ಬಿಜೆಪಿ ಬತ್ತಳಿಕೆಯಲ್ಲಿನ ಚುನಾವಣಾ ಅಸ್ತ್ರಗಳು ಎಲ್ಲಾ ಖಾಲಿಯಾದಂತೆ ಕಾಣುತ್ತದೆ. `ಆಪರೇಷನ್ ಕಮಲ’ ದಂತಹ ಅಸ್ತ್ರಗಳು ದೂರದ ಪ್ರಯೋಗಕ್ಕೆ ಮೀಸಲಿಡುವುದು ಬಿಜೆಪಿಯ ಸಂಪ್ರದಾಯ. ಉಪ ಚುನಾವಣೆಗಳಲ್ಲಿ ಬಳಸಲು ಯಡಿಯೂರಪ್ಪ ಬೇರೆ ತಂತ್ರಗಳ ಹುಡುಕಾಟದಲ್ಲಿರುತ್ತಾರೆ. ಈಗ ಅವರು ಜಾತಿ ಆಧಾರಿತ ನಿಗಮ/ಪ್ರಾದಿಕಾರಿಗಳನ್ನು ಸ್ಥಾಪಿಸಿ ನಿರ್ದಿಷ್ಟ ಸಮೂಹಗಳನ್ನು ಸೆಳೆಯುವ ಗಂಭೀರ ಪ್ರಯತ್ನದಲ್ಲಿ ಮುಳುಗಿದ್ದಾರೆ.
ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹತ್ತಿರ ಬಂದಾಗ `ಕಾಡುಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪಿಸುವ ಆದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದರು. ಈಗ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹತ್ತಿರ ಬಂದಿದೆ. ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯೂ ಶೀಘ್ರದಲ್ಲಿ ನಡೆಯಬೇಕಾಗಿದೆ. ಹೀಗಾಗಿ ಯಡಿಯೂರಪ್ಪನವರು ತಮ್ಮ ನಿಗಮ/ಪ್ರಾದಿಕಾರಗಳ ಅಸ್ತ್ರಗಳನ್ನು ಧರಿಸಿಕೊಂಡು ಸಜ್ಜಾಗುತ್ತಿದ್ದಾರೆ.
ಚುನಾವಣೆ ನಡೆಯಬೇಕಾಗಿರುವ ಮೂರೂ ಕಡೆಗಳಲ್ಲಿ ಮರಾಠ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ಮರಾಠಿಗರು ಎನ್ನುವ ಕಾರಣಕ್ಕೆ ಗಡಿ ವಿವಾದ ಪ್ರಶ್ನೆಯನ್ನು ಗಣನೆಗೆ ತೆಗೆದುಕೊಂಡರೆ ಅಪಾಯವಿದೆ ಎಂಬುದು ತಂತ್ರಗಾರಿ ಯಡಿಯೂರಪ್ಪನ ಲೆಕ್ಕಚಾರ. ಅವರ ಮತಗಳನ್ನು ಗಣನೀಯ ಸಂಖ್ಯೆಯಲ್ಲಿ ಬುಟ್ಟಿಗೆ ಹಾಕಿಕೊಳ್ಳಲು ಅವರಿಗೊಂದು ಅಭಿವೃದ್ಧಿ ಪ್ರಾಧಿಕಾರ ದಾನ ಮಾಡಲು ಯಡಿಯೂರಪ್ಪ ಮುಂದಾಗಿದ್ದಾರೆ. ಇದರಿಂದಾಗಿ ಕನ್ನಡಪರ ಸಂಘಟನೆಗಳು ಆವೇಶಕ್ಕೆ ಒಳಗಾಗಿ ಬೀದಿಗಿಳಿಯುವ ಬೆದರಿಕೆ ಹಾಕಲಾರಂಭಿಸಿವೆ.
