ಉಡುಪಿ: ಜಿಲ್ಲೆಯ ಕುಂದಾಪುರದಲ್ಲಿ ನಡೆದ 8ನೇ ರಾಜ್ಯ ಸಮ್ಮೇಳನದಲ್ಲಿ ಇಸ್ರೆಲ್‌ನಿಂದ ದಾಳಿಗೆ ಒಳಗಾದ ಪ್ಯಾಲೆಸ್ತೀನ್‌ನ ‘ಫ್ರೀಡಂ ಥಿಯೇಟರ್’ ಕಲಾವಿದರ ಪರವಾಗಿ ‘ಸಮುದಾಯ ಕರ್ನಾಟಕ’ ನಿರ್ಣಯ ಕೈಗೊಂಡಿದ್ದು, ಕಲಾವಿದರ ಮೇಲಿನ ದಾಳಿಯನ್ನು ಶನಿವಾರ ತೀವ್ರವಾಗಿ ಖಂಡಿಸಿದೆ. ಸಮುದಾಯ ಕರ್ನಾಟಕವು ಫ್ರೀಡಂ ಥಿಯೇಟರ್ ಕಲಾವಿದರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಹೇಳಿದೆ.
ಕುಂದಾಪುರದಲ್ಲಿ ‘ಸಮುದಾಯ ಕರ್ನಾಟಕ’ದ ಎರಡು ದಿನಗಳ 8 ನೇ ರಾಜ್ಯ ಸಮ್ಮೇಳನ ಡಿಸೆಂಬರ್ 16ರ ಶನಿವಾರ ಚಾಲನೆಗೊಂಡಿದೆ. ಸಮುದಾಯ ಕರ್ನಾಟಕದ ವೆಂಕಟೇಶ್ ಪ್ರಸಾದ್ ಅವರು ಪ್ಯಾಲೆಸ್ತೀನ್ ಪರವಾಗಿ ನಿರ್ಣಯ ಮಂಡಿಸಿದ್ದು, ಜೋಸೆಫ್ ಧಾರವಾಡ ಅವರು ಅನುಮೋದನೆ ನೀಡಿದರು.
ಇದನ್ನೂ ಓದಿ: ಐಎಎಸ್ ರೋಹಿಣಿ ಸಿಂಧೂರಿ ವಿರುದ್ಧದ ಪೋಸ್ಟ್ ಡಿಲೀಟ್ ಮಾಡಿ – ಐಪಿಎಸ್ ಡಿ. ರೂಪಾಗೆ ಸುಪ್ರೀಂ ಆದೇಶ
ಪ್ಯಾಲೆಸ್ತೀನ್‌ನಲ್ಲಿರುವ ಫ್ರೀಡಂ ಥಿಯೇಟರ್ 2006 ರಲ್ಲಿ ಹುಟ್ಟಿಕೊಂಡ ಒಂದು ರಂಗಸಂಘಟನೆಯಾಗಿದೆ. ಪ್ಯಾಲೆಸ್ತೀನ್‌ನ ಜೆನಿನ್ ನಿರಾಶ್ರಿತರ ಕ್ಯಾಂಪಿನಲ್ಲಿ ಕೆಲಸ ಮಾಡುತ್ತಿರುವ ಈ ರಂಗ ತಂಡವು, ಅಲ್ಲಿನ ಜನರ, ಮಕ್ಕಳ ಜೊತೆ ಬೆರೆಯುತ್ತಾ ಹಿಂಸೆಯ ವಿರುದ್ಧ ಒಂದು ಸಾಂಸ್ಕೃತಿಕ ಪ್ರತಿರೋಧವನ್ನು ಘನತೆಯ ಬದುಕಿಗಾಗಿ ಕಟ್ಟಿಕೊಡುತ್ತಿರುವ ಸಂಘಟನೆಯಾಗಿದೆ.
