ಮೈಸೂರು: ಸಚಿವ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ ಎಂದಿರುವ ಸಚಿವ ಎಸ್. ಟಿ. ಸೋಮಶೇಖರ್, ಸಂಪುಟ ವಿಸ್ತರಣೆ ವಿಚಾರದಲ್ಲಿ ಮಾತನಾಡುವ ಅಧಿಕಾರ ತಮಗಿಲ್ಲ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಈಗಾಗಲೇ ತಿಳಿಸಿದ್ದೇನೆ ಎಂದರು. ಚುನಾವಣೆ ಪ್ರಚಾರ ಮಾಡುವುದು ಹಾಗೂ ಗೆಲುವು, ಸೋಲಿನ ಲೆಕ್ಕ ಹಾಕುವುದಷ್ಟೇ ನಮ್ಮ ಕೆಲಸ ಎಂದು ಸೋಮಶೇಖರ್ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವ ಅಧಿಕಾರವೇ ನನಗಿಲ್ಲ. ಹಾಗಿದ್ದರೂ ಮಾಧ್ಯಮದ ಮಾತು ಕೇಳಿ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರೆ ನನ್ನ ಮಂತ್ರಿ ಸ್ಥಾನವೇ ಹೋಗುತ್ತದೆ ಎಂದು ಸೋಮಶೇಖರ್ ಹೇಳಿದರು. ನನಗೆ ಎಷ್ಟು ಅಧಿಕಾರ ಇದೆಯೋ ಅಷ್ಟಕ್ಕೆ ಮಾತ್ರ ಉತ್ತರಿಸುತ್ತೇನೆ. ಹೀಗಾಗಿ, ಮಂತ್ರಿಮಂಡಲದ ಪ್ರಶ್ನೆ ಕೇಳಬೇಡಿ ಎಂದು ಸೋಮಶೇಖರ್ ಮಾಧ್ಯಮಗಳಿಗೆ ಮನವಿ ಮಾಡಿದರು.
ಉಪ ಚುನಾವಣೆಯಲ್ಲಿ ಗೆಲುವು ನಮ್ಮದೇ
ಶಿರಾ ಮತ್ತು ಆರ್.ಆರ್ ನಗರ ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಎಸ್. ಟಿ. ಸೋಮಶೇಖರ್ , ನಾವು ಎರಡೂ ಕ್ಷೇತ್ರಗಳಲ್ಲಿ ಭರ್ಜರಿಯಾಗಿ ಗೆಲ್ಲಲಿದ್ದೇವೆ ಎಂದರು. ಶಿರಾ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಈಗಾಗಲೇ ಸೋಲೊಪ್ಪಿಕೊಂಡಿದ್ದಾರೆ. ಇವಿಎಂ ಯಂತ್ರಗಳ ಮೇಲೆ ಆರೋಪ ಮಾಡುವ ಮೂಲಕ ಪರೋಕ್ಷವಾಗಿ ಅವರು ಸೋಲು ಒಪ್ಪಿಕೊಂಡಿದ್ದಾರೆ. ಸೋಲಿನ ಹತಾಶೆಯಲ್ಲಿ ಇವಿಎಂ ಯಂತ್ರಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರ ಹೇಳಿ ನೋಡಿದರೆ ಬಹುಶಃ ರಿಸಲ್ಟ್‌ವರೆಗೆ ಕಾಯುವ ತಾಳ್ಮೆ ಅವರಿಗಿಲ್ಲ ಎನಿಸುತ್ತದೆ ಎಂದು ಸೋಮಶೇಖರ್ ಹೇಳಿದರು.
ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅತ್ಯಧಿಕ ಅಂತರದಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸೋಮಶೇಖರ್, ಮುನಿರತ್ನ ಮಾಡಿರುವ ಅಭಿವೃದ್ಧಿ ಕಾರ್ಯಗಳ ಎದುರು ಯಾರ ತಂತ್ರವೂ ನಿಲ್ಲುವುದಿಲ್ಲ ಎಂದರು. ಕಾಂಗ್ರೆಸ್ ಯಾವುದೇ ರೀತಿಯ ತಂತ್ರ ಮಾಡಿದರೂ ಜನ ಬಿಜೆಪಿ ಪರವಾಗಿದ್ದಾರೆ. ಅಭಿವೃದ್ಧಿ ಕೆಲಸಗಳು ಬಿಜೆಪಿಯ ಕೈ ಹಿಡಿಯಲಿವೆ ಎಂದು ಸೋಮಶೇಖರ್ ಹೇಳಿದರು.