ದಾಂಡೇಲಿ: ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವವರು ಸಂವಿಧಾನದ ಮೌಲ್ಯಗಳನ್ನು ಕಡೆಗಣಿಸುತ್ತಿದ್ದಾರೆ. ಇಂದು ಜನತೆ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಳುವರಿಗೆ ಸೌಹಾರ್ದತೆಯ ಬದುಕು ಬೇಕಾಗಿಲ್ಲ. ಮತಧರ್ಮ ನಿರಪೇಕ್ಷತೆಯ ಆಶಯಗಳಿಗೆ ಪೆಟ್ಟುಕೊಡುತ್ತಿದ್ದಾರೆ. ಮನುಷ್ಯರೆಲ್ಲ ಒಂದು ಎಂಬ ಭಾವೆನೆಗೆ ಧಕ್ಕೆ ತರುವಂಥ ಆತಂಕದ ಸ್ಥಿತಿ ನಿರ್ಮಿಸುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಎ.ಎ.ರಹಿಂ ನುಡಿದರು.
ದಾಂಡೇಲಿಯಲ್ಲಿ ಯುವಜನರು ಹಾಗೂ ಸಮಾನಮನಸ್ಕರ ಜೊತೆ ಸೌಹಾರ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೀವನೋಪಾಯದ ಖರ್ಚುಗಳು ಹೆಚ್ಚುತ್ತಿರುವ ಈ ವೇಳೆಯಲ್ಲಿ ನಿರುದ್ಯೋಗದ ಬಗ್ಗೆ, ಉದ್ಯೋಗದ ಹಕ್ಕು ನಂತರ ಉದ್ಯೋಗ ಹೀನತೆಯ ವಿಚಾರದ ಬಗ್ಗೆ ಯಾವುದೇ ಕಾಳಜಿಯುತ ಚರ್ಚೆಗಳನ್ನು ದೇಶದ ಆಳುವವರಿಂದ ಮಾಡಲಾಗುತ್ತಿಲ್ಲ. ಎಲ್ಲರಿಗೂ ಉದ್ಯೋಗ ಹೇಗೆ ಕೊಡಬೇಕೆಂಬ ಪ್ರಧಾನ ವಿಷಯ ಗಳನ್ನು ಆಳುವವರು ಮುನ್ನೆಲೆಗೆ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ ಖ್ಯಾತ ಒಕ್ಸಫಾಮಾ ವರದಿ ಹೇಳಿದಂತೆ ಸಮಾಜದಲ್ಲಿ ಅಸಮಾನತೆ ತುಂಬಾ ಹೆಚ್ಚುತ್ತಿದೆ. ಕೆಲವೇ ಕೆಲವು ಜನರಲ್ಲಿ ಭಾರತದ ಬಹುದೊಡ್ಡ ಸಂಪತ್ತಿನ ಪಾಲು ಇದೆ. ಜನತೆ ಮತ್ತು ಕಾರ್ಪೋರೇಟ್ ಶ್ರೀಮಂತರ ನಡುವಿನ ಅಸಮಾನತೆಯು ಸಾಮಾನ್ಯ ಚಿತ್ರಣವಾಗಿದೆ ಮತ್ತು ಇದು ನಾವು ಎದುರಿಸುತ್ತಿರುವ ಪ್ರಧಾನ ಸಮಸ್ಯೆ ಆಗಿದೆ ಎಂದರು.
ಇವುಗಳನ್ನು ಹೋಗಲಾಡಿಸಬೇಕೆಂದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲೇಬೇಕು. ನಾನು ಈ ಜಿಲ್ಲೆಗೆ ಮೊದಲ ಬಾರಿ ಭೇಟಿ ನೀಡಿದ್ದೇನೆ. ನನ್ನ ಗಮನದಲ್ಲಿ ಇದ್ದಹಾಗೆ ಇಲ್ಲಿ ಈ ನಾಡು ಪ್ರಾಕೃತಿಕ ಸಂಪತ್ತಿನಿಂದ ಕೂಡಿದ್ದು ಹಲವು ಅಭಿವೃದ್ಧಿಯ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಪ್ರವಾಸೋದ್ಯಮದಲ್ಲಿ ಅವಕಾಶ ಇದೆ. ಆದರೂ ಉತ್ತಮ ಸಾರಿಗೆ ಸೌಲಭ್ಯ, ಸರಿಯಾದ ಪಕ್ಕಾ ರಸ್ತೆಗಳಂಥ ಮೂಲಸೌಕರ್ಯ ಕೊರತೆ ಕಣ್ಣಿಗೆ ರಾಚುತ್ತಿದೆ ಎಂದು ತಿಳಿಸಿದರು.
