ಸಾಮೂಹಿಕ ಅತ್ಯಾಚಾರ ಎಸಗಿದವರಿಗೆ ಬಿಡುಗಡೆಯ ಭಾಗ್ಯ-ಭಾರತಮಾತೆಯದೆಂತ ಸೌಭಾಗ್ಯ!!!

ಕೆ.ಎಸ್‌. ವಿಮಲ

ಅಲ್ಲೊಂದು ಸಂಭ್ರಮಾಚರಣೆ, ಗೋದ್ರಾ ಜೈಲಿನಿಂದ ೧೧ ಜನ ಅಪರಾಧಿಗಳನ್ನು ಸ್ವಾತಂತ್ರ್ಯದ ೭೫ನೇ ವರ್ಷಾಚರಣೆಯ ದಿನ ಸ್ವತಂತ್ರಗೊಳಿಸಲಾಯಿತು. ಅವರು ದೇಶ ರಕ್ಷಣೆಗಾಗಿ ಗಡಿಗಳಲ್ಲಿ ಶತ್ರು ಸೈನಿಕರ ಜೊತೆ ಕಾದಾಡಿದವರೆಂದು ಭಾವಿಸಿದಿರಾ? ಅಲ್ಲಲ್ಲ,, ಅವರು ಸಾಮೂಹಿಕ ಅತ್ಯಾಚಾರವೆಸಗಿ, ಹಸುಗೂಸಿನ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ತೃಷೆ ತೀರಿಸಿಕೊಂಡವರು. ಅವರನ್ನು ಗುಜರಾತ್‌ ಸರಕಾರ ʼಸನ್ನಡತೆʼಯ ಕಾರಣಕ್ಕೆ ಮತ್ತು ೧೫ ವರ್ಷ ಕಾರಾಗೃಹ ಅನುಭವಿಸಿದವರೆಂದು ಬಿಡುಗಡೆ ಮಾಡಿದೆ. ಗೋದ್ರಾ ಜೈಲಿನ ಹೊರಗೆ ಮಹಿಳೆಯರು!! ಅವರಿಗೆ ಆರತಿ ಬೆಳಗಿ, ತಿಲಕ ಹಚ್ಚಿ ಅವರ ಶೌರ್ಯ ಪರಾಕ್ರಮಗಳನ್ನು ಗುರುತಿಸಿದ್ದಾರೆ. ಹ್ಞಾಂ…. ರಾಜಸ್ಥಾನದ ಭಾಂವ್ರಿ ದೇವಿಯ ಪ್ರಕರಣವೂ ಹೀಗೇ ಅಲ್ಲವೇ ನಡೆದಿದ್ದು. ಅಲ್ಲಿಯೂ ಬಿ.ಜೆ.ಪಿ.ಯ ಅಪ್ಪಟ ಸಂಸ್ಕಾರವಂತ ಮಹಿಳೆಯರು ಆರತಿ ಬೆಳಗಿ ಹೂಮಾಲೆ ಹಾಕಿ ಸಾಮೂಹಿಕ ಅತ್ಯಾಚಾರಿಗಳನ್ನು ಅಲ್ಲಿನ ಕೋರ್ಟ್‌ ಬಿಡುಗಡೆ ಮಾಡಿದಾಗ ಬರಮಾಡಿಕೊಂಡಿದ್ದರು.

