ಬೆಂಗಳೂರು: ಡಾ||ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವದ ದೃಢ ಸಂಕಲ್ಪದೊಂದಿಗೆ ವಿಶ್ವದಲ್ಲೇ ಉತ್ತಮ ಸಂವಿಧಾನ ಈ ದೇಶಕ್ಕೆ ಅರ್ಪಿಸಿದರು. ಸಂವಿಧಾನ ಅನುಷ್ಠಾನಗೊಂಡು 72 ವರ್ಷಗಳು ಸರಿದರೂ ಸಹ ಸಂವಿಧಾನದ ಆಶಯಗಳು ಜಾರಿಯಾಗದಿರುವುದು ದೂಃಖಕರ ಸಂಗತಿ ಎಂದು ಡಾ.ಕೋದಂಡ ರಾಮ್ ಹೇಳಿದರು.
ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ರಾಜ್ಯದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ಕೊಲೆ ಮತ್ತು ದೌರ್ಜನ್ಯ ಖಂಡಿಸಿ ಹಾಗೂ ಎಸ್.ಸಿ./ ಎಸ್.ಟಿ.ಗಳ ಸೌಲಭ್ಯ ವಂಚಿತರನ್ನಾಗಿಸುವ ಧೋರಣೆಯನ್ನು ಖಂಡಿಸಿ ʻʻಜನಾಂದೋಲನ ಪ್ರತಿಭಟನೆʼʼ ಯನ್ನು ಹಮ್ಮಿಕೊಂಡಿತು.
ಬಾಬಾ ಸಾಹೇಬರ ಆಶಯದ ಸಂವಿಧಾನ ರೂಪಿಸಿಕೊಟ್ಟ ಸ್ವಾತಂತ್ರ್ಯ, ಶಿಕ್ಷಣ, ಆರೋಗ್ಯ, ಆರ್ಥಿಕ ಸೌಲಭ್ಯಗಳು ಹಾಗೂ ಈ ದೇಶದ ಎಲ್ಲರೂ ಸಮಾನತೆ ಸಹಬಾಳ್ವೆ ಸಮಪಾಲು ಇವುಗಳನ್ನು ದಕ್ಕಲೇ ಇಲ್ಲ. ಈ ದೇಶದಲ್ಲಿ ದಲಿತ ಸಂಉದಾಯದ ಹೆಣ್ಣು ಮಕ್ಕಳ ಮೇಲಿನ ಬಲತ್ಕಾರ, ಸಾಮಾಜಿಕ ಬಹಿಷ್ಕಾರ, ಕೊಲೆ, ಗ್ರಾಮ ಬಹಿಷ್ಕಾರ, ದೌರ್ಜನ್ಯಗಳು ನಿಂತಿಲ್ಲ. ಸಾಮಾಜಿಕ ನ್ಯಾಯದ ವಿರುದ್ಧ ಅರ್ಥಹೀನ ಗೊಂದಲ ಸೃಷ್ಟಿಸುತ್ತಿರುವ ಮನುವಾದಿ ಮನಸ್ಸುಗಳ ಅಸ್ಪೃಶ್ಯತಾ ಆಚರಣೆಯ ಕಾರ್ಯಗಳಿಗೆ ಇಂಪು ನೀಡುತ್ತಿವೆ.
ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಂಸ್ಥಾಪಕ ಡಾ.ಕೋದಂಡ ರಾಮ್ ಮಾತನಾಡಿ ʻʻಒಬ್ಬ ಕೇಂದ್ರ ಸಚಿವ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂಬ ದುರಂಕಾರದ ಹೇಳಿಕೆ ನೀಡುತ್ತಾರೆ. ಮತ್ತೊಬ್ಬರು ಈ ದೇಶವನ್ನು ಹಿಂದು ರಾಷ್ಟ್ರ ಮಾಡೇ ಮಾಡುತ್ತೇವೆ ಎಂಬ ಮತೀಹೀನ ಮಾತುಗಳನ್ನಾಡುತ್ತಾರೆ. ದಲಿತ ಸಮುದಾಯಕ್ಕೆ ಸೇರಿದ ಮಗುವೊಂದು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಮಗುವಿನ ಪೋಷಕರಿಗೆ ದಂಡ ಹಾಕುವ ಪರಿಸ್ಥಿತಿಗಳು ನಿರ್ಮಾಣವಾಗುತ್ತಿವೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಸಂವಿಧಾನ ವಿರೋಧಿಯಾಗ ನಡೆದುಕೊಳ್ಳಲಾಗುತ್ತಿದೆʼ ಎಂದು ಹೇಳಿದರು.