“ತೀರ ಇತ್ತೀಚಿಗೆ ಇಸ್ರೇಲ್ ಪ್ಯಾಲೆಸ್ತೇನ್ ಸಂಘರ್ಷ ಉಲ್ಬಣವಾಗಿರುವ ಈ ಸಂದರ್ಭದಲ್ಲಿ, ಪ್ಯಾಲೆಸ್ಟೇನ್ ಮೇಲೆ ನಿಲ್ಲದ ಇಸ್ರೇಲ್ ದಾಳಿಯ ಸಂದರ್ಭದಲ್ಲಿ ಫ್ರೀಡಂ ಥಿಯೇಟರ್ ಮೇಲೆಯೂ ದಾಳಿಗಳಾಗುತ್ತಿವೆ. ಇದೇ ತಿಂಗಳ 13 ರಂದು ಫ್ರೀಡಂ ಥಿಯೇಟರ್‌ನ ನಟರ ಮೇಲೆ ಹಲ್ಲೆಗಳಾಗಿದ್ದು ಮುಖ್ಯ ನಟರೊಬ್ಬರ ಬಂಧನವಾಗಿದೆ. 8ನೇ ರಾಜ್ಯ ಸಮ್ಮೇಳನದ ಈ ಸಂದರ್ಭದಲ್ಲಿ ನಾವು ಸಮುದಾಯ ಕರ್ನಾಟಕ ಒಂದು ಸಾಂಸ್ಕೃತಿಕ ಸಂಘಟನೆಯಾಗಿ ಫ್ರೀಡಂ ಥಿಯೇಟರ್ ಮೇಲಿನ ಹಲ್ಲೆಯನ್ನು ಖಂಡಿಸುತ್ತೇವೆ ಮತ್ತು ಫ್ರೀಡಂ ಥಿಯೇಟರ್‌ನ ಜೊತೆಗೆ ನಾವು ನಿಲ್ಲುತ್ತೇವೆ” ಎಂದು ನಿರ್ಣಯ ಹೇಳಿದೆ.
ಫ್ರೀಡಂ ಥಿಯೇಟರ್ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಲೇ ಇವೆ. ಸಂಸ್ಥೆಯ ಮುಖ್ಯಸ್ಥರಲ್ಲೊಬ್ಬರಾದ ಜ್ಯೂಲಿಯಾನೋ 2011 ರಲ್ಲಿ ತಾಲೀಮು ಮುಗಿಸಿ ಹೊರಬರುತ್ತಲೇ ಗುಂಡೇಟಿಗೆ ಹತರಾಗಿದ್ದರು. ಅದಾಗ್ಯೂ ಧೃತಿಗೆಡದ ಫ್ರೀಡಂ ಥಿಯೇಟರ್ ಈಗಲೂ ಪ್ಯಾಲೆಸ್ಟೇನಿನ ಆ ಭಾಗದ ಸಮುದಾಯದ ನೋವಿಗೆ ದನಿಯಾಗಿ ನಿಂತಿದೆ. 2015 ರಲ್ಲಿ ಭಾರತಕ್ಕೆ ಬಂದಿದ್ದ ತಂಡವು ದೆಹಲಿಯ ಜನನಾಟ್ಯಮಂಚ್ ಜೊತೆಗೆ, ಸಮುದಾಯ ಕರ್ನಾಟಕವೂ ಭಾಗವಾಗಿ ಬೆಂಗಳೂರಿನಲ್ಲಿ ಹಲವು ಪ್ರದರ್ಶನಗಳನ್ನು ಫ್ರೀಡಂ ಜಾಥಾ ಹೆಸರಿನಲ್ಲಿ ಆಯೋಜಿಸಿತ್ತು.
ವಿಡಿಯೊ ನೋಡಿ: ಸಮುದಾಯ ಕರ್ನಾಟಕ 8ನೇ ರಾಜ್ಯ ಸಮ್ಮೇಳನ ಉದ್ಘಾಟನೆ | ರಾಮ ಧಾನ್ಯ ಚರಿತ್ರೆ | ತಾಳ ಮದ್ದಳೆ