೨೦೦೨ರ ಕುಖ್ಯಾತ ಪ್ರಕರಣವಿದು: ಬಿಲ್ಕಿಸ್‌ ಬಾನು ಎಂಬ ಐದು ತಿಂಗಳ ಗರ್ಭಿಣಿ ಹೆಣ್ಣು ಮಗಳು ಮತ್ತು ಇತರ ಮಹಿಳೆಯರ ಸಾಮೂಹಿಕ ಅತ್ಯಾಚಾರವೆಸಗಿ, ಮೂರು ವರ್ಷದ ಕಂದಳ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು, ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದವರನ್ನು ಗುಜರಾತ್‌ ಸರಕಾರ ಬಿಡುಗಡೆ ಮಾಡಿದೆ. ಇದು ಗುಜರಾತಿನ ಕುಖ್ಯಾತ ಗೋದ್ರಾ ಮತ್ತು ಗೋದ್ರೋತ್ತರ ನರಮೇಧಗಳ ಸಂದರ್ಭದ ಘಟನೆ. ಬಿಲ್ಕಿಸ್‌ ಬಾನು, ೨೧ ವರ್ಷದ ಯುವತಿ. ಮೂರು ವರ್ಷದ ಮಗಳು ಮತ್ತು ಐದು ತಿಂಗಳ ಕೂಸು ಗರ್ಭದಲ್ಲಿ ಹೊತ್ತು ಧರ್ಮದ ನಶೆ ಏರಿದ ದಾಳಿಕೋರರ ದಾಳಿ ಆಕ್ರಮಣಗಳಿಂದ ತಪ್ಪಿಸಿಕೊಳ್ಳಲು ಕುಟುಂಬದ ಇತರ ಸದಸ್ಯರ ಜೊತೆ ಊರು ತೊರೆದು ಹೊರಟು ನಿಂತವಳು. ದುರಾಕ್ರಮಿಗಳು ಮಾರಕಾಸ್ತ್ರಗಳನ್ನು ಹಿಡಿದು ಅವರು ಅವಿತಿಟ್ಟುಕೊಂಡಿದ್ದ ಸ್ಥಳಕ್ಕೆ ನುಗ್ಗಿ ಇಡೀ ಕುಟುಂಬದ ಮೇಲೆ ಎರಗುತ್ತಾರೆ. ಆಕೆಯ ಕಂಕುಳಲ್ಲಿದ್ದ ಮೂರು ವರ್ಷದ ಕಂದಮ್ಮನನ್ನು ಕಿತ್ತೆಸೆದು ಅದರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಸಾಯಿಸುತ್ತಾರೆ… ಪುರುಷ ಸದಸ್ಯರನ್ನು ಬಡಿಯುತ್ತಾರೆ. ಬಿಲ್ಕಿಸ್‌ ಳ ತಾಯಿಯ ಮೇಲೂ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ. ಬರ್ಭರತೆಗೆ ಇಡೀ ದೇಶ ಬೆಚ್ಚಿ ಬಿದ್ದಿತ್ತು.

ತಮ್ಮ ಮೇಲಾದ ಇಂತಹ ಬರ್ಭರ ಕೃತ್ಯದ ನಂತರವೂ ದೇಶದ ಸಂವಿಧಾನ, ನೆಲದ ಕಾನೂನುಗಳ ಮೇಲೆ ಗೌರವವಿಟ್ಟು ಬಿಲ್ಕಿಸ್‌ ಮತ್ತು ಆಕೆಯ ಪತಿ ಕಾನೂನು ಹೋರಾಟ ನಡೆಸುತ್ತಾರೆ. ಮಾರ್ಚಿ ೩ ೨೦೦೨ ರಲ್ಲಿ ನಡೆದ ಈ ಘಟನೆಯಲ್ಲಿ ೧೪ ಜನರನ್ನು ಕೊಲ್ಲಲಾಗಿದೆ. ಬಿಲ್ಕಿಸ್‌ ಮತ್ತು ಆಕೆಯ ಪತಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನ್ಯಾಯಕ್ಕಾಗಿ ಮೊರೆ ಇಡುತ್ತಾರೆ. ದೇಶದ ಸರ್ವೋಚ್ಚ ನ್ಯಾಯಾಲಯ ಸಿ.ಬಿ.ಐ ಮೂಲಕ ತನಿಖೆಗೆ ಆದೇಶ ನೀಡುತ್ತದೆ ಮತ್ತು ೨೦೦೪ರಲ್ಲಿ ಪ್ರಕರಣದ ವಿಚಾರಣೆಯನ್ನು ಗುಜರಾತಿನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸುತ್ತದೆ. ಕಾರಣ ಕೇಳಬೇಕಿಲ್ಲ ಅಲ್ಲವೇ, ಬಿಲ್ಕಿಸ್‌ ಬಾನು ಆರೋಪಿಗಳ ಕಡೆಯಿಂದ ಬೆದರಿಕೆ ಎದುರಿಸುತ್ತಾಳಾದ್ದರಿಂದ. ೨೦೧೮ರ ಜನವರಿ ೨೧ರಂದು ಸಿ.ಬಿ.ಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಯು.ಡಿ.ಸಾಲ್ವಿಯವರು ಮುಂಬೈನಲ್ಲಿ ಇನ್‌ ಕ್ಯಾಮೆರಾ ವಿಚಾರಣೆ ನಡೆಸಿ ೧೩ ಜನರನ್ನು ಆಪರಾಧಿಗಳೆಂದು ಪ್ರಕಟಿಸಿ, ೧೧ ಜನರಿಗೆ ಜೀವಾವಧಿ ಶಿಕ್ಷೆ ವಿಧಿಸುತ್ತಾರೆ. ೨೦೧೭ ರಲ್ಲಿ ಬಾಂಬೇ ಹೈಕೋರ್ಟ್‌ ಈ ಶಿಕ್ಷೆಯನ್ನು ಎತ್ತಿ ಹಿಡಿಯಿತು.

