ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯದ ಜನಪ್ರತಿನಿಧಿಗಳು: ನಾಗಮೋಹನ್‌ದಾಸ್‌

ಬೆಂಗಳೂರು: ಅಖಿಲ ಭಾರತ ವಿಮಾ ಪೆನ್ಶನ್‌ದಾರರ ಸಂಘದ ಸಮ್ಮೇಳನವು ನಗರದ ಸಿಟಿ ಸೆಂಟಾರ್‌ ಹೋಟೆಲ್‌ನಲ್ಲಿ 29-31ನೆಯ ಮೇ ವರೆಗೆ ನಡೆಯುತ್ತಿದೆ. ಇಂದು(ಮೇ 29) ಬೆಳಿಗ್ಗೆ 11 ಗಂಟೆಗೆ ಸಮ್ಮೇಳನವನ್ನು ಖ್ಯಾತ ನ್ಯಾಯವಾದಿ ಮತ್ತು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ನೆರವೇರಿಸಿದರು.

ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ದೇಶದ ಪ್ರಚಲಿತ ರಾಜಕೀಯ, ಆರ್ಥಿಕ ಸನ್ನಿವೇಶಗಳನ್ನು ವಿಶ್ಲೇಷಿಸುತ್ತ, ಈ ದೇಶದ ಸೌಹಾರ್ದ ಸಾಮರಸ್ಯವನ್ನು ಕಾಪಾಡುವಲ್ಲಿ ಎಲ್ಲ ಹಿರಿಯ ನಾಗರೀಕರಿಗೆ ದೊಡ್ಡ ಜವಾಬ್ದಾರಿಯೆದೆಯೆಂದರು. ದೇಶವನ್ನಾಳುತ್ತಿರುವ ಬಹುತೇಕ ಜನಪ್ರತಿನಿಧಿಗಳಿಗೆ ಅಪರಾಧದ ಹಿನ್ನೆಲೆಯಿದೆ. ನಾಲ್ಕನೇ ಮೂರರಷ್ಟು ಜನಪ್ರತಿನಿಧಿಗಳು ಕೋಟ್ಯಾಧಿಪತಿಗಳು. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದವರೇ ಸಂವಿಧಾನವನ್ನು ಬದಲಿಸುವ ಮಾತುಗಳನಾಡುತ್ತಿದ್ದಾರೆ ಎಂದು ಹೇಳಿದರು.

ಸಂವಿಧಾನ ಉಳಿಸುವ, ಅದರ ಆಶಯಗಳನ್ನು ಜಾರಿ ಮಾಡುವಂತೆ ಮಾಡುವ ಹೊಣೆಯನ್ನು ನಿರ್ವಹಿಸುವ ಮೂಲಕ ಮುಂದಿನ ಪೀಳಿಗೆಯ ಹಿತಕಾಯುವಂತೆ ಕೆಲಸ ಮಾಡಿರಿ ಎಂದು ಕರೆ ನೀಡಿದರು.

ಅಖಿಲ ಭಾರತ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀಕಾಂತ ಮಿಶ್ರ ಮಾತನಾಡಿ, ಎಲ್ಲರಿಗೂ ಶುಭ ಕೋರುತ್ತಾ, ವಿಮಾ ಉದ್ದಿಮೆಯನ್ನು ರಾಷ್ಟ್ರೀಕರಣದ ದಿನಗಳಿಂದ ಬಲ್ಲವರು ನೀವು. ಸರ್ಕಾರವು ವಿಮಾ ರಂಗದಲ್ಲಿ ಖಾಸಗೀಯವರಿಗೆ ತೆರೆದಿಟ್ಟಿರುವುದು ಮಾತ್ರವಲ್ಲ, ಭಾರತೀಯ ಜೀವವಿಮಾ ನಿಗಮದಲ್ಲೂ ಪ್ರಾಥಮಿಕ ಸಾರ್ವಜನಿಕ ಕೊಡುಗೆಗೆ(ಐಪಿಓ) ಅವಕಾಶ ಮಾಡಿದೆ. ವಿಮಾ ಮಾರುಕಟ್ಟೆಯ ನಾಯಕನಾಗಿರುವ ನಮ್ಮ ಈ ಸಂಸ್ಥೆಯನ್ನು ಖಾಸಗೀಕರಣದಿಂದ ರಕ್ಷಿಸುವುದು ನಮ್ಮ ಆದ್ಯತೆ. ಜನತೆಯ ಬದುಕನ್ನು ಬರ್ಬರಗೊಳಿಸುತ್ತಿರುವ ಆರ್ಥಿಕ ನೀತಿಗಳನ್ನು ವಿರೋಧಿಸದೆ ಇದು ಸಾಧ್ಯವಿಲ್ಲ ಎಂದು ಹೇಳಿದರು.

