ಸಂತೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಬಹಿಷ್ಕಾರದ ವಿಷಯ ಮುಂದಕ್ಕಿದೆ) ಕೆಲವು ಪ್ರಶ್ನೆಗಳು ಹಾಗೆಯೆ ಬಾಕಿ ಉಳಿದಿವೆ. ಈ ಪ್ರಶ್ನೆಗಳು ಬಜರಂಗ ದಳಕ್ಕೊ, ಧರ್ಮ ರಕ್ಷಣೆಯ ಗುತ್ತಿಗೆದಾರ ಶರಣ್ ಪಂಪ್ ವೆಲ್ ಗೊ, ಶರಣ್ ಪಂಪ್ ವೆಲ್ ಬೆಂಕಿ ಹಚ್ಚುವ ಮಾತುಗಳಿಗೆ ಅದೇ ಧಾಟಿಯಲ್ಲಿ ಉತ್ತರಿಸಬೇಕು ಎಂದು ಹಠಕ್ಕೆ ಬೀಳುವ ಮುಸ್ಲಿಂ ಸಮುದಾಯದಲ್ಲಿ ಅಲ್ಪ ಸಂಖ್ಯೆಯಲ್ಲಿರುವ ಅತಿರೇಕಿಗಳಿಗೋ ಅಲ್ಲ. ಪ್ರಶ್ನೆ ಇರುವುದು ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ, ಇಲ್ಲಿನ ಪೊಲೀಸ್ ಇಲಾಖೆಗೆ. ಕಾಂಗ್ರೆಸ್ ಪಕ್ಷದ ಅಧಿಪತಿಗಳಿಗೆ.

ಹೇಳಿ ಕೇಳಿ, ಶರಣ್ ಪಂಪ್ ವೆಲ್ ಪೊಲೀಸ್ ದಾಖಲೆಗಳ ಪ್ರಕಾರ ಅಪಾಯಕಾರಿ ಕಮ್ಯೂನಲ್ ಕ್ರಿಮಿನಲ್. ಅಂತಹ ಪೊಲೀಸ್ ದಾಖಲೆ ಹೊಂದಿದವರ ಮೇಲೆ ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಕಟ್ಟೆಚ್ಚರದ ನಿಗಾ ಇಡುವುದು, ಕಾನೂನಿನ ಬಲೆಯನ್ನು ಹರಡಿ ಚಟುವಟಿಕೆ ನಿರ್ಬಂಧಿಸುವುದು ಪೊಲೀಸ್ ಇಲಾಖೆಯಲ್ಲಿ ಸಹಜ ವಿದ್ಯಾಮಾನ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಈದ್ ಮಿಲಾದ್ ದಿನ ಬಿಸಿ ರೋಡ್ ನಲ್ಲಿ ಶರಣ್ ಪಂಪ್ ವೆಲ್ ಸಿನೆಮಾ ಶೈಲಿಯಲ್ಲಿ ಜನನಾಯಕನ ರೀತಿ ವಿಜೃಂಭಿಸಲು ಪೊಲೀಸ್ ಇಲಾಖೆ ಪೂರ್ಣ ಅವಕಾಶ ಒದಗಿಸಿತು.

ಇದನ್ನೂ ಓದಿ: ನಾಗಮಂಗಲ ಘಟನೆ: ತನಿಖಾ ವರದಿ ನಂತರ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು – ಗೃಹ ಸಚಿವ ಡಾ. ಜಿ. ಪರಮೇಶ್ವರ

ನಾಗಮಂಗಲದ ಘಟನೆಯ ಮರುದಿನ ಮಂಗಳೂರಿನಲ್ಲಿ ಸಂಘಪರಿವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಶರಣ್ ಪಂಪ್ ವೆಲ್ ತೀರಾ ಉದ್ರೇಕಕಾರಿ ಕೋಮು ಪ್ರಚೋದಕ ಭಾಷಣ ಮಾಡಿದ್ದರು.”ಈದ್ ಮಿಲಾದ್ ಮೆರವಣಿಗೆ ತಡೆಯುತ್ತೇವೆ” ಎಂದು ಬಹಿರಂಗವಾಗಿ ಮುಸ್ಲಿಂ ಸಮುದಾಯಕ್ಕೆ ಬೆದರಿಕೆ ಒಡ್ಡಿದ್ದರು. ಇದು ದೊಡ್ಡ ಸುದ್ದಿಯಾದರೂ ಮಂಗಳೂರು ಪೊಲೀಸರು ಏನೂ ನಡದೇ ಇಲ್ಲ, ಪಂಪ್ ವೆಲ್ ಮಾತೇ ಅಡಿಲ್ಲ ಎಂಬಂತೆ ಮೌನವಹಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ಧು ಮಾಡಿ, ಮುಸ್ಲಿಂ ಸಮುದಾಯದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪಂಪ್ ವೆಲ್ ಧಾಟಿಯಲ್ಲಿ ಪ್ರತಿ ಸವಾಲು ಹಾಕುವವರೆಗೂ ಮುಂದುವರಿಯಿತು.