೨೦೧೯ರಲ್ಲಿ ಬಿಲ್ಕಿಸ್‌ ಬಾನುಗೆ ೫೦ ಲಕ್ಷ ಪರಿಹಾರ ನೀಡಬೇಕೆಂದು ಸರ್ವೋಚ್ಛ ನ್ಯಾಯಾಲಯ ಆದೇಶಿಸಿದೆ. ೨೦೦೨ ರ ನರಮೇಧದ ನಂತರ ದೊರೆತ ಮೊದಲ ಪರಿಹಾರವದು. ಹಾಗೆ ಆದೇಶಿಸುವಾಗ ʼನಡೆಯಬಾರದ ಘಟನೆ ನಡೆದು ಹೋಗಿದೆ, ಆದರೀಗ ರಾಜ್ಯ ಸರಕಾರ ಅದಕ್ಕೆ ಪರಿಹಾರ ನೀಡಲೇಬೇಕುʼ ಎಂದು ಅಂದಿನ ಮುಖ್ಯ ನ್ಯಾಯಾಧೀಶರಾದ ರಂಜನ್‌ ಗೊಗೋಯ್‌, ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ, ಮತ್ತು ಸಂಜೀವ್‌ ಖನ್ನಾ ಹೇಳಿದ್ದರು.

ಈಗ ದೇಶ ೭೫ನೇ ಸ್ವಾತಂತ್ರ್ಯದ ಅಮೃತ ವರ್ಷಾಚರಣೆಯನ್ನು ಆಚರಿಸುತ್ತಿರುವಾಗ, ದೇಶದ ನೆಲದ ಕಾನೂನುಗಳನ್ನು, ನೆಲಕ್ಕೊತ್ತಿ ನಿಂತು, ಮಹಿಳೆಯರ ಘನತೆಯ ಬದುಕಿನ ಮಾರ್ಗಗಳನ್ನು ನಿರ್ಲಜ್ಜ, ನಿರ್ದಯ ತೀರ್ಮಾನಗಳ ಮೂಲಕ ಮುಚ್ಚುತ್ತ, ದೆಹಲಿಯ ಕೆಂಪು ಕೋಟೆಯ ಮೇಲೆ ನಿಂತು ಇನ್ನು ೨೫ ವರ್ಷಗಳ ನಂತರದ ಕನಸನ್ನು ಬಿತ್ತುವುದು ಆಷಾಡಭೂತಿತನವಲ್ಲವೇ?

ದೇಶದ ಮಹಿಳೆಯರ ಘನತೆಗೆ ಕುಂದುಂಟಾಗದಂತಹ ವ್ಯವಸ್ಥೆಯ ಕುರಿತು ಸ್ವಾತಂತ್ರ್ಯದ ʼಅಮೃತ ಮಹೋತ್ಸವʼದ ಧ್ವಜಾರೋಹಣ ಮಾಡಿ ಕೆಂಪು ಕೋಟೆಯ ಮೇಲೆ ಭಾಷಣ ಪ್ರಧಾನ ಮಂತ್ರಿಗಳು ಕುಟ್ಟುತ್ತಿರುವಾಗ ಅತ್ತ ಅವರ ತವರು, ಅವರು ಮುಖ್ಯಮಂತ್ರಿಯಾಗಿದ್ದಾಗಲೇ ನಡೆಸಿದ ಮಾನವ ಮಾರಣಹೋಮದ ರಾಜ್ಯದಲ್ಲಿ ಅತ್ಯಾಚಾರಿಗಳೆಂದು ನ್ಯಾಯಾಲಯದಲ್ಲಿ ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿದ್ದ ೧೧ ಜನರನ್ನು ಬಿಡುಗಡೆ ಮಾಡಲಾಗಿದೆ! ಶತಮಾನದ ಮುನ್ನೋಟದ ಕನಸು ಬಿತ್ತಿದ ನರೇಂದ್ರ ಮೋದಿಯವರ ಆಡಳಿತದಲ್ಲಿ ಇನ್ನು ಮುಂದೆ ಈ ದೇಶದಲ್ಲಿ ಮಹಿಳೆಯರ ಘನತೆಯನ್ನು ಗುರುತಿಸುವುದು ಹೀಗೆಂದು ಭಾವಿಸಬಹುದೇನೋ??