ಹೋರಾಟದ ಮೂಲಕ ಹಕ್ಕೋತ್ತಾಯಗಳನ್ನು ಮಂಡಿಸಿರುವ ಸಂಘಟನೆಯು ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಕೊಲೆ ಹಾಗೂ ದೌರ್ಜನ್ಯ ನಿಯಂತ್ರಣಕ್ಕೆ ಸುರಕ್ಷತೆಯ ಕಾನೂನನ್ನು ಜಾರಿಗೆ ತರಬೇಕು. ದೌರ್ಜನ್ಯಕ್ಕೆ ಬಲಿಯಾದ ಕುಟುಂಬಕ್ಕೆ 50 ಲಕ್ಷಗಳ ಪರಿಹಾರ ನೀಡಬೇಕು, ತಪ್ಪಿತಸ್ಥ ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸುವ ಕಾಯ್ದೆಯನ್ನು ಜಾರಿಗೆ ತರಬೇಕು. ದಲಿತ ಜನಾಂಗದವರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನಿರ್ಲಕ್ಷತೆ ವಹಿಸಿರುವ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲು ಆಗ್ರಹಿಸಿದ್ದಾರೆ.
ಅಲ್ಲದೆ, ಎಸ್‌ಸಿ/ಎಸ್‌ಟಿ ಉಪಯೋಜನೆ ಕಾಯ್ದೆಯಲ್ಲಿ ಅಭಿವೃದ್ಧಿಗೆ ಮಾರಕವಾಗಿರುವ ಕಲಂ 7ಡಿ ಅನ್ನು ರದ್ದುಗೊಳಿಸಬೇಕು, ಜಾರಿಗೊಳಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಎಸ್‌ಸಿ/ಎಸ್‌ಟಿ ಆಯೋಗಕ್ಕೆ ವಿಚಾರಣೆ ನಡೆಸಿ ಶಿಕ್ಷೆ ನೀಡುವ ಅಧಿಕಾರ ನೀಡಬೇಕು. ಖಾಸಗಿ ಕ್ಷೇತ್ರದಲ್ಲಿ ಜಾತಿವಾರು ಹಾಗೂ ಮಹಿಳೆಯರಿಗೆ ಮೀಸಲಾತಿಯನ್ನು ಕೂಡಲೇ ಜಾರಿಗೆ ತರಬೇಕೆಂಬ ಪ್ರಮುಖ ಬೇಡಿಕೆಗಳನ್ನು ಮಂಡಿಸಿದ್ದಾರೆ.
ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಿ. ಎಸ್‌ಸಿ/ಎಸ್‌ಟಿ ಜನಾಂಗಕ್ಕೆ ಖಾಸಗಿ ಶಾಲೆಗಳಲ್ಲಿ ಉಚಿತ ನೋಂದಣಿ ಜಾರಿಗೆ ತರಬೇಕು ಮತ್ತು ಎಸ್‌ಸಿ/ಎಸ್‌ಟಿಗಳ ಒಳಮೀಸಲಾತಿಯನ್ನು ಅನುಮೋದಿಸುವ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಆದೇಶ ಹೊರಡಿಸಬೇಕೆಂದು ಆಗ್ರಹಿಸಲಾಗಿದೆ.
ಅಲ್ಲದೆ, ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಹುಣಸಗಿ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಮಳಿಗೆಗಳ ಮೇಲೆ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿರುವುದನ್ನು ತೆರವುಗೊಳಿಸಿ ಅದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.