ಮುಸ್ಲಿಂ ಸಮುದಾಯದ ಒಳಗಡೆಯ ವಾಟ್ಸಪ್ ಗುಂಪುಗಳಲ್ಲಿ ಉಂಟಾದ ಒತ್ತಡದ ಪರಿಣಾಮ ಬಂಟ್ವಾಳದ ಕಾಂಗ್ರೆಸ್ ಪಕ್ಷದ ಇಬ್ಬರು ಮುಸ್ಲಿಂ ಪುರಸಭಾ ಸದಸ್ಯರಾದ ಶೆರೀಫ್ ಹಾಗೂ ಹಸೈನಾರ್ ರವರು ಈದ್ ಮಿಲಾದ್ ಮುನ್ನಾ ದಿನ ಶರಣ್ ಪಂಪ್ ವೆಲ್ ಗೆ ಸವಾಲಿನ ವಾಯ್ಸ್ ಕ್ಲಿಪ್ ಅನ್ನು ವಾಟ್ಸಪ್ ಗುಂಪಿನಲ್ಲಿ ಹರಿಯಬಿಟ್ಟ ಮೇಲೆ ಪರಿಸ್ಥಿತಿ ಕಾವೇರಿತು. ಎರಡೂ ಕಡೆಯ ಅತಿರೇಕಿಗಳು ಆ ವಾಯ್ಸ್ ಕ್ಲಿಪ್ ಸುತ್ತ ಬಿರುಸಿನ, ಆವೇಶದ ಚರ್ಚೆ ಶುರು ಹಚ್ಚಿದರು. ಇದನ್ನೇ ಕಾಯುತ್ತಿದ್ದ ಸಂಘಪರಿವಾರ ಎಚ್ಚೆತ್ತುಕೊಂಡು ಊರಿಗೆ ಬೆಂಕಿ ಹಚ್ಚಲು ಬೇಕಾದ ಹತಾರಗಳನ್ನು ಸಿದ್ದಪಡಿಸತೊಡಗಿತು. ಬಜರಂಗ ದಳದ ಜಿಲ್ಲಾ ಸಂಚಾಲಕ, ಶರಣ್ ಪಂಪ್ ವೆಲ್ ನೆರಳು ಪುನೀತ್ ಅತ್ತಾವರ “ಜಿಹಾದಿಗಳ ಸವಾಲು ಸ್ವೀಕರಿಸಲಾಗಿದೆ‌. ನಾಳೆ ಬೆಳಿಗ್ಗೆ ಈದ್ ಮಿಲಾದ್ ಮೆರವಣಿಗೆಗೆ ಬಿ ಸಿ ರೋಡ್ ಗೆ ಬರುತ್ತೇವೆ. ತಾಖತ್ತಿದ್ದರೆ ತಡೆಯಿರಿ” ಎಂದು ಫೇಸ್ ಬುಕ್ ಪೋಸ್ಟ್ ಹಾಕಿ ಮುಸ್ಲಿಮರ ವಿರುದ್ದ ಬಿ ಸಿ ರೋಡ್ ಚಲೋ ಘೋಷಿಸಿದರು. ಬಿಜೆಪಿ ಶಾಸಕರುಗಳು, ಮರಿಕಿರಿ ನಾಯಕರುಗಳು ತಾಮುಂದು ನಾಮುಂದು ಎಂಬಂತೆ ಮುಸ್ಲಿಮರ, ಈದ್ ಮಿಲಾದ್ ಮೆರವಣಿಗೆಯ ವಿರುದ್ದ ಯಾವ ಮುಲಾಜೂ ಇಲ್ಲದೆ ಹೇಳಿಕೆಗಳನ್ನು ಹೊರಡಿಸಿದರು.