ದುಡಿಯುವ ಜನರ ಹಿತಕಾಯುವ ಏಕೈಕ ಸಾಧನ ಎಂದರೆ ಐಕ್ಯತೆ. ಇಂದು ಆ ಐಕ್ಯತೆ ಒಡೆಯುವ ಹುನ್ನಾರಗಳು ತೀವ್ರಗೊಳ್ಳುತ್ತಿದೆ. ಹಾಗಾಗಿ ಈ ದೇಶದ ಪರಂಪರೆಯಾದ ಸೌಹಾರ್ದ ರಕ್ಷಿಸುವ ಮೂಲಕ ನಮ್ಮ ಐಕ್ಯತೆಯನ್ನು ಉಳಿಸಿಕೊಳ್ಳೋಣ ಎಂದರು.

ಅಖಿಲ ಭಾರತ ವಿಮಾ ನೌಕರರ ಸಂಘದ ಮಾಜಿ ಅಧ್ಯಕ್ಷ ಅಮಾನುಲ್ಲ ಖಾನ್‌ ಮಾತನಾಡಿ, ಘನತೆಯ ಬದುಕು ಎಲ್ಲರ ಹಕ್ಕು ಹಾಗಾಗಿ ಸಾರ್ವತ್ರಿಕ ಸಾಮಾಜಿಕ ಭದ್ರತೆಗಾಗಿ ನೀವು ಮುಂದಿಟ್ಟಿರುವ ಬೇಡಿಕೆ ಅತ್ಯಂತ ನ್ಯಾಯಯುತವಾದದ್ದು. ನಿವೃತ್ತಿ ವೇತನದ ಉನ್ನತೀಕರಣ, ಕೌಟುಂಬಿಕ ನಿವೃತಿ ವೇತನವನ್ನು ಶೇ. 30ಕ್ಕೆ ಏರಿಸುವಂತೆ ಆಡಳಿತ ಮಂಡಳಿಯ ಮುಂದಿಟ್ಟಿರುವ ಬೇಡಿಕೆಗಳ ಈಡೇರುವಂತಾಗಲಿ. ಹಾಗಾಗಲು ಅಗತ್ಯವಿರುವ ಹೋರಾಟಗಳು ಇನ್ನಷ್ಟು ತೀವ್ರವಾಗಲಿ ಎಂದರು.

ವಿಮಾ ನಿವೃತ್ತಿದಾರರ ಸಂಘದ ಅಧ್ಯಕ್ಷ ಅಶೋಕ್‌ ತಿವಾರಿ ಸಮ್ಮೇಳನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ನಡೆಸಿಕೊಟ್ಟರು. ಸಮಾರಂಭದಲ್ಲಿ ವಿವಿಧ ಸಹೋದರ ಸಂಘಟನೆಗಳ ನಾಯಕರುಗಳು ಭಾಗವಹಿಸಿದ್ದರು.

ಸ್ವಾಗತ ಸಮಿತಿಯ ಅಧ್ಯಕ್ಷರಾದ ಖ್ಯಾತ ರಂಗನಟ ಮತ್ತು ನಿರ್ದೇಶಕ ಬಿ. ಸುರೇಶ ಅವರು ಸ್ವಾಗತ ಭಾಷಣ ಮಾಡಿದರು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಟಿ.ಕೆ. ಚಕ್ರವರ್ತಿ ವಂದನಾರ್ಪಣೆ ಮಾಡಿದರು.

Donate Janashakthi Media

Leave a Reply

Your email address will not be published. Required fields are marked *