ಈ ಮೂರೂ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತರ ಪ್ರಾಬಲ್ಯವೂ ಗಣನೀಯವಾಗಿದೆ. ಇವರ ಮತಗಳನ್ನು ಖಾತ್ರಿ ಮಾಡಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ವೀರಶೈವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಹೊರಡಿಸಿದ್ದಾರೆ. ಲಿಂಗಾಯತ ಧರ್ಮಕ್ಕಾಗಿ ಹೋರಾಡುತ್ತಿರುವ ಕೆಲವು ಮಠಾಧಿಪತಿಗಳು ನಿಗಮದ ಹೆಸರು `ಲಿಂಗಾಯತ ಅಭಿವೃದ್ಧಿ ನಿಗಮ’ ಎಂದಾಗಬೇಕು ಎಂದು ಒತ್ತಾಯಿಸಿದ್ದಾರೆ!.
ಮುಖ್ಯಮಂತ್ರಿ ಯಡಿಯೂರಪ್ಪನವರ ಈ ನಡೆ ಅವರಿಗೆ ಶೋಭೆ ತರಲಾರದು. ಚುನಾವಣೆಗಳಲ್ಲಿ ಮತಗಳನ್ನು ಗಿಟ್ಟಿಸಿಕೊಂಡು ಮತದಾರರಿಗೆ ದ್ರೋಹ ಎಸಗುವ ಈ ತಂತ್ರಗಾರಿಕೆ ಅಪೇಕ್ಷಣೀಯವಲ್ಲ. ಜಾತಿ ಆಧಾರಿತ ನಿಗಮ/ಪ್ರಾಧಿಕಾರಗಳಿಂದ ಯಾವುದೇ ಸಮುದಾಯ ಅಭಿವೃದ್ಧಿ ಹೊಂದಿಲ್ಲ. ಅಂತಹ ಜಾತಿ ಸಮುದಾಯಗಳ ಮುಖಂಡರು ಮಾತ್ರ ಇವುಗಳ ಲಾಭ ಪಡೆಯುತ್ತಾರೆ.
ನಮ್ಮ ಸಂವಿಧಾನದ ಆಶಯಗಳಂತೆ ಅಸ್ಪೃಶ್ಯರು ಎಂದು ಪರಿಗಣಿಸಲ್ಪಡುವ ಜನರಿಗಾಗಿ ಮಾತ್ರ ಮೀಸಲಾತಿ, ನಿಗಮ/ಪ್ರಾಧಿಕಾರಿಗಳ ಸೌಕರ್ಯ ಒದಗಿಸಬೇಕು. ಆ ಮೂಲಕ ಅವರಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಬೇಕು. ಉಳಿದಂತೆ ಎಲ್ಲಾ ಜಾತಿಗಳಲ್ಲಿರುವ ಆರ್ಥಿಕವಾಗಿ ತೀರಾ ಹಿಂದುಳಿದ ಎಲ್ಲಾ ಸಮುದಾಯಗಳ ಜನತೆಗೆ ಮಾತ್ರ ಇಂತಹ ವಿಶೇಷ ನೆರವು ಯೋಜನೆಗಳನ್ನು ಅನ್ವಯಿಸಬೇಕು. ಜನಸಮೂಹಗಳಿಗೆ ಇಂತಹ ಆಸೆ ಆಮಿಷಗಳನ್ನು ವೊಡ್ಡಿ ಚುನಾವಣೆಗಳಲ್ಲಿ ಗೆಲ್ಲಲು ಪ್ರಯತ್ನಿಸುವವರನ್ನು ಅವರು ಯಾರೇ ಆಗಿರಲಿ, ಅವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಅರ್ಹತೆಯನ್ನ ಕಿತ್ತುಹಾಕುವ ಕಾನೂನು ರಚನೆಯಾಗಬೇಕು. ಯಡಿಯೂರಪ್ಪ, ಮೋದಿ ಅಂತವರ ನಡೆಯ ಹಿಂದಿನ ಮೋಸವನ್ನು ಮತದಾರರು ಅರಿತುಕೊಳ್ಳಬೇಕು.