ಆಗ ಎಚ್ಚೆತ್ತ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಶರಣ್ ಪಂಪ್ ವೆಲ್ ಸವಾಲಿಗೆ ಪ್ರತಿ ಸವಾಲು ಹಾಕಿದ್ದ ಕಾಂಗ್ರೆಸ್ ಪಕ್ಷದ ಮುಸ್ಲಿಂ ಪುರಸಭಾ ಸದಸ್ಯರಿಬ್ಬರ ವಿರುದ್ದ ರಾತ್ರೋರಾತ್ರಿ ಎಫ್ಐಆರ್ ದಾಖಲಿಸಿದರು, ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ಕುಳ್ಳಿರಿಸಿದರು. ಪೊಲೀಸರ ಈ ಏಕಪಕ್ಷೀಯ ಕ್ರಮದ ವಿರುದ್ದ ಮುಸ್ಲಿಂ ಸಮುದಾಯದಿಂದ ಆಕ್ರೋಶ ವ್ಯಕ್ತವಾಗತೊಡಗಿದಾಗ ಬ್ಯಾಲೆನ್ಸ್ ಸಾಧಿಸಲು ಮಂಗಳೂರು ನಗರ ಪೊಲೀಸರು ಸೆನ್ ಠಾಣೆಯಲ್ಲಿ ಪುನೀತ್ ಅತ್ತಾವರ, ಶರಣ್ ಪಂಪ್ ವೆಲ್ ಮೇಲೆ ಪ್ರಕರಣ ದಾಖಲಿಸಿದರು. ಅತ್ತ ಸುರತ್ಕಲ್ ಸಮೀಪದ ಕಾಟಿಪಳ್ಳದ ಮಸೀದಿಯೊಂದರ ಮೇಲೆ ಬಜರಂಗ ದಳದ ಬೆಂಬಲಿಗರು ಕಲ್ಲು ತೂರಿದರು. ಅಷ್ಟು ಹೊತ್ತಿಗೆ ಶರಣ್ ಪಂಪ್ ವೆಲ್ ಪ್ರಚೋದಕ ಹೇಳಿಕೆ ನೀಡಿ ನಾಲಕ್ಕು ದಿನ ದಾಟಿತ್ತು. ಹೀಗೆ ಶೆರೀಫ್, ಹಸೈನಾರ್ ನನ್ನು ಎಫ್ಐಆರ್ ದಾಖಲಿಸಿ ವಶಕ್ಕೆ ಪಡೆದ ಪೊಲೀಸರು ತಮ್ಮದೆ ದಾಖಲೆಯ ಪ್ರಕಾರ ಮತೀಯ ಸಾಮರಸ್ಯಕ್ಕೆ ಅತಿ ದೊಡ್ಡ ಅಪಾಯಕಾರಿಗಳಾದ ಶರಣ್ ಪಂಪ್, ಪುನೀತ್ ಅತ್ತಾವರನನ್ನು ಮುಟ್ಟುವ ಧೈರ್ಯ ತೋರಲಿಲ್ಲ. ಆ ಮೂಲಕ ಶೆರೀಫ್, ಹಸೈನಾರ್ ಬಂಧನ ಬಜರಂಗ ದಳದ ಕಾರ್ಯಕರ್ತರ ಸಮಾಧಾನಕ್ಕಾಗಿ ಎಂಬುದೂ ಖಾತ್ರಿಯಾಯ್ತು.

ಇದನ್ನೂ ಓದಿ: ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳು ಸಂಘಟಿತರಾಗಬೇಕು – ನಾರಾಯಣ ಕಾಳೆ

