ಹೊಸಪೇಟೆ: ಬಳ್ಳಾರಿ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಮಾಡಿ ಜನರ ಸಂಚಾರ ನಿರ್ಬಂಧ ಮಾಡಿರುವುದು ಕಾನೂನು ಬಾಹಿರವಾಗಿರುವುದರಿಂದ ತಕ್ಷಣವೇ ಹಿಂದಕ್ಕೆ ಪಡೆಯಬೇಕು ಎಂದು ಅಖಿಲ ಭಾರತ ವಕೀಲರ ಸಂಘದ ಜಿಲ್ಲಾ ಮುಖಂಡರಾದ ಎ ಕರುಣಾನಿಧಿ, ಕೆ ಸಿ ಶರಣಪ್ಪ, ಕೆ ಪ್ರಹ್ಲಾದ್, ಬಿ ಮಹೇಶ್ ಕಲ್ಯಾಣಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿಯಲ್ಲಿ ಜನರ ಸಂಚಾರವನ್ನು ನಿಯಂತ್ರಣ ಮಾಡಲು ಅವಕಾಶ ಇದೆಯೇ ಹೊರತು ನಿರ್ಬಂಧಿಸಲು ಅವಕಾಶ ಇಲ್ಲ. ಆದಾಗ್ಯೂ ಸಹ ಜಿಲ್ಲಾಡಳಿತವು ಜನ ಸಂಚಾರವನ್ನು ಸಂಪೂರ್ಣ ನಿರ್ಬಂಧ ಮಾಡಿರುವುದು ಜನರ ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳ ಕಗ್ಗೊಲೆಯಾಗಿದೆ ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ: ಕೋವಿಡ್‌ನಿಂದ 600 ಶಿಕ್ಷಕರು, 175 ಜನ ವಕೀಲರ ಸಾವು
ಸ್ಥಳೀಯ ಜನ ಪ್ರತಿನಿಧಿಗಳನ್ನೊಳಗೊಂಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸದೇ, ಜಿಲ್ಲೆಯ ವಾಸ್ತವ ಸಂಗತಿಗಳನ್ನು ಪರಿಗಣಿಸದೆ, ನಿರ್ದಿಷ್ಟವಾಗಿ ಪರಿಹಾರ ಯೋಜನೆಗಳನ್ನು ರೂಪಿಸದೇ ಸಂಪೂರ್ಣ ಲಾಕ್‌ಡೌನ್ ಘೋಷಿಸಿರುವುದು ವಿಪತ್ತು ನಿರ್ವಹಣಾ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಜನರ ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳೂ ಸಹ ಅಗತ್ಯವಾದವುಗಳೇ ಆಗಿವೆ. ಆದ್ದರಿಂದಲೇ ಅವುಗಳನ್ನು ಮೂಲಭೂತ ಹಕ್ಕುಗಳು ಎಂದು ಕರೆಯಲಾಗಿದೆ. ಜನರು ಕಾನೂನಿನ ಆಡಳಿತ ಬಯಸುತ್ತಾರೆ ವಿನಃ ಕಾನೂನಿನ ಹೆಸರಿನಲ್ಲಿ ನಡೆಸುವ ಅಧಿಕಾರಸ್ಥರ ಆಡಳಿತವನ್ನಲ್ಲ ಎಂಬುದನ್ನು ಜಿಲ್ಲಾಡಳಿತ ಮರೆಯಬಾರದು ಎಂದು ಅವರು ತಿಳಿಸಿದ್ದಾರೆ.
ಕೋವಿಡ್-19 ನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿರುವ ಸರ್ಕಾರ ಈವರೆಗೆ ಕರೊನಾ ರೋಗದಿಂದ ಮೃತಪಟ್ಟವರ ಕುಟುಂಬಗಳಿಗೇಕೆ ಪರಿಹಾರ ನೀಡಿಲ್ಲ ಎಂದು ಪ್ರಶ್ನಿಸಿರುವ ಅವರು ಜನ ಸಂಚಾರ ನಿರ್ಬಂಧ ಮಾಡಲು ಮೇಲ್ಕಂಡ ಕಾಯ್ದೆಗಳಲ್ಲಿನ ದಂಡ ಮತ್ತು ಶಿಕ್ಷೆಯ ಕಲಂ ಗಳನ್ನು ಮಾತ್ರ ಜಾರಿಗೊಳಿಸಲು ಮುಂದಾಗಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದಿರುವ ಅವರು ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಕೇವಲ ಪ್ರಚಾರದ ತಂತ್ರವಾಗಿದ್ದು, ಸರ್ಕಾರ ಆದಾಯ ತೆರಿಗೆ ವಿನಾಯಿತಿ ಹೊಂದಿದ ಎಲ್ಲಾ ಕುಟುಂಬಗಳಿಗೆ ಮಾಸಿಕ 10,000/- ರೂ ಗಳು ನೇರ ನಗದು ಪರಿಹಾರವನ್ನು ಕನಿಷ್ಠ 6 ತಿಂಗಳವರೆಗೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇದನ್ನು ಓದಿ: ಕೋವಿಡ್ ನಿಭಾವಣೆಯಲ್ಲಿ ವಿಫಲರಾದ ಸರಕಾರದ ವಿರುದ್ಧ ಆಕ್ರೋಶಗೊಂಡ ರೈತ-ಕಾರ್ಮಿಕರು
ಕರ್ನಾಟಕ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿಯಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರ್ಬಂಧಿಸಲು ಅವಕಾಶವಿಲ್ಲ, ಆದರೆ ಸರ್ಕಾರ ಸಿಆರ್‌ಪಿಸಿ ಕಲಂ 144 ಬಳಸಿ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಿರುವುದು ಜಿಲ್ಲೆಯಲ್ಲಿ ಉಸಿರುಗಟ್ಟುವ ವಾತಾವರಣ ಸೃಷ್ಟಿಸಿದೆ. ಈ ಕುರಿತಂತೆ ಜಿಲ್ಲಾಡಳಿತ ವಾಸ್ತವ ಸಂಗತಿಗಳನ್ನು ಪರಿಗಣಿಸದೆ ಯಾಂತ್ರಿಕವಾಗಿ ಜಾರಿಗೊಳಿಸಿರುವುದು ಸರಿಯಾದ ಕ್ರಮವಲ್ಲ, ಆದ್ದರಿಂದ ನಿಷೇಧಾಜ್ಞೆಯನ್ನು ಮರುಪರಿಶೀಲನೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕರೊನಾ ನಿಯಂತ್ರಣವನ್ನು ಕೇವಲ ಆಡಳಿತದ ಪ್ರಶ್ನೆಯಾಗಿ ನೋಡದೇ ರೋಗಿಗಳಿಗೆ ಆತ್ಮಸ್ಥೈರ್ಯ ಹಾಗೂ ಮನೋಬಲವನ್ನು ತುಂಬುವ ದಿಸೆಯಲ್ಲಿ ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಜನತೆಯನ್ನು ಸಾಮಾಜಿಕವಾಗಿ ಭಾಗವಹಿಸುವಂತೆ ಮಾಡಿದಲ್ಲಿ ಮಾತ್ರವೇ ಕರೊನ ಬಿಕ್ಕಟ್ಟಿನ್ನು ಹಿಮ್ಮೆಟ್ಟಿಸಲು ಸಾಧ್ಯ. ಈ ದಿಸೆಯಲ್ಲಿ ಜಿಲ್ಲಾಡಳಿತ ಮುಂದಾಗಬೇಕು ಎಂದು ಅವರು ವಿನಂತಿಸಿದ್ದಾರೆ.