ಮನುವ್ಯಾಧಿಗ್ರಸ್ಥ ಸಂಸದ ಮುನಿಸ್ವಾಮಿ ವಿರುದ್ಧ ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ

ಬೆಂಗಳೂರು: ಹಣೆಗೆ ಬೊಟ್ಟುಇಟ್ಟಿಲ್ಲವೆಂದು ಹೀಯಾಳಿಸಿದ ಕೋಲಾರದ ಸಂಸದ ಮುನಿಸ್ವಾಮಿ ಮಹಿಳೆಯರ ಕ್ಷಮೆ ಕೇಳಬೇಕು. ಹಣೆಗೆ ಬೊಟ್ಟು ಇಟ್ಟಿಲ್ಲ ಎಂಬ ಕಾರಣಕ್ಕೆ, ಗಂಡ ಬದುಕಿಲ್ವಾ ಎಂದು ಹೀಯಾಳಿಸಿ ಮಹಿಳೆಯ ಘನತೆಗೆ ಕುಂದುಂಟು ಮಾಡಿ ನಿಂದಿಸಿರುವ ಬಿಜೆಪಿ ಸಂಸದ ಮುನಿಸ್ವಾಮಿ ನಡೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸಿದೆ.

ಇದನ್ನು ಓದಿ: ʻʻಬೊಟ್ಟು ಯಾಕಿಟ್ಟಿಲ್ಲʼʼ : ಮುನಿಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು, ದೇಶದಲ್ಲಿ ಇರುವ ಪ್ರತಿಯೊಬ್ಬರೂ ಸ್ವತಂತ್ರವಾಗಿ ಬದುಕುವ ಹಕ್ಕನ್ನು ನಮ್ಮ ದೇಶದ ಸಂವಿಧಾನ ನೀಡಿದೆ. ಇದೇ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಸಂಸದರಾದ ಮುನಿಸ್ವಾಮಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಒಬ್ಬ ಹೆಣ್ಣು ಮಗಳ ಜೊತೆ ಹೀನಾಯವಾಗಿ‌ ವರ್ತಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ನೀಡಿದ‌ ಆಯ್ಕೆ ಸ್ವಾತಂತ್ರ್ಯದ ವಿರುದ್ಧ ಮನುವ್ಯಾಧಿಗ್ರಸ್ತ ಭಾರತೀಯ ಜನತಾ ಪಕ್ಷದವರು ಪ್ರತಿದಿನ ಒಂದಲ್ಲ ಒಂದು ರೀತಿಯ ಅವಹೇಳನಕಾರಿಯಾಗಿ ಮಾತಾಡುತ್ತಲೇ ಇದ್ದಾರೆ. ಇದಕ್ಕೆ ಅವಕಾಶ ಕೊಟ್ಟವರಾರು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪ್ರಶ್ನಿಸಿದೆ.

ಇದನ್ನೂ ಓದಿ : ನಿನ್ನ ಗಂಡ ಬದುಕಿದ್ದಾನೆ ತಾನೇ? : ಸಾರ್ವಜನಿಕ ಸ್ಥಳದಲ್ಲಿ ಮಹಿಳೆಗೆ ನಿಂದಿಸಿದ ಬಿಜೆಪಿ ಸಂಸದ ಮುನಿಸ್ವಾಮಿ

ಬಿಜೆಪಿಯು ಪುರುಷ ಪ್ರಧಾನ ಮೌಲ್ಯಗಳನ್ನು ವೈಭವೀಕರಿಸಿ ಮಹಿಳೆಯರ ಮೇಲೆ ಮನು ಧರ್ಮವನ್ನು ಹೇರಲು ಹೊರಟಿರುವುದು ಸ್ಪಷ್ಟವಿದೆ. ಮಹಿಳಾ ದಿನದಂದೇ ಈ ರೀತಿಯ ದುರ್ವರ್ತನೆ ಮಾಡಿದ ಸಂಸದರು ಆ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಸಂವಿಧಾನ ವಿರೋದಿ ಸಂಸದ ಮುನಿಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಮತ್ತು ಬಹಿರಂಗವಾಗಿ ಮಹಿಳೆಯರ ಕ್ಷಮೆಯಾಚಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ, ಲಲಿತಶೆಣೈ, ಬಸಮ್ಮ, ಪಾರ್ವತಿ, ಗೀತಾ, ಮಮತಾ ಯಜಮಾನ್, ಮಧುಭೂಷಣ, ಮಲ್ಲಿಗೆ, ಗೌರಿ, ಪಾಪಮ್ಮ ಮತ್ತಿತರರು ಭಾಗವಹಿಸಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

 

 

Donate Janashakthi Media

Leave a Reply

Your email address will not be published. Required fields are marked *