ಅತ್ತ ಜಿಲ್ಲೆಯ ಮುಸ್ಲಿಮರು ಇದ್ಯಾವುದಕ್ಕೂ ಪ್ರತಿಕ್ರಿಯಿಸದೆ, ಕಲ್ಲು ತೂರಾಟದಿಂದ ಪುಡಿಯಾದ ಗಾಜನ್ನು ತೆರವುಗೊಳಿಸಿ ಹೊಸ ಗಾಜು ಅಳವಡಿಸಲು ಪೊಲೀಸರಿಗೆ ಅವಕಾಶ ಕೊಟ್ಟು ತಮ್ಮ ಪಾಡಿಗೆ ತಾವು ಈದ್ ಮಿಲಾದ್ ಸಿದ್ದತೆಯಲ್ಲಿ ಮುಳುಗಿ ಹೋದರು. ಕೋಮು ಸಂಘರ್ಷದ ಅವಕಾಶಕ್ಕಾಗಿ ಕಾಯುತ್ತಿದ್ದ ಸಂಘ ಪರಿವಾರ ಸುಮ್ಮನಿರಲಿಲ್ಲ. ರಾತ್ರಿ ಇಡೀ ಸಿದ್ದತೆ ನಡೆಸಿ ಬೆಳಿಗ್ಗೆ ಈದ್ ಮಿಲಾದ್ ಮೆರವಣಿಗೆ ಹೊರಡುವ ಸಮಯಕ್ಕೆ ಮೊದಲೇ ಬಿ ಸಿ ರೋಡ್ ಜಂಕ್ಷನ್ ನಲ್ಲಿ ಕೇಸರಿ ಧರಿಸಿದ ಕಾರ್ಯಕರ್ತರ ದೊಡ್ಡ ದಂಡು ಜಮಾಯಿಸುವಂತೆ ನೋಡಿಕೊಂಡಿತು. ಈದ್ ಮಿಲಾದ್ ಮೆರವಣಿಗೆ ತಡೆಯುವುದಾಗಿ ಘೋಷಿಸಿತು. ಹೀಗೆ ಸೇರಿದ ಗುಂಪಿನಲ್ಲಿ ಅಪಾಯಕಾರಿ ಕ್ರಿಮಿನಲ್ ಗಳು, ಈ ಹಿಂದೆ ಕೋಮು ದ್ವೇಷದ ಕೊಲೆಗಳಲ್ಲಿ, ದೊಂಬಿ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾದವರು “ಹಿಂದೂ ನಾಯಕ” ರ ಗೆಟಪ್ ನಲ್ಲಿ ಸೇರಿಕೊಂಡಿದ್ದರು.

ಈದ್ ಮಿಲಾದ್ ತಡೆಯುವ ಹೇಳಿಕೆಗೆ FIR ದಾಖಲಾಗಿದ್ದ ಶರಣ್ ಪಂಪ್ ವೆಲ್, ಪುನೀತ್ ಅತ್ತಾವರ ಸಹ ಭಾಗಿಯಾಗಿದ್ದರು. ಈ ರೀತಿಯ ಮತೀಯ ಕ್ರಿಮಿನಲ್ ಹಿನ್ನಲೆಯವರು ಅಲ್ಲಿ ಮುಸ್ಲಿಂ ವಿರೋಧಿ ತೀರಾ ಉದ್ರೇಕಕಾರಿ ಹೇಳಿಕೆಗಳನ್ನು ಪೊಲೀಸರ ಮುಂದೆ ನೀಡಿದರು. ಶರಣ್ ಪಂಪ್ ವೆಲ್ ಸಿನೆಮಾ ಶೈಲಿಯಲ್ಲಿ ಗುಂಪಿಗೆ ಎಂಟ್ರಿ ಕೊಟ್ಟು ಮುಸ್ಲಿಮರ ವಿರುದ್ದ ದ್ವೇಷ ಭಾಷಣ ಮಾಡಿದರು. ಈದ್ ಮಿಲಾದ್ ಮೆರವಣಿಗೆ ಬರುವ ದಾರಿಗೆ ನುಗ್ಗಲು ತೊಡಗಿದರು. ಇದೆಲ್ಲವೂ ಪೊಲೀಸರ ಸಮ್ಮುಖವೇ ನಡೆಯಿತು. ಪಶ್ಚಿಮ ವಲಯ ಐಜಿಪಿ, ದ.ಕ. ಜಿಲ್ಲಾ ಎಸ್‌ಪಿ ಸ್ಥಳದಲ್ಲಿ ಉಪಸ್ಥಿತರಿದ್ದು ಬೆಳವಣಿಗೆಗಳಿಗೆ ಸಾಕ್ಷಿಯಾದರು. ಹಿರಿಯ ಐಪಿಎಸ್ ಅಧಿಕಾರಿಗಳು ಸ್ಥಳದಲ್ಲಿದ್ದೂ, ಒಂದು ಧರ್ಮದ ಮೆರವಣಿಗೆ ತಡೆಯುತ್ತೇವೆ ಎಂದು ರಾತ್ರೋರಾತ್ರಿ ಕರೆ ನೀಡಿ ಬೆಳಗ್ಗೆ ಅಪಾಯಕಾರಿ ರೀತಿಯಲ್ಲಿ ಗುಂಪು ಸೇರಲು ಪೊಲೀಸರು ಅವಕಾಶ ಒದಗಿಸಿದ್ದು, ಈ ರೀತಿ ಕ್ರಿಮಿನಲ್ ಗಳು, ಕೊಲೆ ಆರೋಪ ಹೊತ್ತವರು, ಕೋಮು ಸಂಘರ್ಷಕ್ಕೆ ಕಾರಣರಾದವರು ಒಳಗೊಂಡ ಗುಂಪಿನ ಆಟಾಟೋಪಕ್ಕೆ ಪ್ರತಿಭಟನಾ ಸಭೆ ಎಂದು ಮಾನ್ಯತೆ ಒದಗಿಸಿದ್ದು ಈಗ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಪ್ರಶ್ನೆಗಳು ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯಗಳದ್ದು, ಜಾತ್ಯಾತೀತ ಮೌಲ್ಯಗಳಿಗೆ ಬದ್ದರಾಗಿರುವ ಜನ ಸಾಮಾನ್ಯರದ್ದೂ ಹೌದು.