ಸರ್ಕಾರದ ಮೂಲಕ ಪ್ರವಾಸೋದ್ಯಮ ಬೆಳವಣಿಗೆಗೆ, ನಿರುದ್ಯೋಗ ನಿವಾರಣೆಗೆ ಎಲ್ಲರೂ ಕೂಡಿ ಹೋರಾಟ ಮಾಡಲೇಬೇಕು. ಸರ್ಕಾರ ತನ್ನ ಬಜೆಟ್ಟಿನಲ್ಲಿ ಹೆಚ್ಚು ಹಣ ಮೀಸಲಿಡುವಂತೆ ಒತ್ತಡ ತರಬೇಕಿದೆ. ಭವಿಷ್ಯದಲ್ಲಿ ಯುವಜನತೆಗೆ ಉದ್ಯೋಗಾವಕಾಶ ಒದಗಿಸುವ ಪ್ರಧಾನ ಕ್ಷೇತ್ರ ಪ್ರವಾಸೊದ್ಯಮವೇ ಆಗಲಿದೆ.
ಕೇರಳದಲ್ಲಿ ನವೀನ ಮಾದರಿಯ ಜವಾಬ್ದಾರಿ ಯುತ ಪ್ರವಾಸೋದ್ಯಮ ಅಂದರೆ ಆತಿಥ್ಯ, ಸ್ವಚ್ಛತೆ ಹಾಗೂ ಪ್ರವಾಸೋದ್ಯಮ ಉನ್ನತಿಕರಣ ಒಳಗೊಂಡ ಒಂದು ಅಭಿಯಾನವನ್ನೇ ಪ್ರಾರಂಭಿಸಿ ಯಶಸ್ವಿಯಾಗಿದ್ದೇವೆ. ವಿಶ್ವ ಪ್ರವಾಸೋದ್ಯಮದಲ್ಲಿ ಗುರ್ತಿಸಲ್ಪಟ್ಟುದು ಕೇರಳದ ಹೆಚ್ಚುಗಾರಿಕೆಯಾಗಿದೆ. 2026 ರಲ್ಲಿ ನಡೆಯುವ Global Responsible tourism summit ನ್ನು ಕೇರಳದಲ್ಲೇ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಹೋಮ್ ಸ್ಟೇ ರೆಸಾರ್ಟ್ ಮಾಲಕರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿರಾವ್ ಅವರು ದಾಂಡೇಲಿ ಜೋಯಿಡಾದ ಪ್ರವಾಸೋಧ್ಯಮ ಅಭಿವೃದ್ದಿಗೆ ಸಂಬಂಧಿಸಿ ರಾಜ್ಯಸಭಾ ಸದಸ್ಯ ಎ.ಎ.ರಹಿಂ ಅವರಲ್ಲಿ ಮನವಿ ಮಾಡಿ, ಕೇಂದ್ರದ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ತಿಳಿಸಿದರು.
ಡಿವೈಎಫ್ ಐ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ಮಾತನಾಡಿ ದೇಶದ ಸೌಹಾರ್ದತೆಗಾಗಿ ಯುವಜನರು ಸಂಘಟಿತರಾಗಬೇಕೆಂದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್ ಪ್ರಾಸ್ತಾವಿಕ ಮಾತನಾತುಗಳನ್ನಾಡಿ, ಜಿಲ್ಲೆಯಲ್ಲಿರುವ ರಾಷ್ಟ್ರೀಯ ಮಹತ್ವದ ಸಮಸ್ಯೆಗಳು ಹಾಗೂ ಸಾಂಸ್ಕೃತಿಕ ಸ್ಥಿತಿಗತಿ ವಿವರಿಸಿದರು.
ಪ್ರವಾಸೋದ್ಯಮಿಗಳಾದ ಉಸ್ಮಾನ್ ವಹಾಬ್, ಅನಿಲ್ ದಂಡಗಲ, ನಗರಸಭೆ ಮಾಜಿ ಅಧ್ಯಕ್ಷ ತಸವರ ಸೌದಾಗರ, ಪ್ರಮುಖರಾದ ಆರ್.ಪಿ. ನಾಯ್ಕ, ಎಸ್.ಎಸ್. ಪೂಜಾರ, ಮುಂತಾದವರು ಚರ್ಚೆ ನಡೆಸಿದರು. ಪ್ರಮುಖರಾದ ಆರ್.ಎಮ್. ಮುಲ್ಲಾ, ವಿಠ್ಠಲ ರೇಣಕೆ, ನಾಗಪ್ಪ ನಾಯ್ಕ, ಮಂಜುಳಾ, ಡಿ. ಸ್ಯಾಮಸನ್ ರತ್ನದೀಪಾ ಎನ್.ಎಮ್, ಇಮ್ರಾನ್ ಖಾನ್, ಕಾಂತರಾವ ಮುಂತಾದವರು ಹಾಜರಿದ್ದು ಸಂವಾದ ನಡೆಸಿದರು.
ಡಿ.ವೈ.ಎಪ್.ಐ. ರಾಜ್ಯ ಸಮಿತಿ ಸದಸ್ಯ ಡಿ. ಸ್ಯಾಮ್ಸನ್ ಸ್ವಾಗತಿಸಿದರು. ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ ವಂದಿಸಿದರು.