ಹನ್ನೊಂದು ಜನರಿಗೆ ಸಿ.ಬಿ.ಐ. ವಿಶೇಷ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಮುಂಬೈ ಹೈಕೋರ್ಟ್‌ ಕೂಡಾ ಎತ್ತಿ ಹಿಡಿದಿತ್ತು. ತಾನು ೧೫ ವರ್ಷ ಶಿಕ್ಷೆ ಅನುಭವಿಸಿದ ಕಾರಣದಿಂದ ತನ್ನನ್ನು ಬಿಡುಗಡೆ ಮಾಡಬೇಕೆಂದು ಅಪರಾಧಿಗಳಲ್ಲೊಬ್ಬ ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿದನಂತೆ!. ಅದನ್ನು ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯ ಗುಜರಾತ್‌ ಸರಕಾರಕ್ಕೆ ತಿಳಿಸಿತಂತೆ. ಅದಕ್ಕಾಗಿ ಸಮಿತಿಯೊಂದನ್ನು ನೇಮಕ ಮಾಡಿ ಅತ್ಯಾಚಾರಿಗಳಿಗೆ ಬಿಡುಗಡೆಯ ಭಾಗ್ಯ ಕರುಣಿಸಲಾಗಿದೆ. ಇದೇ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ ಅತಿ ಮುಖ್ಯ ಸಂಗತಿ ಜನವರಿ ೨೩, ೨೦೧೪ರಂದು ಕೇಂದ್ರ ಸರಕಾರ ಹೊರಡಿಸಿದ ಆದೇಶದ ಪ್ರಕಾರ (ಅನೆಕ್ಷ್ಚರ್‌ ೧/ಕಲಮು ೪ಸಿ) ʼಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆ ಮುಂತಾದ ಹೀನ ಕೃತ್ಯಗಳನ್ನೆಸಗಿ ಶಿಕ್ಷೆಗೆ ಒಳಗಾದವರು ಪೂರ್ಣ ಪ್ರಮಾಣದ ಶಿಕ್ಷೆಯನ್ನು ಅನುಭವಿಸಬೇಕು. ಅವರು ಕ್ಷಮಾದಾನಕ್ಕೆ ಅರ್ಹರಲ್ಲʼ. ಇದು ಕೇಂದ್ರ ಸರಕಾರ ಹೊರಡಿಸಿದ ಆದೇಶ.

ನೆಲದ ಕಾನೂನಿಗೆ ಮಾನ್ಯತೆ ಇಲ್ಲ, ಸಂವಿಧಾನಕ್ಕೆ ಗೌರವವಿಲ್ಲ, ತಾವೇ ಆಡಿದ ಮಾತಿಗೂ ಬೆಲೆ ಕೊಟ್ಟುಕೊಳ್ಳದ ಇಂತಹ ನಿರ್ಲಜ್ಜರನ್ನು ದೇಶ ರಕ್ಷಕರೆಂದು ಕರೆಯುವುದಕ್ಕಿಂತ ವಿಪರ್ಯಾಸವಿನ್ನೊಂದಿರಲು ಸಾಧ್ಯವೇ?? ಅಥವಾ ದೇಶದಾದ್ಯಂತ ಹಿಂದುತ್ವವಾದೀ ಧರ್ಮ ನಶೆಯಲ್ಲಿ ತೇಲಾಡುತ್ತಿರುವ ಮಂತ್ರಿ ಮಹೋದಯರು, ಶಾಸಕರು, ಬಿ.ಜೆ.ಪಿ.ಯ ನಾಯಕರುಗಳು ಕೊಡುತ್ತಿರುವ ಪ್ರಚೋದನಕಾರಿ ಹೇಳಿಕೆಗಳ ಜಾರಿಗೆ ಬೇಕಾದ ಸಾಮೂಹಿಕ ಅತ್ಯಾಚಾರಿ ಪಡೆಗಳ ನಿರ್ಮಾಣ ನಡೆಯುತ್ತಿರಬಹುದು ಎಂದು ಭಾವಿಸಬಹುದೇ?

Donate Janashakthi Media

Leave a Reply

Your email address will not be published. Required fields are marked *