ಈದ್ ಮಿಲಾದ್ ಗಿಂತ ನಾಲ್ಕೈದು ದಿನಗಳಿಗೆ ಮುಂಚಿತವಾಗಿಯೆ ಶರಣ್ ಪಂಪ್ ವೆಲ್ “ಈದ್ ಮಿಲಾದ್ ತಡೆಯುತ್ತೇವೆ” ಎಂದು ಭಾಷಣ ಬಿಗಿದಿದ್ದರೂ, ನಾಲಕ್ಕು ದಿನಗಳ ತರುವಾಯ ಕಾಂಗ್ರೆಸ್ ನ ಮುಸ್ಲಿಂ ಪುರಸಭಾ ಸದಸ್ಯರಿಬ್ಬರು ಅದಕ್ಕೆ ಪ್ರತಿಕ್ರಿಯಿಸಿ, ಅವರಿಬ್ಬರ ಮೇಲೆ ಬಂಟ್ವಾಳ ಪೊಲೀಸರು ಸ್ವಯಂ ಪ್ರೇರಣೆಯ ಮೊಕದ್ದಮೆ ದಾಖಲಿಸುವವರೆಗೂ ಶರಣ್ ಪಂಪ್ ವೆಲ್ ವಿರುದ್ದ ಮೊಕದ್ದಮೆ ದಾಖಲಿಸದೆ ಉಳಿದದ್ದು ಯಾಕೆ ? ಮೊಕದ್ದಮೆ ದಾಖಲಿಸಲ್ಪಟ್ಟ ತಕ್ಷಣವೇ ಕಾಂಗ್ರೆಸ್ ಪುರಸಭಾ ಸದಸ್ಯರಾದ ಶೆರೀಫ್ ಹಾಗೂ ಹಸೈನಾರ್ ರನ್ನು ವಶಕ್ಕೆ ಪಡೆದು ಈದ್ ಮಿಲಾದ್ ಆಚರಣೆ ಮುಗಿಯುವವರೆಗೂ ಪೊಲೀಸ್ ಠಾಣೆಯಲ್ಲಿ ಕುಳ್ಳಿರಿಸಲಾಯಿತು, ಅದೇ ಸಂದರ್ಭ ಬಿಸಿ ರೋಡ್ ಗೆ ಬಂದು ಈದ್ ಮಿಲಾದ್ ತಡೆಯುತ್ತೇವೆ ಎಂದು ಹೊರಟ ಶರಣ್ ಪಂಪ್ ವೆಲ್ ಹಾಗೂ ಪುನೀತ್ ಅತ್ತಾವರನನ್ನು ಪ್ರಕರಣ ದಾಖಲಾಗಿದ್ದರೂ ಪೊಲೀಸರು ವಶಕ್ಕೆ ಪಡೆಯದಿರಲು ಕಾರಣ ಏನು ? ಅವರು ಬಿ ಸಿ ರೋಡ್ ನಲ್ಲಿ ಉದ್ರಿಕ್ತ ಗುಂಪಿಗೆ ಬಂದು ಸೇರಲು ಅವಕಾಶ ಒದಗಿಸಿದ್ದು ಯಾಕೆ ?

ಪೊಲೀಸ್ ಇಲಾಖೆ ಸಿದ್ದಪಡಿಸಿದ ದಾಖಲೆಗಳ ಪ್ರಕಾರವೇ ಕ್ರಿಮಿನಲ್ ಗಳು, ಮತೀಯ ಗೂಂಡಾಗಳು, ಧರ್ಮ ದ್ವೇಷದ ಕೊಲೆ, ಸುಲಿಗೆ, ದೊಂಬಿ ಪ್ರಕರಣದ ಅಪಾಯಕಾರಿ ಆರೋಪಿಗಳು ಈದ್ ಮಿಲಾದ್ ಮೆರವಣಿಗೆ ತಡೆಯಲು ಅನುಮತಿ ಇಲ್ಲದೆ ಬಿ ಸಿ ರೋಡ್ ಜಂಕ್ಷನ್ ನಲ್ಲಿ ಗುಂಪು ಸೇರಲು ಅವಕಾಶ ಒದಗಿಸಿದ್ದು ಹೇಗೆ? ಈ ಅಪಾಯಕಾರಿ ಗುಂಪು ಸೇರುವಿಕೆಯನ್ನು “ಪ್ರತಿಭಟನಾ ಸಭೆ” ಎಂದು ಮಾನ್ಯತೆ ನೀಡಿ ಗಂಟೆಗಳ ಕಾಲ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದು ಹೇಗೆ. ಶರಣ್ ಪಂಪ್ ವೆಲ್, ಪುನೀತ್ ಅತ್ತಾವರರನ್ನು ದಾಖಲಾದ ಪ್ರಕರಣ ಅಥವಾ ಮುಂಜಾಗರೂಕತೆಯ ಭಾಗವಾಗಿ ವಶಕ್ಕೆ ಪಡೆದು ಬಿ ಸಿ ರೋಡ್ ಪ್ರವೇಶಿಸದಂತೆ ನಿರ್ಬಂಧ ವಿಧಿಸಲು ಪೊಲೀಸ್ ಇಲಾಖೆಗೆ ಅಸಾಧ್ಯವಾಗಲು ಕಾರಣ ಏನು ? ಹಸೈನಾರ್, ಶೆರೀಫ್ ಗೆ ಒಂದು ನ್ಯಾಯ, ಶರಣ್ ಪಂಪ್ ವೆಲ್, ಪುನೀತ್ ಅತ್ತಾವರನಿಗೆ ಇನ್ನೊಂದು ನ್ಯಾಯ ಅಂತಾದದ್ದು ಯಾಕೆ ! ಧರ್ಮಗಳ ಕಾರಣಕ್ಕೆ ತಾನೆ ? ಇದೆಲ್ಲವೂ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಹಾಗೂ ಜಿಲ್ಲಾ ಎಸ್ ಪಿ ಅವರ ನಿರ್ಧಾರ ಆಗಿತ್ತೆ ?

ಬಿ ಸಿ ರೋಡ್ ನಲ್ಲಿ ಅಕ್ರಮ ಕೂಟ ಸೇರಿಕೊಂಡು ಕೊಲೆ, ಕೊಲೆಯತ್ನ, ದೊಂಬಿ ಮುಂತಾದ ಗಂಭೀರ ಪ್ರಕರಣ ಆರೋಪಿಗಳು, ಪೊಲೀಸ್ ದಾಖಲೆಗಳ ಪ್ರಕಾರವೇ ಅಪಾಯಕಾರಿ ಕ್ರಿಮಿನಲ್ ಗಳು ಪ್ರತಿಭಟನೆ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಹೀನಾಯವಾಗಿ ನಿಂದಿಸುತ್ತಿದ್ದರೂ ಪೊಲೀಸರು ಮಧ್ಯ ಪ್ರವೇಶಿಸದೆ ಮೌನ ಪ್ರೇಕ್ಷಕರಾದದ್ದು ಬಹು ದೊಡ್ಡ ಲೋಪ ಅಲ್ಲವೆ ? ಈ ರೀತಿಯ ಮತೀಯ ದ್ವೇಷದ ಭಾಷಣ, ಹೇಳಿಕೆಗಳ ಮೇಲೆ ಪೊಲೀಸರು ಸುಮಟೊ ಮೊಕದ್ದಮೆ ದಾಖಲಿಸದೆ ಇರಲು, ಮೊಕದ್ದಮೆ ದಾಖಲಿಸಲು ಮುಸ್ಲಿಂ ಸಮುದಾಯದ ಪ್ರತಿನಿಧಿಗಳು ಠಾಣೆಗೆ ಬಂದು ದೂರು ನೀಡುವವರಗೆ ಕಾದದಕ್ಕೆ ಕಾರಣ ಏನು ? ಮತೀಯ ಸಾಮರಸ್ಯಕ್ಕೆ ಧಕ್ಕೆ ತರುವ ಉದ್ದೇಶದಿಂದ ಅನುಮತಿ ಪಡೆಯದೆ ಅಕ್ರಮ ಕೂಟ ಸೇರಿದ ಬಜರಂಗ ದಳದ ಗುಂಪಿನ ಮೇಲೆ FIR ದಾಖಲು ಮಾಡದಿರುವುದು ಯಾಕೆ ? ಪೊಲೀಸ್ ಇಲಾಖೆಯ ನಿರಾಸಕ್ತಿಯ ನಡುವೆಯೂ ಶರಣ್ ಪಂಪ್ ವೆಲ್ ಹಾಗೂ ಸಹಚರರ ಮೇಲೆ ಎರಡು FIR ದಾಖಲಾಗಿವೆ. ಆದರೂ ಪೊಲೀಸ್ ಇಲಾಖೆ ಅವರ ಬಂಧನಕ್ಕೆ ಮುಂದಾಗುತ್ತಿಲ್ಲ. ಇದರ ಉದ್ದೇಶ ಏನು , ಈ ಹಿಂದಿನ ಪ್ರಕರಣಗಳಂತೆ ಉಚ್ಚ ನ್ಯಾಯಾಲಯಕ್ಕೆ ಹೋಗಿ ಪ್ರಕರಣಕ್ಕೆ ತಡೆ ತರಲು ಶರಣ್ ಪಂಪ್ ವೆಲ್ ಕೋಮುವಾದಿ ಕೂಟಕ್ಕೆ ಅನುಕೂಲ ಮಾಡಿಕೊಡುವ ಇರಾದೆ ಪೊಲೀಸ್ ಇಲಾಖೆ ಹೊಂದಿದೆಯೆ ?

ಗಣೇಶೋತ್ಸವ, ಈದ್ ಮಿಲಾದ್ ಹಿನ್ನಲೆಯಲ್ಲಿ ಅನಾಹುತಕಾರಿ ವಿದ್ಯಾಮಾನಗಳು ಘಟಿಸುತ್ತಿದ್ದರೂ, ಸಂಘಪರಿವಾರ ರಾಜಕೀಯ ದಾಳಗಳನ್ನು ಉರುಳಿಸುತ್ತಿದ್ದರೂ ಆಳುವ ಕಾಂಗ್ರೆಸ್ ಪಕ್ಷದ ಮುಂದಾಳುಗಳು ಮೌನಕ್ಕೆ ಶರಣಾಗಿದ್ದಾರೆ. ಇದು ಹಿಂದು, ಮುಸ್ಲಿಂ ಸಮುದಾಯಗಳಿಗಷ್ಟೆ ಸಂಬಂಧಿಸಿದ್ದು ಎಂಬಂತೆ ತೀರಾ ಸರಳವಾಗಿ ನೋಡುತ್ತಿದ್ದಾರೆ‌. ಬೋಳಂತೂರಿನಲ್ಲಿ “ಗಣೇಶೋತ್ಸವ ಮೆರವಣಿಗೆಗೆ ಮುಸ್ಲಿಮರು ಸಿಹಿ ತಿಂಡಿ ವಿತರಿಸಬಾರದು” ಎಂದು ಸಂಘಪರಿವಾರದ ಸೂಚನೆಯಂತೆ ಮಸೀದಿಗೆ ಪತ್ರ ರವಾನೆಯಾದಾಗಲೆ ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಳ್ಳಬೇಕಿತ್ತು. ಸ್ಥಳೀಯವಾಗಿ ಪ್ರಭಾವಿಗಳಾಗಿರುವ ತನ್ನ “ಹಿಂದು” ಮುಖಂಡರಿಂದ ಈ ಪ್ರಕರಣಕ್ಕೆ ಬೇರೆಯೇ ತಿರುವು ಒದಗಿಸಬಹುದಿತ್ತು. ಆದರೆ, ಕಾಂಗ್ರೆಸ್ ಪಕ್ಷ ಮೌನ ವಹಿಸಿತು.‌

ಜಿಲ್ಲೆಯಲ್ಲಿ ಈದ್ ಮಿಲಾದ್ ಮೆರವಣಿಗೆ ತಡೆಯುವ ಬೆದರಿಕೆ ಬಜರಂಗ ದಳದಿಂದ ಹೊರಟಾಗಲು ಕಾಂಗ್ರೆಸ್ ನ ಬಹುಸಂಖ್ಯಾತ ನಾಯಕತ್ವ ಪ್ರತಿಕ್ರಿಯಿಸಲಿಲ್ಲ. ಇದರಿಂದಾಗಿ ಮುಸ್ಲಿಂ ಸಮುದಾಯದೊಳಗಡೆಯ ಅತಿರೇಕಿ ಶಕ್ತಿಗಳು ಸಮಾಜದೊಳಗಡೆಯ ವಾಟ್ಸಪ್ ಗುಂಪುಗಳಲ್ಲಿ ಎಬ್ಬಿಸಿದ ಗದ್ದಲದಿಂದ ಒತ್ತಡಕ್ಕೊಳಗಾದ ಕಾಂಗ್ರೆಸ್ ಪಕ್ಷದ ಬಂಟ್ವಾಳ ಪುರಸಭೆಯ ಇಬ್ಬರು ಮುಸ್ಲಿಂ ಸಮುದಾಯದ ಸದಸ್ಯರು ಪ್ರತಿ ಸವಾಲಿನ ಧಾಟಿಯಲ್ಲಿ ಪ್ರತಿಕ್ರಿಯಿಸುವಂತಾಯಿತು. ಈದ್ ಮಿಲಾದ್ ದಿನ ಸಂಘ ಪರಿವಾರ ಬಿ ಸಿ ರೋಡ್ ಜಂಕ್ಷನ್ ನಲ್ಲಿ ಮಿಲಾದ್ ರ್ಯಾಲಿ ತಡೆದೇ ತೀರುತ್ತೇವೆ ಎಂದು ಗುಂಪು ಸೇರಿದಾಗಲೂ ಕಾಂಗ್ರೆಸ್ ಪಕ್ಷದ ಬಹುಸಂಖ್ಯಾತ ಸಮುದಾಯದ ನಾಯಕರದ್ದು ದಿವ್ಯ ಮೌನ.

ಹತ್ತಿರದ ಹಲವು ಗ್ರಾಮಗಳಲ್ಲಿ ಸಾಮಾನ್ಯ ಹಿಂದು ಯುವಕರು ಈದ್ ಮಿಲಾದ್ ಮೆರವಣಿಗೆಗೆ ಸಿಹಿ ಹಂಚಿಕೆ ಮಾಡಿ ಮೌನ ಪ್ರತಿರೋಧ ಒಡ್ಡಿದಷ್ಟನ್ನೂ ಕಾಂಗ್ರೆಸ್ ಪಕ್ಷದ ಬಹುಸಂಖ್ಯಾತ ವಿಭಾಗದ ಮುಖಂಡರು ಬಿ ಸಿ ರೋಡ್ ನಲ್ಲಿ ಮಾಡಲಿಲ್ಲ. ಅಷ್ಟು ಮಾಡಿದ್ದರೂ ಹಿಂದು ವರ್ಸಸ್ ಮುಸ್ಲಿಂ ಅಂತ ಸಂಘದ ಅಜೆಂಡಾ ಯಶಸ್ವಿಯಾಗುವುದು ಅಂಶಿಕವಾಗಿಯಾದರೂ ವಿಫಲ ಆಗುತ್ತಿತ್ತು. ಇಷ್ಟನ್ನೂ ಮಾಡಲು ತಯಾರಾಗದ, ಸಂಘಪರಿವಾರವನ್ನು ಮುಸ್ಲಿಮರಾಗಿಯೆ ಎದುರಿಸಲು ತನ್ನ ಮುಸ್ಲಿಂ ಕಾರ್ಯಕರ್ತರನ್ನು ಬಿಟ್ಟುಕೊಟ್ಟ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಅದರ ಬಹುಸಂಖ್ಯಾತ ನಾಯಕತ್ವ ಇನ್ನು ಪೊಲೀಸರು ಮಾಡಿದ ತಾರತಮ್ಯ, ತಪ್ಪುಗಳನ್ನು ಪ್ರಶ್ನಿಸುವುದು, ಶರಣ್ ಪಂಪ್ ವೆಲ್ ಪರಿವಾರದ ವಿರುದ್ದ ಸರಿಯಾದ ಕಾನೂನು ಕ್ರಮ ಜರುಗುವಂತೆ ನೋಡಿಕೊಳ್ಳುವುದು ಕನಸಿನ ಮಾತಷ್ಟೆ.

ಇದನ್ನೂ ನೋಡಿ: ಸಿಜೆಐ ಮನೆಯ ಪೂಜೆಗೆ ಪ್ರಧಾನಿ ಮೋದಿ ಭಾಗವಹಿಸಿದ್ದು ಸರಿಯೇ? | ಚಂದ್ರಪ್ರಭ ಕಠಾರಿ Janashakthi Media

Donate Janashakthi Media

Leave a Reply

Your email address will not be published. Required fields are marked *